ಚೆನ್ನೈ, ಮೇ 10: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Joseph Vijay) ಚೆನ್ನೈಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಾರಂಭವು ಅಚ್ಚರಿಯ ದೃಶ್ಯಗಳಿಗೆ ಸಾಕ್ಷಿಯಾಯಿತು. ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಪದಗ್ರಹಣ ಸಮಾರಂಭದಲ್ಲಿ 'ವಂದೇ ಮಾತರಂ' (Vande Mataram) ಅನ್ನು ಸಂಪೂರ್ಣವಾಗಿ ಹಾಡಲಾಯಿತು. ಅದರ ನಂತರ ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ರಾಜ್ಯ ಗೀತೆ 'ತಮಿಳು ಥಾಯ್ ವಳ್ತು' ಹಾಡಲಾಯಿತು.
ಬಂಗಾಳಿ ಕವಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದ ʼವಂದೇ ಮಾತರಂʼನ ಎಲ್ಲ ಆರು ಚರಣಗಳನ್ನು ಹಾಡಬೇಕು ಮತ್ತು ರಾಷ್ಟ್ರಗೀತೆ (ʼಜನ ಗಣ ಮನʼ) ಮತ್ತು ರಾಷ್ಟ್ರೀಯ ಗೀತೆ (ವಂದೇ ಮಾತರಂ) ಎರಡನ್ನೂ ಒಟ್ಟಿಗೆ ಪ್ರಸ್ತುತಪಡಿಸುವ ಸಂದರ್ಭ ಬಂದಾಗ, ಮೊದಲು 'ವಂದೇ ಮಾತರಂ' ಗೀತೆಯನ್ನು ಹಾಡಬೇಕು ಎಂದು ಜನವರಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತು.
ಇಲ್ಲಿದೆ ವಿಡಿಯೊ:
ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಐತಿಹಾಸಿಕ ಪಾತ್ರ ನಿರ್ವಹಿಸಿದ ʼವಂದೇ ಮಾತರಂʼನ 150ನೇ ವರ್ಷವನ್ನು ಕೇಂದ್ರ ಸರ್ಕಾರ ಆಚರಿಸುತ್ತಿದೆ. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆಗೆ ತಿದ್ದುಪಡಿಯನ್ನು ಅನುಮೋದಿಸಿತು. ಆ ಪ್ರಕಾರ, 'ಜನ ಗಣ ಮನ'ಕ್ಕೆ ಇರುವಷ್ಟೇ ಸಮಾನವಾದ ಗೌರವ ಮತ್ತು ಸ್ಥಾನಮಾನವನ್ನು 'ವಂದೇ ಮಾತರಂ'ಗೂ ನೀಡಲಾಗಿದೆ.
ವಿಜಯ ಸಂಪುಟದಲ್ಲಿರುವ ಸಚಿವರು ಯಾರು? ಅವರ ಹಿನ್ನೆಲೆಯೇನು ಗೊತ್ತಾ?
ಆದರೆ ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಮುಖ್ಯಂಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಈ ರಾಷ್ಟ್ರಗೀತೆಯನ್ನು ನುಡಿಸಲಿಲ್ಲ. ಶನಿವಾರ (ಮೇ 9) ನಡೆದಿದ್ದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಹಾಜರಿದ್ದರು.
ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕಾರ
ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರ ಪೋಷಕರು ಮತ್ತು ಕಾಂಗ್ರೆಸ್‌ನ ಉನ್ನತ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು. ರಾಜ್ಯಪಾಲ ಆರ್.ವಿ. ಅರ್ಲೇಕರ್ ವಿಜಯ್ ಮತ್ತು ಅವರ ಒಂಭತ್ತು ಸಂಪುಟ ಸದಸ್ಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಹಿರಿಯರಾದ ಕೆ.ಎ. ಸೆಂಗೋಟ್ಟೈಯನ್ ಮತ್ತು ಯುವ ಮುಖಗಳಾದ ಟಿ.ಕೆ. ಪ್ರಭು ಮತ್ತು ಎಸ್. ಕೀರ್ತನಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ವಿಜಯ್, ತಾನು ಯಾವುದೇ ರಾಜಮನೆತನಕ್ಕೆ ಸೇರಿದವನಲ್ಲ. ಜನರು ತನ್ನನ್ನು ಆತ್ಮೀಯವಾಗಿ ಸ್ವಾಗತಿಸಿದರು ಎಂದು ಹೇಳಿದರು. ಸುಳ್ಳು ಭರವಸೆಗಳಿಂದ ಜನರನ್ನು ಮೋಸಗೊಳಿಸುವುದಿಲ್ಲ ಎಂದು ಇದೇ ವೇಳೆ ಅವರು ವಚನ ನೀಡಿದರು. ರಾಹುಲ್ ಗಾಂಧಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸೇರಿದಂತೆ ವೇದಿಕೆಯಲ್ಲಿದ್ದವರೊಂದಿಗೆ ವಿಜಯ್ ಸೆಲ್ಫಿ ಕ್ಲಿಕ್ಕಿಸಿದರು. ಈ ಮೂಲಕ ಸಮಾರಂಭವನ್ನು ಮುಕ್ತಾಯಗೊಳಿಸಿದರು.