ಕೋಲ್ಕತಾ, ಸೆ. 24: ಭಾರತೀಯ ಚುನಾವಣಾ ಆಯೋಗ (ECI) ಮತ್ತು ಅದರ ಮುಖ್ಯಸ್ಥ ಜ್ಞಾನೇಶ್ ಕುಮಾರ್ (Gyanesh Kumar) ಅವರಿಗೆ ಸಂಬಂಧಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿವಾದವು ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಕಾರಣ ಸಿಕ್ಕಂತಾಗಿದೆ. ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ತೆಗೆದುಕೊಂಡ ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ʼಇಂಡಿಯನ್ ಎಕ್ಸ್‌ಪ್ರೆಸ್ʼ ಸುದ್ದಿ ವರದಿ ಮಾಡಿದ ನಂತರ ಈ ವಿವಾದ ಭುಗಿಲೆದ್ದಿದೆ.
ಚುನಾವಣಾ ಪ್ರಕ್ರಿಯೆಯನ್ನು, ಚುನಾವಣಾ ಆಯೋಗವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ ಎಂದು ಮಮತಾ ಬ್ಯಾನರ್ಜಿ ಸೇರಿ ವಿಪಕ್ಷ ನಾಯಕರು ಆರೋಪಿಸಿದ್ದಾರೆ. ವಿವಾದ ಭುಗಿಲೆದ್ದ ಕೆಲವೇ ಗಂಟೆಗಳ ನಂತರ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ, ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು. ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳು ಶೀಘ್ರದಲ್ಲೇ ಸಭೆ ಸೇರಲಿವೆ ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಹೇಳಿಕೆ:
“ಹೊಸ ರೀತಿಯ ಜನಾಂದೋಲನ ನಡೆಯಬೇಕು. ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರ (CEC) ಕುರ್ಚಿಯಲ್ಲಿ ಇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ. ಇಂಡಿಯಾ ಒಕ್ಕೂಟದ ಸದಸ್ಯರು ಮತ್ತು ಇತರ ಪ್ರಾದೇಶಿಕ ಪಕ್ಷಗಳು ಈ ಹೋರಾಟವನ್ನು ಒಟ್ಟಾಗಿ ನಡೆಸಲಿವೆ. ಚಂಡಮಾರುತ ಬರುತ್ತದೆ ಎಂದು ನಾನು ಹೇಳಿದ್ದೆ. ಅದು ಈಗಾಗಲೇ ಬಂದಿದೆ” ಎಂದು ಬ್ಯಾನರ್ಜಿ ಹೇಳಿದ್ದಾರೆ. ಕುಮಾರ್ ಅವರನ್ನು ಬಂಧಿಸಬೇಕು ಮತ್ತು ಎಸ್ಐಆರ್ ಪೂರ್ವ ಚುನಾವಣಾ ದತ್ತಾಂಶದ ಆಧಾರದ ಮೇಲೆ ಪಶ್ಚಿಮ ಬಂಗಾಳದಲ್ಲಿ ಹೊಸ ಚುನಾವಣೆಗಳನ್ನು ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗದ ಭಿನ್ನಾಭಿಪ್ರಾಯ ವಿವಾದ: ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನಿರ್ಣಯ ಮಂಡಿಸಲು ಸಿದ್ಧತೆ
ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಕಾರ್ಯಕರ್ತರು ಶೀಘ್ರದಲ್ಲೇ ಬೀದಿಗಿಳಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. “ಈ ಕಳ್ಳರ ಹಿಡಿತದಿಂದ ನಮ್ಮ ಪ್ರಜಾಪ್ರಭುತ್ವವನ್ನು ಮರಳಿ ಪಡೆಯುವವರೆಗೆ ಎಲ್ಲರೂ ಬೀದಿಗಿಳಿಯಲಿದ್ದಾರೆ” ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಎಕ್ಸ್‌ನಲ್ಲಿ ಬರೆದಿದ್ದಾರೆ.
“ಶನಿವಾರ (ಸೆಪ್ಟೆಂಬರ್ 26) ಹೂಗ್ಲಿಯಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡಲಿದ್ದು, ಅಲ್ಲಿ ಅವರು ಮುಂದಿನ ಪ್ರತಿಭಟನೆಗಳಿಗೆ ಮಾರ್ಗಸೂಚಿ ನೀಡುವ ನಿರೀಕ್ಷೆಯಿದೆ. ರ‍್ಯಾಲಿಯನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಕೋಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ. ಮುಂಬರುವ ದಿನಗಳಲ್ಲಿ ಹೋರಾಟವನ್ನು ಹೇಗೆ ನಡೆಸಲಾಗುವುದು ಎಂಬುದರ ಕುರಿತು ಅವರು ರೂಪರೇಷೆ ನೀಡುವ ನಿರೀಕ್ಷೆಯಿದೆ” ಎಂದು ಮಮತಾ ಬ್ಯಾನರ್ಜಿ ಬಣದ ಹಿರಿಯ ನಾಯಕಿಯೊಬ್ಬರು ಹೇಳಿದರು.
“ಬ್ಯಾನರ್ಜಿ ಅವರ ಪಕ್ಷದ ಕಾಲ ಈಗ ಮುಗಿದಿದೆ. ಅವರೂ, ಅವರ ಪಕ್ಷವೂ ಈಗ ಪ್ರಸ್ತುತತೆ ಕಳೆದುಕೊಂಡಿದೆ. ಅವರು ಏನು ಹೇಳುತ್ತಾರೆ ಎಂಬುದು ಯಾವುದೇ ಮಹತ್ವ ಹೊಂದಿಲ್ಲ. ಈ ಹಿಂದೆ ಅವರು ಪ್ರಧಾನಿಯ ರಾಜೀನಾಮೆಗೆ ಒತ್ತಾಯಿಸಿದ್ದರು. ಈಗ ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಅವರು ಹೇಗಾದರೂ ರಾಜಕೀಯವಾಗಿ ಉಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಬಿಜೆಪಿ ನಾಯಕ ಸಮಿಕ್ ಭಟ್ಟಾಚಾರ್ಯ ಟೀಕಿಸಿದ್ದಾರೆ.