ಕೋಲ್ಕತ್ತಾ, ಆ.14: ಆರ್‌ಜಿ ಕರ್ ಪ್ರಕರಣದಲ್ಲಿ ಬಂಧನವಾದ ಮರುದಿನವೇ ಟಿಎಂಸಿ ಮಾಜಿ ಶಾಸಕ ನಿರ್ಮಲ್ ಘೋಷ್ (Nirmal Ghosh) ಮೇಲೆ ದಾಳಿ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ. 2024ರಲ್ಲಿ ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಹಾಗೂ ಕೊಲೆಗೆ ಒಳಗಾದ ತರಬೇತಿ ವೈದ್ಯೆಯ ತರಾತುರಿಯ ಅಂತ್ಯಕ್ರಿಯೆಗೆ ಸಂಬಂಧಿಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ಶಾಸಕ ನಿರ್ಮಲ್ ಘೋಷ್ ಬಂಧನಕ್ಕೊಳಗಾಗಿದ್ದಾರೆ. ಅವರನ್ನು ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ಆಕ್ರೋಶಗೊಂಡ ಜನರ ಗುಂಪು ಮೊಟ್ಟೆ ಹಾಗೂ ಕೆಸರನ್ನು ಎಸೆದು ಪ್ರತಿಭಟನೆ ನಡೆಸಿತು.
ಉತ್ತರ 24 ಪರಗಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಾಜಿ ಶಾಸಕ ನಿರ್ಮಲ್ ಘೋಷ್‌ರನ್ನು ಪೊಲೀಸ್ ಕಸ್ಟಡಿಯಲ್ಲಿ ಸ್ಥಳೀಯ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ಠಾಣೆಯ ಹೊರಗೆ ಜನಸಮೂಹ ಜಮಾಯಿಸಿತ್ತು. ಮೊಟ್ಟೆ ಎಸೆತದಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿದ್ದ ಘೋಷ್‌ಗೆ ಶೂ ಮತ್ತು ಚಪ್ಪಲಿಗಳ ಹಾರ ಹಾಕಿ, ಪೊಲೀಸರು ಪೊಲೀಸ್ ವ್ಯಾನ್ ಕಡೆಗೆ ಕರೆದೊಯ್ಯುವಾಗ ಜನಸಮೂಹ ಥಳಿಸಿದೆ ಎಂದು ತಿಳಿದುಬಂದಿದೆ.
ನಂತರ, ಅವರನ್ನು ಹಾಜರುಪಡಿಸಿದ್ದ ನ್ಯಾಯಾಲಯದ ಹೊರಗೆ ಜನರು ಅವರ ವಿರುದ್ಧ ಕಳ್ಳ, ಕಳ್ಳ ಎಂಬ ಘೋಷಣೆಗಳನ್ನು ಕೂಗಿದರು. ಸಹ ಆರೋಪಿಗಳಾದ ಪಾನಿಹಟಿ ಮುನ್ಸಿಪಾಲಿಟಿ ಕೌನ್ಸಿಲರ್ ಸೋಮನಾಥ್ ಡೇ ಮತ್ತು ಸಂತ್ರಸ್ತೆಯ ಕುಟುಂಬದ ನೆರೆಹೊರೆಯವರಾದ ಸಂಜೀವ್ ಮುಖರ್ಜಿ ಅವರ ಮೇಲೂ ಇದೇ ರೀತಿಯಲ್ಲಿ ಮೊಟ್ಟೆ ಹಾಗೂ ಕೆಸರು ಎರಚಲಾಯಿತು.
"ನ್ಯಾಯಕ್ಕಾಗಿ ರಾಜಕೀಯ ಆರಿಸಿಕೊಂಡೆ": ಮೊದಲ ಬಾರಿ ಶಾಸಕಿಯಾದ ಬಗ್ಗೆ ಆರ್‌ಜಿ ಕರ್ ಸಂತ್ರಸ್ತೆಯ ತಾಯಿ ಪ್ರತಿಕ್ರಿಯೆ
ಘೋಷ್ ಅವರನ್ನು ಸಾಕ್ಷ್ಯ ನಾಶ, ಕ್ರಿಮಿನಲ್ ಸಂಚು ಮತ್ತು ಇಚ್ಛೆಗೆ ವಿರುದ್ಧವಾಗಿ ಕೃತ್ಯವೊಂದನ್ನು ಮಾಡಲು ಒತ್ತಾಯಿಸಿದ ಆರೋಪಗಳ ಮೇಲೆ ಗುರುವಾರ (ಆ.13) ಒಡಿಶಾದ ಸಂಬಲ್ಪುರದಿಂದ ವಶಕ್ಕೆ ಪಡೆಯಲಾಗಿದೆ. ಬಂಧಿತ ನಿರ್ಮಲ್ ಘೋಷ್, ಪಾಣಿಹಟಿ ಕ್ಷೇತ್ರದ ಮಾಜಿ ಶಾಸಕರು. ಈಗ ಈ ಕ್ಷೇತ್ರವನ್ನು ಮೃತ ವೈದ್ಯೆಯ ತಾಯಿಯಾಗಿರುವ ಬಿಜೆಪಿ ಶಾಸಕಿ ರತ್ನ ದೇಬ್ನಾಥ್ ಪ್ರತಿನಿಧಿಸುತ್ತಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷ್ ವಿರುದ್ಧ ಎಫ್‌ಐಆರ್ ದಾಖಲಾದ ಎರಡು ದಿನಗಳ ನಂತರ ಅವರನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ತಂದೆ ಸಲ್ಲಿಸಿದ ಹೊಸ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ತನ್ನ ಮಗಳ ಶವವನ್ನು ಆತುರದಿಂದ ಅಂತ್ಯಕ್ರಿಯೆ ಮಾಡುವಂತೆ ಒತ್ತಾಯಿಸಿದ ಮೂವರಲ್ಲಿ ಘೋಷ್ ಕೂಡ ಸೇರಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಭಾನುವಾರ (ಆ.9) ಪಾಣಿಹಟಿಯಲ್ಲಿ ನಡೆದ ವೈದ್ಯರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಆತುರದ ಅಂತ್ಯಕ್ರಿಯೆಯ ಬಗ್ಗೆ ಹೊಸದಾಗಿ ತನಿಖೆ ನಡೆಸುವಂಕೆ ಬ್ಯಾರಕಪೋರ್ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.