Encounter with Terrorists: ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗೆ ಎನ್‌ಕೌಂಟರ್; ಓರ್ವ ಯೋಧ ಹುತಾತ್ಮ
ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಗುರುವಾರ (ಮೇ 22) ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ಕಿಶ್ತ್ವಾರ್‌ನ ಸಿಂಗ್‌ಪೋರಾ ಚತ್ರೂ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಉಗ್ರರೊಂದಿಗೆ ಎನ್‌ಕೌಂಟರ್ ನಡೆದಿದೆ.

ಸಾಂದರ್ಭಿಕ ಚಿತ್ರ.

ಶ್ರೀನಗರ: ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಗುರುವಾರ (ಮೇ 22) ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ (Encounter with Terrorists). ಕಿಶ್ತ್ವಾರ್‌ನ ಸಿಂಗ್‌ಪೋರಾ ಚತ್ರೂ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಉಗ್ರರೊಂದಿಗೆ ಎನ್‌ಕೌಂಟರ್ ನಡೆದಿದ್ದು, ಈಗಲೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಕಿಶ್ತ್ವಾರ್‌ನಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಯೋಧನನ್ನು ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಅಕೋಲ್‌ನ ಕರಂಡಿ ತಹಸಿಲ್ ಗ್ರಾಮದ ನಿವಾಸಿ ಸಿಪಾಯಿ ಗಾಯ್ಕರ್ ಸಂದೀಪ್ ಪಾಂಡುರಂಗ್ ಎಂದು ಗುರುತಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್‌ಕೌಂಟರ್ ಈಗಲೂ ನಡೆಯುತ್ತಿದೆ" ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
Gunfight erupts in J&K’s Kishtwar as security forces corner 3–4 JeM terrorists in Chatroo’s Singhpora area. Joint operation launched after precise intel input. No casualties reported yet. #JammuAndKashmir #Terrorism #IndianArmy pic.twitter.com/wkmZWzjLLt
— 𝕿𝖆𝖗𝖚𝖓 तरुण 卐 🇮🇳 (@fptarun) May 22, 2025
ಈ ಸುದ್ದಿಯನ್ನೂ ಓದಿ: Operation Trashi: ಭದ್ರತಾ ಪಡೆಗಳಿಂದ ಮುಂದುವರಿದ ಉಗ್ರರ ಬೇಟೆ; ಇಬ್ಬರು ಭಯೋತ್ಪಾದಕರ ಹತ್ಯೆ
ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಕೆಲವೊಂದು ಮೂಲಗಳು ತಿಳಿಸಿವೆ. ಅದಾಗ್ಯೂ ಇದು ಅಧಿಕೃತವಾಗಿ ದೃಢಪಟ್ಟಿಲ್ಲ.
2 ಪ್ಯಾರಾ, 11 ರಾಷ್ಟ್ರೀಯ ರೈಫಲ್ಸ್, 7 ಅಸ್ಸಾಂ ರೈಫಲ್ಸ್ ಮತ್ತು ಜಮ್ಮು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ಸೇರಿದಂತೆ ಜಂಟಿ ಪಡೆಗಳು ಗುರುವಾರ ಬೆಳಗ್ಗೆ ಸಿಂಗ್‌ಪೋರಾ ಚತ್ರೂ ಪ್ರದೇಶದಲ್ಲಿ ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಮೂರರಿಂದ ನಾಲ್ಕು ಭಯೋತ್ಪಾದಕರು ಅಡಗಿದ್ದರು.
"ಭೀಕರ ಗುಂಡಿನ ಚಕಮಕಿ ಮುಂದುವರಿದಿದೆ. ಎನ್‌ಕೌಂಟರ್ ವೇಳೆ ಗಂಭೀರ ಗಾಯಗೊಂಡ ಯೋಧರೊಬ್ಬರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ" ಎಂದು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ಕಾರ್ಯಾಚರಣೆಗೆ ʼಆಪರೇಷನ್ ಟ್ರಾಶಿʼ ಎಂದು ಹೆಸರಿಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು, ಅವರ ಭೂಗತ ಕಾರ್ಯಕರ್ತರು (OGWs) ಮತ್ತು ಅವರಿಗೆ ನೆರವು ನೀಡುವವರ ವಿರುದ್ಧ ಬೃಹತ್ ಮಟ್ಟದ ಕಾರ್ಯಾಚರಣೆ ನಡೆಯುತ್ತಿದೆ.
ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರು 26 ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಹತ್ಯೆ ನಡೆಸಿದ ಬಳಿಕ ಭದ್ರತಾ ಪಡೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈಗಾಗಲೇ ಭಾರತ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀಎದಲ್ಲಿನ ಉಗ್ರರ ನೆಲೆಯನ್ನು ನಾಶಪಡಿಸಿದೆ.
ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (LoC) ಮತ್ತು ಅಂತಾರಾಷ್ಟ್ರೀಯ ಗಡಿ (IB)ಯಲ್ಲಿ ಭಾರೀ ಮೋರ್ಟಾರ್ ಶೆಲ್ ದಾಳಿ ನಡೆಸಿದ್ದು, ಒಟ್ಟು 200 ಮನೆಗಳು ಮತ್ತು ಅಂಗಡಿಗಳು ನಾಶವಾಗಿವೆ. ಗಡಿ ನಿವಾಸಿಗಳು ತಮ್ಮ ಗ್ರಾಮಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಪೂಂಚ್, ರಾಜೌರಿ, ಬಾರಾಮುಲ್ಲಾ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಈಗಲೂ ಪಾಕಿಸ್ತಾನ ಶೆಲ್‌ಗಳು ಪತ್ತೆಯಾಗುತ್ತಿದ್ದು, ನಿಷ್ಕ್ರಿಯಗೊಳಿಸಲಾಗುತ್ತಿದೆ.