Kantara: Chapter 1: ʼಕಾಂತಾರʼ ಸಿನಿಮಾ ಸೆಟ್‌ನಲ್ಲಿ ಒಂದೇ ಬಾರಿಗೆ 2 ಸಾವಿರ ಕಲಾವಿದರು ಹೇಗಿರುತ್ತಿದ್ದರು? ಸಹನಟರು ಈ ಬಗ್ಗೆ ಏನಂದ್ರು?
'ಕಾಂತಾರ ಚಾಪ್ಟರ್ 1' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಕಂಡ ಪ್ರೇಕ್ಷಕರು ಈ ಸಿನಿಮಾದ ಮೇಕಿಂಗ್, ವಿಶುವಲ್ ಎಫೆಕ್ಟ್, ಸಂಗೀತ, ಕಲಾವಿದರ ನಟನೆಗೆ ಮನ ಸೋತಿದ್ದಾರೆ. ದೊಡ್ಡ ಮಟ್ಟದ ಅದ್ಧೂರಿ ಸೆಟ್ ಹೇಗೆಲ್ಲ ಮಾಡಿರಬಹುದು ಎಂಬ ಬಗ್ಗೆ ಪ್ರೇಕ್ಷಕರಲ್ಲೂ ಕುತೂಹಲ ಮನೆ ಮಾಡಿದೆ. ಈ ಬಗ್ಗೆ ಇದೇ ಸಿನಿಮಾದಲ್ಲಿ ಅಭಿನಯಿಸಿದ ನಟರಾದ ಹನುಮಂತ, ಡಿಂಗ್ರಿ ನರೇಶ್, ರಾಘವೇಂದ್ರ ಮತ್ತು ಮನ್ಸೂರ್ ಹಬೀಬಾ ʼವಿಶ್ವವಾಣಿʼ ಜತೆ ಮಾತನಾಡಿದ್ದಾರೆ.
Kantara_ Chapter 1 -
ಬೆಂಗಳೂರು: ʼಕಾಂತಾರ ಚಾಪ್ಟರ್ 1ʼ (Kantara: Chapter-1) ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಈ ಸಿನಿಮಾದ ಮೇಕಿಂಗ್, ವಿಶುವಲ್ ಎಫೆಕ್ಸ್‌ಗೆ ಮನ ಸೋತಿದ್ದಾರೆ. ಬೃಹತ್, ಅದ್ಧೂರಿ ಸೆಟ್, ಸಿನಿಮಾ ಮೇಕಿಂಗ್ ಹೇಗೆಲ್ಲ ಮಾಡಿರಬಹುದು ಎಂಬ ಬಗ್ಗೆ ಪ್ರೇಕ್ಷಕರಲ್ಲೂ ಕುತೂಹಲ ಮೂಡಿದೆ. ಈ ಬಗ್ಗೆ ಇದೇ ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದರಾದ ಹನುಮಂತ, ಡಿಂಗ್ರಿ ನರೇಶ್, ರಾಘವೇಂದ್ರ, ಮನ್ಸೂರ್ ಹಬೀಬಾ ಅನೇಕ ರೋಚಕ ಸಂಗತಿಗಳ ಬಗ್ಗೆ ʼವಿಶ್ವವಾಣಿ ಮಾತನಾಡಿದ್ದಾರೆ. ʼಕಾಂತಾರʼ ಸಿನಿಮಾದಲ್ಲಿ 2000ಕ್ಕೂ ಅಧಿಕ ಕಲಾವಿದರಿದ್ದು ಅಲ್ಲಿ ಸಣ್ಣ ಸಣ್ಣ ಪಾತ್ರಕ್ಕೂ ಕೂಡ ಮಹತ್ವ ನೀಡಲಾಗಿದೆ. ಈ ಸಿನಿಮಾ ಅನೇಕರಿಗೆ ಬದುಕು ಕಟ್ಟಿಕೊಟ್ಟಿದ್ದು ಎಲೆ ಮರೆಕಾಯಿಯಂತಿದ್ದ ಪ್ರತಿಭೆಯ ಮೇಲೂ ಬೆಳಕು ಚೆಲ್ಲುವಂತಾಯ್ತು ಎಂದು ಹೇಳಿದ್ದಾರೆ.
ʼʼಕಾಂತಾರʼ ಸೆಟ್‌ನಲ್ಲಿ ಹೀರೊ, ಮುಖ್ಯ ಪಾತ್ರಧಾರಿ, ಸಹ ಕಲಾವಿದ ಎಂಬ ಯಾವ ಭೇದ ಭಾವ ಇರಲಿಲ್ಲ. ರಿಷಭ್ ಅಣ್ಣ ಯಾವಾಗಲೂ ನಾನು ಒಬ್ಬ ನಟ ನೀನು ಒಬ್ಬ ನಟ...ನಾವು ಎಲ್ಲರೂ ನಟರಷ್ಟೇ. ಇಲ್ಲಿ ಯಾರು ದೊಡ್ಡವ್ರು ಸಣ್ಣವ್ರು ಅಂತಿಲ್ಲ ಅನ್ನುತ್ತಿದ್ದರು. ಅವರು ಸೆಟ್ ಬಾಯ್ಸ್, ಕಾಫಿ ಕೊಡುವವರು, ಕಾಸ್ಟ್ಯೂಂ ತಯಾರಿಸುವವರನ್ನು ಹೆಸರು ಹಿಡಿದೇ ಕರೆಯುತ್ತಿದ್ದರು. ಪ್ರೀತಿಯಿಂದ ನಮ್ಮನ್ನೆಲ್ಲ ಮಗಾ, ಮಚ್ಚಾ ಎಂದೆ ಕರೆಯುತ್ತಿದ್ದರುʼʼ ಎಂದು ಸಹಕಲಾವಿದ ರಾಘವೇಂದ್ರ ಹೇಳಿದ್ದಾರೆ.
ʼʼರಿಷಬ್ ಸೆಟ್‌ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ. ಅವರ ಎನರ್ಜಿ ಲೆವಲ್‌ಗೆ ನಾವ್ಯಾರು ಇಲ್ಲವೇ ಇಲ್ಲ. ಅವರ ಸೌಂಡ್ ಕೇಳಿದ್ರೆ ನಮಗೆಲ್ಲ ಹೊಸ ಎನರ್ಜಿ ಬಂದಂತೆ ಆಗುತ್ತಿತ್ತು. ಅವರು ನಮ್ಮ ಜತೆ ನಕ್ಕು ಮಾತಾಡಿಸಿದರೆ ಆ ದಿನ ಇಡಿ ನಾವು ಬಹಳ ಖುಷಿಯಿಂದ ಲವಲವಿಕೆ ಯಿಂದ ಇರುತ್ತಿದ್ದೆವು. ʼಕಾಂತಾರʼ ಸೆಟ್‌ನಲ್ಲಿಯೇ ರಿಷಬ್ ಅಣ್ಣನಿಗೆ ಬಹಳ ಫ್ಯಾನ್ಸ್ ಇದ್ದರು. ಅವರಲ್ಲಿ ನಾವು ಕೂಡ...ಅವರು ಬೈದರೂ ಹೊಗಳಿದರೂ ಎಲ್ಲವನ್ನು ನಮ್ಮ ಒಳ್ಳೇದಕ್ಕೆ ಎಂದೆ ತೆಗೆದುಕೊಳ್ಳುತ್ತಿದ್ದೆವುʼʼ ಎಂದು ಡಿಂಗ್ರಿ ನರೇಶ್ ತಿಳಿಸಿದ್ದಾರೆ.
ಇದನ್ನು ಓದಿ:Thamma Movie: ಬಾಲಿವುಡ್‌ನಲ್ಲಿ ದೆವ್ವವಾಗಿ ಹೆದರಿಸಲು ಬಂದ ರಶ್ಮಿಕಾ ಮಂದಣ್ಣ; ʼಥಮ್ಮʼ ಚಿತ್ರ ಹೇಗಿದೆ?
ರಾಘವೇಂದ್ರ ಮಾತನಾಡಿ, ʼʼಕಾಂತಾರʼದ ವಾಟ್ಸ್‌ಆ್ಯಪ್ ಗ್ರೂಪ್ ಕೂಡ ಇತ್ತು. ಅದರಲ್ಲಿಯೂ ರಿಷಬ್ ಅಣ್ಣ ಅನೇಕ ಸಲ ಸಲಹೆ ನೀಡುತ್ತಿದ್ದರು. ಗಾಡಿ ಓಡಿಸುವಾಗ ಜಾಗೃತೆ, ವಾಕಿಂಗ್ ಮಾಡಿ, ವಾರ್ಮ್ ಅಪ್ ಮಾಡಿ, ಒಳ್ಳೆ ಆಹಾರ ಸೇವಿಸಿ, ತುಂಬಾ ನೀರು ಕುಡಿರಿ, ಚೆನ್ನಾಗಿ ನಿದ್ರಿಸುವಂತೆ ವಾಯ್ಸ್ ಮೆಸೇಜ್ ಕೂಡ ಕಳುಹಿಸುತ್ತಿದ್ದರು. ಯಾವುದೇ ಆರ್ಟಿಸ್ಟ್‌ಗೆ ಏನೇ ಸಮಸ್ಯೆ ಬಂದರೂ ಅದೇ ಗ್ರೂಪ್‌ನಲ್ಲಿ ಹಾಕುತ್ತಿದ್ದರು. ಹೀಗೆ ರಿಷಬ್ ಅಣ್ಣ ಎಲ್ಲರೊಂದಿಗೆ ಬಹಳ ಅನ್ಯೋನ್ಯತೆಯಿಂದ ಇರುತ್ತಿದ್ದರು. ಸೆಟ್‌ನಲ್ಲಿ ಎಲ್ಲ ತರಹದ ವ್ಯವಸ್ಥೆ ಹಾಸ್ಟಿಟಲ್ ಕಿಟ್ ಇತ್ಯಾದಿ ಇದ್ದೇ ಇರುತ್ತಿತ್ತು. ಅಷ್ಟರ ಮಟ್ಟಿಗೆ ಸಹ ಕಲಾವಿದರನ್ನು ತಮ್ಮ ಮನೆಯವರೆಂಬಂತೆ ಅವರು ನೋಡಿಕೊಂಡಿದ್ದಾರೆʼʼ ಎಂದು ಹೇಳಿದ್ದಾರೆ.
ʼʼರಿಷಬ್ ಸಮಯಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಿದ್ದರು. ನಮಗೆ ಬೆಳಗ್ಗೆ 4 ಗಂಟೆಗೆ ಶೂಟಿಂಗ್ ಇರುತ್ತಿತ್ತು. ಇಷ್ಟು ಬೆಳಗ್ಗೆ ಯಾಕೆ ಶೂಟಿಂಗ್ ಎಂದು ಅಂದುಕೊಳ್ಳುವಾಗಲೇ ನಮಗೂ ಮೊದಲೆ ರಿಷಬ್ ಅಣ್ಣ ರೆಡಿಯಾಗಿ ಕೂತಿರುತ್ತಿದ್ದರು. ಫೈಟ್ ಸೀನ್‌ನಲ್ಲಿ ಡ್ಯೂಪ್ ಇದ್ದರೂ ಅವರು ಅದನ್ನು ಬೇಡ ಎಂದೇ ಹೇಳುತ್ತಿದ್ದರು. ಫೈಟ್ ನಾನೇ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ಪರ್ಫೆಕ್ಷನ್ ಅವರಿಗೆ ಬೇಕಿತ್ತು. ಅವರು ಆ ಪಾತ್ರಕ್ಕೆ ಆ ಕೆಲಸಕ್ಕೆ ತುಂಬಾ ಬದ್ಧರಾಗಿದ್ದರು. ಎರಡು ವರ್ಷ ಶೂಟಿಂಗ್ ಮಾಡಿ ಸಮಯ ನೀಡಿದ್ದಕ್ಕೆ ಇಂದು ಆ ಸಿನಿಮಾ ದೊಡ್ಡ ಮಟ್ಟಿಗೆ ಯಶಸ್ಸು ಪಡೆಯುವಂತಾಯ್ತುʼʼ ಎಂದು ಸಹಕಲಾವಿದರು ಹೇಳಿದ್ದಾರೆ.