ನವದೆಹಲಿ: ವಿವಿಧ ವ್ಯವಹಾರಗಳಿಗೆ ಬಳಸಲಾಗುವ ಪ್ರತಿಯೊಬ್ಬ ಭಾರತೀಯನೂ ಹೊಂದಿರುವ ಆಧಾರ್ ಕಾರ್ಡ್ (Aadhaar card) ಜನ್ಮ ದಿನಾಂಕ ಅಥವಾ ಭಾರತದಲ್ಲಿ ವಾಸ ಮಾಡುತ್ತಿರುವುದಕ್ಕೆ ಪುರಾವೆಯಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ (Chief Election Commissioner) ಜ್ಞಾನೇಶ್ ಕುಮಾರ್ (Gyanesh Kumar) ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಭಾರತದ ಚುನಾವಣಾ ಆಯೋಗವು (Election commission) ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (Special Intensive Revision) ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಅಕ್ಟೋಬರ್ 28 ಅಂದರೆ ಮಂಗಳವಾರದಿಂದ ಇದು ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಆಧಾರ್ ಕಾರ್ಡ್ ಪೌರತ್ವದ ಪುರಾವೆಯಲ್ಲ. ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ನಾಗರಿಕರು ಇದನ್ನು ಗುರುತಿನ ಪುರಾವೆಯಾಗಿ ಬಳಸಬಹುದು. ಸುಪ್ರೀಂ ಕೋರ್ಟ್ ಈಗಾಗಲೇ ಆಧಾರ್ ಕಾರ್ಡ್ ಅನ್ನು ಆಧಾರ್ ಕಾಯ್ದೆಗೆ ಅನುಗುಣವಾಗಿ ಬಳಸಬೇಕು ಎಂದು ಸ್ಪಷ್ಟಪಡಿಸಿದೆ. ಸೆಕ್ಷನ್ 9ರಲ್ಲಿ ಈ ಕಾಯ್ದೆಯು ಆಧಾರ್ ನಿವಾಸ ಅಥವಾ ಪೌರತ್ವದ ಪುರಾವೆಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಜ್ಞಾನೇಶ್ ಕುಮಾರ್ ಹೇಳಿದರು.
ಚುನಾವಣಾ ಆಯೋಗವು ಮಂಗಳವಾರದಿಂದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿಗಳು) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ನಡೆಸಲಿದೆ. ಇದು 2026ರ ಫೆಬ್ರವರಿ 7 ರಂದು ಪೂರ್ಣಗೊಳ್ಳಲಿದೆ. ಬಳಿಕ ಈ ರಾಜ್ಯಗಳ ಅಂತಿಮ ಮತದಾರರ ಪಟ್ಟಿಗಳು ಪ್ರಕಟವಾಗುತ್ತವೆ ಎಂದು ಅವರು ತಿಳಿಸಿದರು.
ಏಕೆ ಪರಿಷ್ಕರಣೆ?
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ವೇಳಾಪಟ್ಟಿ ಮತ್ತು ಪ್ರಕ್ರಿಯೆಯನ್ನು ಪ್ರಕಟಿಸಿರುವ ಚುನಾವಣಾ ಆಯೋಗವು ಇದಕ್ಕೆ ಮಾನ್ಯವಾಗುವ 12 ದಾಖಲೆಗಳ ಕುರಿತು ಮಾಹಿತಿ ನೀಡಿದೆ.
ಯಾವುದೇ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪಿಎಸ್‌ಯುನ ನಿಯಮಿತ ಉದ್ಯೋಗಿ, ಪಿಂಚಣಿದಾರರಿಗೆ ನೀಡಲಾದ ಯಾವುದೇ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿ ಆದೇಶ ಪತ್ರ, 1987ರ ಜುಲೈ 1ಕ್ಕಿಂತ ಮೊದಲು ಸರ್ಕಾರ, ಸ್ಥಳೀಯ ಅಧಿಕಾರಿಗಳು, ಬ್ಯಾಂಕ್‌ಗಳು, ಅಂಚೆ ಕಚೇರಿ, ಎಲ್‌ಐಸಿ, ಪಿಎಸ್‌ಯುಗಳು ಭಾರತದಲ್ಲಿ ನೀಡಿದ ಯಾವುದೇ ಗುರುತಿನ ಚೀಟಿ, ಪ್ರಮಾಣಪತ್ರ ಅಥವಾ ದಾಖಲೆಗಳು, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಮಾನ್ಯತೆ ಪಡೆದ ಮಂಡಳಿಗಳು, ವಿಶ್ವವಿದ್ಯಾಲಯಗಳು ನೀಡಿದ ಮೆಟ್ರಿಕ್ಯುಲೇಷನ್, ಶೈಕ್ಷಣಿಕ ಪ್ರಮಾಣಪತ್ರ, ಶಾಶ್ವತ ನಿವಾಸ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ನಾಗರಿಕರ ರಾಷ್ಟ್ರೀಯ ನೋಂದಣಿ, ರಾಜ್ಯ, ಸ್ಥಳೀಯ ಅಧಿಕಾರಿಗಳು ಸಿದ್ಧಪಡಿಸಿದ ಕುಟುಂಬ ನೋಂದಣಿ, ಸರ್ಕಾರದಿಂದ ಯಾವುದೇ ಭೂಮಿ, ಮನೆ ಹಂಚಿಕೆ ಪ್ರಮಾಣಪತ್ರ, ಆಧಾರ್ ಕಾರ್ಡ್ ಕೂಡ ನೀಡಬಹುದು. ಆದರೆ ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಸ್ವೀಕರಿಸಲಾಗುತ್ತದೆ. ಅದು ಜನನ, ನಿವಾಸ ಅಥವಾ ಪೌರತ್ವದ ಪುರಾವೆಯಾಗುವುದಿಲ್ಲ.
ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಥವಾ ಹೊರಗಿಡಲು ಆಧಾರ್ ಅನ್ನು ದಾಖಲೆಯಾಗಿ ಸ್ವೀಕರಿಸುತ್ತಿಲ್ಲ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸೆಕ್ಷನ್ 9ಅನ್ನು ಉಲ್ಲೇಖಿಸಿ ಇದನ್ನು ಪೌರತ್ವದ ಪುರಾವೆಯಾಗಿ ಬಳಸಲು ಆಗುವುದಿಲ್ಲ ಎಂದು ಹೇಳಿದೆ. ಆದರೆ ಚುನಾವಣಾ ಸಮಿತಿಗೆ ಅದನ್ನು ಪಟ್ಟಿಯಲ್ಲಿ 12 ನೇ ದಾಖಲೆಯಾಗಿ ಅಂದರೆ ಗುರುತಿನ ಪುರಾವೆಯಾಗಿ ಪರಿಗಣಿಸಲು ಸೂಚಿಸಿತ್ತು.
ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ
ಅಕ್ಟೋಬರ್ 28 ರಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಈ ಒಟ್ಟು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಾರಂಭವಾಗಲಿದೆ. ಮನೆಯಿಂದ ಮನೆಗೆ ಗಣತಿ ನವೆಂಬರ್ 4 ರಿಂದ ಪ್ರಾರಂಭವಾಗಲಿದ್ದು, ಡಿಸೆಂಬರ್ 9 ರಂದು ಕರಡು ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಹೇಗಿದೆ ವೇಳಾಪಟ್ಟಿ?
ಅಕ್ಟೋಬರ್ 28 ರಿಂದ ನವೆಂಬರ್ 3ರ ವರೆಗೆ ಮುದ್ರಣ ಮತ್ತು ತರಬೇತಿ, ನವೆಂಬರ್ 4 - ಡಿಸೆಂಬರ್ 4ರ ವರೆಗೆ ಮನೆಯಿಂದ ಮನೆಗೆ ಗಣತಿ, ಡಿಸೆಂಬರ್ 9ರಂದು ಕರಡು ಮತದಾರರ ಪಟ್ಟಿಯ ಪ್ರಕಟಣೆ, ಡಿಸೆಂಬರ್ 9ರಿಂದ ಜನವರಿ 8ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸ್ವೀಕಾರ ಅವಧಿ, ಡಿಸೆಂಬರ್ 9ರಿಂದ ಜನವರಿ 31ರ ವರೆಗೆ ವಿಚಾರಣೆ ಮತ್ತು ಪರಿಶೀಲನೆ ಪ್ರಕ್ರಿಯೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 7ರಂದು ಪ್ರಕಟಿಸಲಾಗುತ್ತದೆ.