ಮುಂಬೈ, ಜೂ. 25: ಭಾರತದಲ್ಲಿ ಬಹುಪತ್ನಿತ್ವವನ್ನು ಬೆಂಬಲಿಸಿದ ಮತ್ತು ಪಾಕಿಸ್ತಾನದ ಕಾನೂನುಗಳನ್ನು ಜಾರಿಗೊಳಿಸುವಂತೆ ವಾದಿಸಿದ ಎನ್‌ಸಿಪಿ (ಅಜಿತ್ ಪವಾರ್ ಬಣ) ಶಾಸಕಿ ಸನಾ ಮಲಿಕ್ (Sana Malik) ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಂ (Yogesh Kadam) ಅವರಿಂದಲೂ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಸನಾ ಮಲಿಕ್ ಪ್ರತಿಕ್ರಿಯಿಸಿ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಪ್ಪೆ ಸಾರಿಸಲು ಯತ್ನಿಸಿದ್ದಾರೆ.
ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿರುವ ಶಾಸಕಿ ಸನಾ ಮಲಿಕ್, "ಏಕರೂಪ ನಾಗರಿಕ ಸಂಹಿತೆ ಕುರಿತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನಾನು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಹಿಳೆಯರ ಸುರಕ್ಷತೆ ಮತ್ತು ಮುಸ್ಲಿಂ ಮಹಿಳೆಯರ 'ತ್ರಿಪಲ್ ತಲಾಖ್' ಕುರಿತು ಚರ್ಚೆ ನಡೆಯುವಾಗ ಪಾಕಿಸ್ತಾನದ ಹೆಸರನ್ನು ಪದೇ ಪದೆ ಪ್ರಸ್ತಾಪಿಸುವುದಕ್ಕೆ ಮಾತ್ರ ನನ್ನ ಆಕ್ಷೇಪವಿತ್ತು" ಎಂದು ಹೇಳಿದ್ದಾರೆ.
ಸನಾ ಮಲಿಕ್ ಸ್ಪಷ್ಟನೆ:
ಪಾಕಿಸ್ತಾನದ ಹೋಲಿಕೆ ಒಪ್ಪಲು ಸಾಧ್ಯವಿಲ್ಲ: ಸನಾ ಮಲಿಕ್
ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಚರ್ಚೆ ನಡೆಯಬೇಕೇ ಹೊರತು ಇಂತಹ ವಿಷಯಗಳನ್ನು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯಕ್ಕೆ ನೇರವಾಗಿ ಜೋಡಿಸಬಾರದು ಎಂದು ಸನಾ ಮಲಿಕ್ ವಾದಿಸಿದ್ದಾರೆ. "ಚರ್ಚೆಯ ಸಮಯದಲ್ಲಿ ಪಾಕಿಸ್ತಾನದ ಉದಾಹರಣೆಯನ್ನು ಏಕೆ ನೀಡಲಾಗುತ್ತಿದೆ? ಭಾರತೀಯ ಮುಸ್ಲಿಮರು ಭಾರತದ ಸಂವಿಧಾನವನ್ನು ಪಾಲಿಸುತ್ತಾರೆ. ಸಂವಿಧಾನವು ಅವರಿಗೆ ತಮ್ಮ ಧರ್ಮವನ್ನು ಆಚರಿಸಲು ಮತ್ತು ಪ್ರಚಾರ ಮಾಡಲು ಹಕ್ಕು ನೀಡಿದೆ. ಹೀಗಾಗಿ ನಮ್ಮ ದೇಶದ ಕಾನೂನು ಚರ್ಚೆಯಲ್ಲಿ ಪಾಕಿಸ್ತಾನದ ಹೋಲಿಕೆ ತರುವುದು ಸ್ವೀಕಾರಾರ್ಹವಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸನಾ ಮಲಿಕ್ ಹೇಳಿಕೆ:
ಬಹುಪತ್ನಿತ್ವದ ವಿವಾದದ ಕುರಿತು ಮಾತನಾಡಿದ ಅವರು, "ಇಸ್ಲಾಮಿಕ್ ವೈಯಕ್ತಿಕ ಕಾನೂನು ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಬಹುಪತ್ನಿತ್ವಕ್ಕೆ ಅನುಮತಿ ನೀಡುತ್ತದೆ. ಆದರೆ ಬಹುಪತ್ನಿತ್ವವು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ವಿವಿಧ ಧರ್ಮಗಳಲ್ಲೂ ಇದು ಅಸ್ತಿತ್ವದಲ್ಲಿದೆ. ಮಹಿಳಾ ಹಕ್ಕುಗಳನ್ನು ರಕ್ಷಿಸುವ ಕಾನೂನುಗಳು ಕೇವಲ ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸದೆ ಎಲ್ಲ ಸಮುದಾಯಗಳಿಗೂ ನ್ಯಾಯಯುತವಾಗಿ ಅನ್ವಯಿಸಬೇಕು" ಎಂದಿದ್ದಾರೆ.
ಧರ್ಮಗ್ರಂಥಗಳ ಆಧಾರದ ಮೇಲೆ ಕಾನೂನು ರಚನೆಯಾಗಲ್ಲ: ಕದಂ
ಶಾಸಕಿಯ ಈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಂ, "ಭಾರತದಲ್ಲಿ ಯಾವುದೇ ಧರ್ಮಗ್ರಂಥಗಳು ಅಥವಾ ಪವಿತ್ರ ಪುಸ್ತಕಗಳ ಆಧಾರದ ಮೇಲೆ ಕಾನೂನುಗಳನ್ನು ರೂಪಿಸಲಾಗುವುದಿಲ್ಲ. ಸಮಾಜದ ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸುವುದು ಮತ್ತು ಸಮಾಜದಲ್ಲಿನ ಅನ್ಯಾಯದ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಮಾತ್ರ ಶಾಸಕಾಂಗದ ಜವಾಬ್ದಾರಿಯಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತರುವ ಕಾನೂನುಗಳು ಕೇವಲ ಜನರಿಗೆ ನ್ಯಾಯ ಒದಗಿಸುವ ಉದ್ದೇಶವನ್ನು ಹೊಂದಿವೆಯೇ ಹೊರತು, ಭಾರತದ ಕಾನೂನು ಚೌಕಟ್ಟನ್ನು ಧರ್ಮದೊಂದಿಗೆ ಜೋಡಿಸುವುದು ಸಂಪೂರ್ಣವಾಗಿ ತಪ್ಪು ಎಂದು ಸಚಿವ ಕದಂ ಹೇಳಿದ್ದಾರೆ.