ಕೋಲ್ಕತ್ತಾ: ದೇಶದ ಭದ್ರತೆಗಿಂತ ಯಾವುದು ದೊಡ್ಡದಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Chief Minister Suvendu Adhikari) ಹೇಳಿದ್ದಾರೆ. ಕೋಲ್ಕತ್ತಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗಿನ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ ಪ್ರವೇಶ ಪಾಸ್‌ಗಳನ್ನು ಸ್ಥಗಿತಗೊಳಿಸಿದ ಬಳಿಕ ಉಂಟಾಗಿರುವ ವಿವಾದಕ್ಕೆ ಪ್ರತಿಕ್ರಿಯೆಯಾಗಿ ಅವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು. ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (Netaji Subhas Chandra Bose International airport) ಬಂಕ್ರಾ ಮಸೀದಿ (Bankra Masjid) ಎಂದು ಕರೆಯಲ್ಪಡುವ 136 ವರ್ಷ ಹಳೆಯ ಗೌರಿಪುರ ಜಾಮಾ ಮಸೀದಿಗೆ (Gauripur Jama Masjid) ಇದೀಗ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ.
ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಗೌರಿಪುರ ಜಾಮಾ ಮಸೀದಿಯ ಸ್ಥಳಾಂತರದ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡು ರನ್ ವೇ ಗಳನ್ನು ಹೊಂದಿರುವ ಡಮ್ ಡಮ್ ವಿಮಾನ ನಿಲ್ದಾಣದ ಮುಖ್ಯ ರನ್‌ವೇಯನ್ನು ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗಳಿಗೆ ಬಳಸಲಾಗುತ್ತದೆ. ಎರಡನೇ ರನ್‌ವೇ ಚಿಕ್ಕದಾಗಿದ್ದು, ಇದು ಮಸೀದಿಯಿಂದ ಸ್ವಲ್ಪ ದೂರದಲ್ಲಿದೆ.
ಮೊದಲ ರನ್‌ವೇ ನಿರ್ವಹಣೆಗಾಗಿ ತಾತ್ಕಾಲಿಕವಾಗಿ ಮುಚ್ಚಿದರೆ ದೊಡ್ಡ ವಿಮಾನಗಳ ಟೇಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ತೊಂದರೆಯಾಗುತ್ತದೆ. ಎರಡನೇ ರನ್ ವೇ ಬಳಕೆಯು ಮಸೀದಿ ಸಮೀಪವಿರುವುದರಿಂದ ಅಪಾಯಕಾರಿಯಾಗಿದೆ. ಹೀಗಾಗಿ ಎರಡನೇ ರನ್‌ವೇ ವಿಸ್ತರಣೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಗೇಟ್ ಮೂಲಕ ಮಸೀದಿಗೆ ಪ್ರವೇಶಿಸಲು ನೀಡಲಾಗುವ ಪ್ರವೇಶ ಪಾಸ್‌ಗಳನ್ನು ಶನಿವಾರದಿಂದ ನಿಲ್ಲಿಸಲಾಗಿದೆ. ಇದರೊಂದಿಗೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಇಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಕುರಿತು ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ರಾಷ್ಟ್ರೀಯ ಭದ್ರತೆ ಎಲ್ಲಕ್ಕಿಂತ ಪ್ರಥಮ ಆದ್ಯತೆಯಾಗಿದೆ. ಚೀನಾ ಮತ್ತು ಬಾಂಗ್ಲಾದೇಶ ಎರಡು ಹತ್ತಿರದಲ್ಲಿರುವುದರಿಂದ ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊರಗಿನವರಿಗೆ ದ್ವಾರಗಳನ್ನು ತೆರೆದಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಯಾರೂ ತಮ್ಮ ಧರ್ಮವನ್ನು ಆಚರಿಸದಂತೆ ನಾವು ತಡೆಯುವುದಿಲ್ಲ. ಇಲ್ಲಿ ಬಕ್ರೀದ್, ಮೊಹರಂ ಆಚರಿಸಲಾಗಿದೆ. ಯಾವುದೇ ಸಮಸ್ಯೆ ಇರಲಿಲ್ಲ. ಕಾನೂನನ್ನು ಪಾಲಿಸಿ ಮತ್ತು ಉತ್ತಮ ನಾಗರಿಕರಾಗಿರಿ. ಧರ್ಮಗಳನ್ನು ವೈಯಕ್ತಿಕ ವಿಷಯವಾಗಿ ಆಚರಿಸಿ. ಆಗ ಎಲ್ಲವೂ ಸರಾಗವಾಗಿ ನಡೆಯುತ್ತದೆ ಎಂದು ಹೇಳಿದರು.
ಕೇಂದ್ರ ಸಚಿವ ಸುಕಾಂತ ಮಜುಂದಾರ್ ಮಾತನಾಡಿ, ನಾನು ವಿದ್ಯಾರ್ಥಿಯಾಗಿದ್ದಾಗ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮಸೀದಿ ಇರುವುದರಿಂದ ರನ್‌ವೇ ನಿರ್ಮಿಸಲು ಸಾಧ್ಯವಿಲ್ಲ. ಹಿಂದಿನ ಯಾವುದೇ ಸರ್ಕಾರವು ಕೂಡ ಈ ಬಗ್ಗೆ ಮಾತನಾಡಲಿಲ್ಲ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ನಮಗೆ ಓಲೈಕೆ ರಾಜಕೀಯದಲ್ಲಿ ನಂಬಿಕೆ ಇಲ್ಲ. ಶೀಘ್ರದಲ್ಲೇ ಮಸೀದಿ ಸ್ಥಳಾಂತರಿಸಲಾಗುವುದು ಎಂದರು.
ಉತ್ತರದ ಬಿಜೆಪಿ ಶಾಸಕ ಸೌರವ್ ಸಿಕ್ದರ್ ಅವರು ಮಾತನಾಡಿ, ವಿಮಾನ ನಿಲ್ದಾಣ ಸಂಕೀರ್ಣದಲ್ಲಿರುವ ಮಸೀದಿಯಿಂದಾಗಿ ಎರಡು ರನ್‌ವೇಗಳ ಸಂಪೂರ್ಣ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ವಿಮಾನ ನಿಲ್ದಾಣವು ಸುರಕ್ಷಿತ ಪ್ರದೇಶವಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಯಾವುದೇ ವ್ಯಕ್ತಿಯು ಛಾಯಾಚಿತ್ರದೊಂದಿಗೆ ಬಯೋಮೆಟ್ರಿಕ್ ಪಾಸ್ ಅನ್ನು ಪಡೆಯಬೇಕು. ಮಸೀದಿಯ ಲೆವೆಲ್ 3 ಎಂದು ಕರೆಯಲ್ಪಡುವ ಅತ್ಯುನ್ನತ ಭದ್ರತಾ ಪ್ರದೇಶದಲ್ಲಿದೆ. ಈ ವಿಮಾನ ನಿಲ್ದಾಣಕ್ಕೆ ಪ್ರತಿ ತಿಂಗಳು ಲಕ್ಷಾಂತರ ಪ್ರಯಾಣಿಕರು ಬರುತ್ತಾರೆ. ಹೀಗಾಗಿ ಈಗಿನ ವ್ಯವಸ್ಥೆ ಅಪಾಯಕಾರಿಯಾಗಿರುವಂತೆ ಕಾಣುತ್ತದೆ. ತಮ್ಮ ಪಕ್ಷವು ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದೆ ಎಂದು ಹೇಳಿದರು.
ಓಮನ್ ಕರಾವಳಿಯಲ್ಲಿ 11 ಭಾರತೀಯರಿದ್ದ ಹಡಗಿನ ಮೇಲೆ ದಾಳಿ; 10 ಜನರ ರಕ್ಷಣೆ, ಓರ್ವ ನಾಪತ್ತೆ
ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಸ್ಥಗಿತಗೊಳಿಸಿರುವುದಕ್ಕೆ ಮಸೀದಿ ಸಮಿತಿಯ ಅಧ್ಯಕ್ಷಾರದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಮಾಜಿ ಸಚಿವರಾಗಿದ್ದ ಸಿದ್ದಿಖುಲ್ಲಾ ಚೌಧರಿ ವಿರೋಧಿಸಿದರು. ಮಸೀದಿ 136 ವರ್ಷಗಳಿಂದ ಅಲ್ಲಿದೆ. ನಾವು ಯಾವುದೇ ಸೌಹಾರ್ದಯುತ ಪರಿಹಾರಕ್ಕಾಗಿ ಕಾಯುತ್ತಿದ್ದೇವೆ. ಇದಕ್ಕಾಗಿ ಪ್ರಾರ್ಥನೆಗಳನ್ನು ನಿಲ್ಲಿಸಬೇಕಾದ ಅಗತ್ಯವಿರಲಿಲ್ಲ ಎಂದರು.