ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಕಿಶ್ತ್ವಾರ್ (Kishtwar) ಜಿಲ್ಲೆಯ ಹದಲ್ ಗಲ್ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ (Encounter In Kishtwar). "ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆಯು ಕಿಶ್ತ್ವಾರ್ ಸೆಕ್ಟರ್‌ನ ಹದಲ್ ಗಲ್ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲಾಗುತ್ತಿದೆ. ಕಾರ್ಯಾಚರಣೆ ಮುಂದುವರಿದಿದೆ" ಎಂದು ಜಮ್ಮು ಮೂಲದ ವೈಟ್ ನೈಟ್ ಕಾರ್ಪ್ಸ್ ಎಕ್ಸ್‌ನಲ್ಲಿ ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಲಾಗುತ್ತಿದೆ.
ಭಯೋತ್ಪಾದಕರ ಚಲನವಲನದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಭಾರತೀಯ ಸೇನೆಯ ಸಹಾಯದಿಂದ ಡಚ್ಚನ್ ಮತ್ತು ನಾಗಸೇನಿ ನಡುವಿನ ಖಾಂಕೂ ಅರಣ್ಯ ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದಾಗ ಗುಂಡಿನ ಚಕಮಕಿ ಆರಂಭವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಪಡೆಗಳ ರವಾನೆ
ಅಡಗಿಕೊಂಡಿದ್ದ ಭಯೋತ್ಪಾದಕರು ಆರಂಭದಲ್ಲಿ ಭದ್ರತಾ ಪಡೆಗಳತ್ತ ಗುಂಡು ಹಾರಿಸಿದರು ಎನ್ನಲಾಗಿದೆ. ಗುಂಡಿನ ಚಕಮಕಿ ಮುಂದುವರಿದಿದ್ದು ಯಾವುದೇ ಸಾವುನೋವು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಹೇಳಿದರು. ಏಪ್ರಿಲ್‌ನಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಳಿಕ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗಿದೆ.
OP CHERJI, Based on specific inputs an operation was launched by #IndianArmy in the Hadal Gal area of #Kishtwar Sector. Contact has been established with #terrorists. The #operation is currently in progress: White Knight Corps, Indian Army pic.twitter.com/VEb5COgdrf
— IANS (@ians_india) July 20, 2025
ಈ ಸುದ್ದಿಯನ್ನೂ ಓದಿ: Encounter with Terrorists: ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗೆ ಎನ್‌ಕೌಂಟರ್; ಓರ್ವ ಯೋಧ ಹುತಾತ್ಮ
ಮಾಸಾರಂಭದಲ್ಲಿ ಕಿಶ್ತ್ವಾರ್‌ನಲ್ಲಿ ನಡೆದಿತ್ತು ಎನ್‌ಕೌಂಟರ್
ಜುಲೈ ಆರಂಭದಲ್ಲಿಯೂ ಕಿಶ್ತ್ವಾರ್‌ನಲ್ಲಿ ಎನ್‌ಕೌಂಟರ್ ನಡೆದಿತ್ತು. ಚತ್ರೂ ಪ್ರದೇಶದಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಈ ಗುಂಡಿನ ಚಕಮಕಿ ಆರಂಭವಾಗಿತ್ತು. ಪರ್ವತ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡ ಕಾರ್ಯಾಚರಣೆ ಆರಂಭಿಸಿದ ನಂತರ ಈ ಗುಂಡಿನ ಚಕಮಕಿ ಆರಂಭವಾಗಿತ್ತು.
ಕನಿಷ್ಠ ಮೂವರು ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕರು ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಕಾರ್ಯಾಚರಣೆಗೆ ಇಳಿದಿತ್ತು. ಕಳೆದ ಒಂದು ವರ್ಷದಲ್ಲಿ ಈ ಪ್ರದೇಶದಲ್ಲಿ ಹಲವು ಎನ್‌ಕೌಂಟರ್ ನಡೆದಿದೆ. ಮೇ 22ರಂದು ಚತ್ರೂ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದರು.
ಉಗ್ರರ ಅಡಗುತಾಣ
ಜಮ್ಮು ಆಡಳಿತ ಪ್ರಾಂತ್ಯದ ಭಾಗವಾಗಿರುವ ಕಿಶ್ತ್ವಾರ್‌ನಲ್ಲಿ ಇತ್ತೀಚೆಗೆ ಪದೇ ಪದೆ ಭಯೋತ್ಪಾದಕ ದಾಳಿ ನಡೆಯುತ್ತಲೇ ಇದೆ. ಕೆಲವು ವರ್ಷಗಳ ಹಿಂದಿನವರೆಗೂ ಭಯೋತ್ಪಾದನೆಯಿಂದ ಮುಕ್ತವಾಗಿದ್ದ ಈ ಪ್ರದೇಶವು ಇದೀಗ ಉಗ್ರರ ಅಡಗುತಾಣವಾಗಿ ಬದಲಾಗಿರುವುದು ಸ್ಥಳೀಯಾಡಳಿತಕ್ಕೆ ಸವಾಲಾಗಿದೆ. ಈ ಪರ್ವತ ಪ್ರದೇಶಗಳಲ್ಲಿ ಅಡಗಿರುವ ಭಯೋತ್ಪಾದಕರು ಅಲ್ಲೇ ಸಮೀಪದಲ್ಲಿರುವ ಕಾಡಿನಲ್ಲಿ ತರಬೇತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು ಜಮ್ಮು ಪ್ರದೇಶದಲ್ಲಿ ಸೇನೆ ಮತ್ತು ನಾಗರಿಕರ ಮೇಲೆ ಹಲವು ಬಾರಿ ದಾಳಿ ನಡೆಸಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಅಮರನಾಥ ಯಾತ್ರೆ ಜು. 3ರಂದು ಆರಂಭವಾಗಲಿದ್ದು, ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.