ರಾಯ್ಪುರ್, ಫೆ.26: ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ. (Naxal encounter) ಛತ್ತೀಸ್‌ಗಢದ ಬಿಜಾಪುರ (Bijapur) ಜಿಲ್ಲೆಯಲ್ಲಿ ಗುರುವಾರ (ಫೆ.26) ಭದ್ರತಾ ಸಿಬ್ಬಂದಿ ಎನ್‍ಕೌಂಟರ್ ನಡೆಸಿದ್ದಾರೆ. ಇಂದ್ರಾವತಿ ನದಿಯ ದಡದಲ್ಲಿರುವ ಕಾಡಿನಲ್ಲಿ ಬೆಳಗ್ಗೆ ಭದ್ರತಾ ಪಡೆಗಳ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂದೂಕುಗಳು ಸದ್ದು ಮೌನವಾದ ನಂತರ, ಸಮವಸ್ತ್ರ ಧರಿಸಿದ ಇಬ್ಬರು ನಕ್ಸಲರ ಮೃತದೇಹಗಳು, ಒಂದು ಸೆಲ್ಫ್-ಲೋಡಿಂಗ್ ರೈಫಲ್, ಒಂದು ಇನ್ಸಾಸ್ ರೈಫಲ್ ಮತ್ತು 12-ಬೋರ್ ರೈಫಲ್ ಅನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಈ ಕಾರ್ಯಾಚರಣೆಯೊಂದಿಗೆ, ಈ ವರ್ಷ ಇಲ್ಲಿಯವರೆಗೆ ರಾಜ್ಯದಲ್ಲಿ ಕನಿಷ್ಠ 25 ನಕ್ಸಲರನ್ನು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡಲಾಗಿದೆ. ಇದಕ್ಕೂ ಮೊದಲು, ಜನವರಿ 3 ರಂದು ಬಿಜಾಪುರ್ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ 14 ಮಾವೋವಾದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಕಳೆದ ವರ್ಷ ಛತ್ತೀಸ್‍ಗಢದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ವಿವಿಧ ಎನ್‌ಕೌಂಟರ್‌ಗಳಲ್ಲಿ 285 ಮಾವೋವಾದಿಗಳು ಹತ್ಯೆಯಾಗಿದ್ದರು.
ಛತ್ತೀಸ್‌ಗಢದಲ್ಲಿ ಶರಣಾದ 26 ಮಾವೋವಾದಿಗಳು; 65 ಲಕ್ಷ ರುಪಾಯಿ ಇನಾಮು ಹೊಂದಿದ್ದ 13 ಮಂದಿ
ದೇಶದಿಂದ ಎಡಪಂಥೀಯ ಉಗ್ರವಾದವನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರವು ಈ ವರ್ಷದ ಮಾರ್ಚ್ 31ರ ವರೆಗೆ ಗಡುವು ವಿಧಿಸಿದೆ.
9 ಮಾವೋವಾದಿಗಳು ಶರಣು
ಕಳೆದ ಜನವರಿಯಲ್ಲಿ, ಮಾವೋವಾದಿ ಸಿದ್ಧಾಂತ, ಕಾಡುಗಳಲ್ಲಿನ ಕಷ್ಟದ ಜೀವನ, ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಕಾರಣದಿಂದ 47 ಲಕ್ಷ ರೂ. ಬಹುಮಾನ ಹೊಂದಿದ್ದ ಒಂಬತ್ತು ಮಾವೋವಾದಿಗಳು ಶುಕ್ರವಾರ ಪೋಲೀಸರ ಮುಂದೆ ಶರಣಾಗಿದ್ದರು. ಇವರಿಂದ ಇನ್ಸಾಸ್ ರೈಫಲ್‌ಗಳು, ಎರಡು ಎಸ್‌ಎಲ್‌ಆರ್‌ಗಳು, ಒಂದು ಕಾರ್ಬೈನ್, ಮಜಲ್ ಲೋಡಿಂಗ್ ಗನ್ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಮೂಲಕ ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ರಾಯ್‌ಪುರ ಪೊಲೀಸ್ ವಲಯ ನಕ್ಸಲ್ ಮುಕ್ತವಾಗಿದೆ.
ಈ ಕುರಿತು ಮಾಹಿತಿ ನೀಡಿದ್ದ ರಾಯ್‌ಪುರ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅಮರೇಶ್ ಮಿಶ್ರಾ, ಪೊಲೀಸರ ಮುಂದೆ ಶರಣಾಗಿರುವ ಮಾವೋವಾದಿ ಕಾರ್ಯಕರ್ತರು ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದಾರೆ. ಇನ್ನು ಬಸ್ತಾರ್ ವಲಯ ಮತ್ತು ರಾಜನಂದಗಾಂವ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಲವು ಮಾವೋವಾದಿ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದರು.