ದೆಹಲಿ, ಏ. 29: ಏಪ್ರಿಲ್‌ನಲ್ಲಿ ನಡೆದ ಕೇರಳಂ, ತಮಿಳುನಾಡು, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ (Exit Polls) ವರದಿ ಹೊರ ಬಿದ್ದಿದೆ. ಈ ಬಾರಿ ಎಲ್ಲೆಡೆ ಭರ್ಜರಿ ಮತದಾನವಾಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಎಸ್‌ಐಆರ್ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದು, ಈ ಕಾರಣಕ್ಕೂ ಇಡೀ ದೇಶದ ಗಮನ ಸೆಳೆದಿತ್ತು. ಪಶ್ಚಿಮ ಬಂಗಾಳದಲ್ಲಿ 2ನೇ ಮತ್ತು ಕೊನೆಯ ಹಂತದ ಮತದಾನ ಮುಗಿಯತ್ತಿದ್ದಂತೆ ಇದೀಗ ಎಕ್ಸಿಟ್ ಪೋಲ್ ರಿಸಲ್ಟ್ ಹೊರ ಬಿದ್ದಿದ್ದು, ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಅದರ ಪ್ರಕಾರ ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ ಸಿಗಲಿದೆ ಎನ್ನುವ ವಿವರ ಇಲ್ಲಿದೆ.
ಎಕ್ಸಿಟ್ ಪೋಲ್ ಪ್ರಕಾರ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ರಚಿಸಲಿದೆ. ಇನ್ನು ಕೇರಳಂನಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಬಹುಮತ ಪಡೆಯಲಿದ್ದು, ಬಿಜೆಪಿ 3ರವರೆಗೆ ಸೀಟ್ ಪಡೆದುಕೊಳ್ಳಲಿದೆ. ಪುದುಚೇರಿಯಲ್ಲಿ ಎನ್‌ಡಿಎ ಮತ್ತೊಮ್ಮೆ ಸರ್ಕಾರ ರಚಿಸುವ ಸಾಧ್ಯತೆ ಇದೆ. ಎಲ್ಲ ಕಡೆಗಳಲ್ಲಿ ಮೇ 4ರಂದು ಫಲಿತಾಂಶ ಹೊರ ಬೀಳಲಿದ್ದು, ಆಗಷ್ಟೆ ಸ್ಪಷ್ಟ ಚಿತ್ರಣ ಸಿಗಲಿದೆ.
ವಿಡಿಯೊ ಇಲ್ಲಿದೆ:
ಕೇರಳಂ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆದರೆ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನ ಏಪ್ರಿಲ್ 23ರಂದು ನಡೆಯಿತು. ಏಪ್ರಿಲ್ 29ರಂದು ಪಶ್ಚಿಮ ಬಂಗಾಳದ 2ನೇ ಮತ್ತು ಕೊನೆಯ ಹಂತದ ಮತದಾನ ನೆರವೇರಿತು.
ಎಕ್ಸಿಟ್ ಪೋಲ್ ವಿವರ
ಅಸ್ಸಾಂ (126 ಕ್ಷೇತ್ರಗಳು-ಮ್ಯಾಜಿಕ್ ನಂಬರ್ 64)
ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ದೊಡ್ಡ ಗೆಲುವು ಸಾಧಿಸುವ ನಿರೀಕ್ಷೆಯಿದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಎನ್ ಡಿಎ: 88-100, ಕಾಂಗ್ರೆಸ್ +: 24-36, ಇತರ: 0-3
ಪೋಲ್ಸ್ ಆಫ್ ಎಕ್ಸಿಟ್ ಪೋಲ್ ಸಮೀಕ್ಷೆ: ಎನ್ ಡಿಎ: 92, ಕಾಂಗ್ರೆಸ್: 29, ಇತರರು: 9
ಮ್ಯಾಟ್ರಿಜ್ ಸಮೀಕ್ಷೆ: ಎನ್‌ಡಿಎ 85-95, ಕಾಂಗ್ರೆಸ್ +25-32, ಇತರರು: 6-12
ಪಶ್ಚಿಮ ಬಂಗಾಳ (294 ಕ್ಷೇತ್ರಗಳು-ಮ್ಯಾಜಿಕ್ ನಂಬರ್ 148)
ಪಶ್ಚಿಮ ಬಂಗಾಳದ ಸಮೀಕ್ಷೆ ಮಿಶ್ರ ಫಲಿತಾಂಶ ನೀಡಿದೆ. ಕೆಲವು ಸಮೀಕ್ಷೆಗಳು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತೆ ಅಧಕಾರ ಸೂತ್ರ ಹಿಡಿಯಲಿದೆ ಎಂದು ಹೇಳಿದರೆ, ಕೆಲವು ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ಭವಿಷ್ಯ ನುಡಿದಿವೆ.
ಪೀಪಲ್ಸ್ ಪಲ್ಸ್ ಸಮೀಕ್ಷೆ: ಟಿಎಂಸಿ: 177-187, ಬಿಜೆಪಿ: 95-100, ಕಾಂಗ್ರೆಸ್: 1-3, ಎಡ ಪಕ್ಷಗಳು: 0-1
ಪಿ ಮಾರ್ಕ್ ಸಮೀಕ್ಷೆ: ಟಿಎಂಸಿ: 118-138, ಬಿಜೆಪಿ: 150-175, ಕಾಂಗ್ರೆಸ್: 0, ಎಡ ಪಕ್ಷಗಳು: 0
ಚಾಣಕ್ಯ ಸಮೀಕ್ಷೆ: ಟಿಎಂಸಿ: 130-148, ಬಿಜೆಪಿ: 150-160, ಕಾಂಗ್ರೆಸ್: 0, ಎಡ ಪಕ್ಷಗಳು: 0
ತಮಿಳುನಾಡು (234 ಕ್ಷೇತ್ರಗಳು-ಮ್ಯಾಜಿಕ್ ನಂಬರ್ 118)
ದಕ್ಷಿಣದ ಪ್ರಮುಖ ರಾಜ್ಯ ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ಅಧಿಕಾರ ಪಡೆಯಲಿದ ಎಂದು ಸಮೀಕ್ಷೆ ಹೇಳಿದೆ. ಹೊಸದಾಗಿ ರಾಜಕೀಯಕ್ಕೆ ಎಂಟ್ರಿ ನೀಡಿರುವ ನಟ ವಿಜಯ್ ಅವರ ಟಿವಿಕೆ ಖಾತೆ ತೆರೆಯುವ ಸಾಧ್ಯತೆ ಇದೆ.
ವೋಟ್ ವೈಬ್ ಸಮೀಕ್ಷೆ: ಡಿಎಂಕೆ+: 103-113, ಎಐಎಡಿಎಂಕೆ+: 114-124, ಟಿವಿಕೆ: 4-10
ಪಿ ಮಾರ್ಕ್ ಸಮೀಕ್ಷೆ: ಡಿಎಂಕೆ-ಐಎನ್‌ಸಿ: 125-145, ಎನ್‌ಡಿಎ: 65-80, ಟಿವಿಕೆ: 18-24, ಇತರ: 1-6
ಮ್ಯಾಟ್ರಿಜ್ ಸಮೀಕ್ಷೆ: ಡಿಎಂಕೆ+: 122-132, ಎಐಎಡಿಎಂಕೆ+: 87-100, ಟಿವಿಕೆ: 10-12
ಕೇರಳಂ (140 ಕ್ಷೇತ್ರಗಳು-ಮ್ಯಾಜಿಕ್ ನಂಬರ್ 71)
ದೇವರನಾಡು ಕೇರಳದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದ್ದು, ಈ ಬಾರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ ಎಲ್‌ಡಿಎಫ್ ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರಲಿದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಎಲ್‌ಡಿಎಫ್: 49-62, ಯುಡಿಎಫ್: 78-90 ಎನ್‌ಡಿಎ: 0-3
ಮಾಟ್ರಿಜ್ ಸಮೀಕ್ಷೆ: ಎಲ್‌ಡಿಎಫ್: 60-65 ಯುಡಿಎಫ್: 75-85, ಎನ್‌ಡಿಎ: 3-5
ಪೀಪಲ್ಸ್ ಪಲ್ಸ್ ಸಮೀಕ್ಷೆ: ಎಲ್‌ಡಿಎಫ್: 55-65, ಯುಡಿಎಫ್: 70-85, ಎನ್‌ಡಿಎ: 0-3
ಪುದುಚೇರಿ (30 ಕ್ಷೇತ್ರಗಳು-ಮ್ಯಾಜಿಕ್ ನಂಬರ್ 16)
ಪುದುಚೇರಿಯಲ್ಲಿ ಈ ಬಾರಿ ಎನ್ ಡಿಎ ಅಧಿಕಾರ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಎನ್‌ಡಿಎ: 16-20, ಕಾಂಗ್ರೆಸ್+: 6-8, ಇತರ: 3-7