ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಉಚ್ಚಾಟಿತ ನಾಯಕ ಓ ಪನ್ನೀರ್‌ಸೆಲ್ವಂ (ಒಪಿಎಸ್) ಅವರು ಮುಂಬರುವ (Panneerselvam) 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಇಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸಮ್ಮುಖದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದ್ದಾರೆ. ಮೂರು ಬಾರಿ ತಮಿಳುನಾಡು ಮುಖ್ಯಮಂತ್ರಿ ಮತ್ತು ಜೆ ಜಯಲಲಿತಾ ಅವರ ದೀರ್ಘಕಾಲದ ಸಹಾಯಕರಾಗಿದ್ದ ಪನ್ನೀರ್‌ಸೆಲ್ವಂ ಅವರನ್ನು ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಅವರೊಂದಿಗಿನ ತೀವ್ರ ಅಧಿಕಾರ ತಿಕ್ಕಾಟದ ಬಳಿಕ ಹೊರ ಹಾಕಲಾಗಿತ್ತು.
ಡಿಎಂಕೆ ಪಕ್ಷದ ಕಚೇರಿಯಲ್ಲಿಯೇ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಉಪಸ್ಥಿತರಿದ್ದರು. ಬೆಳಿಗ್ಗೆಯಿಂದಲೇ ಸ್ಥಳದ ಹೊರಗೆ ಜಮಾಯಿಸಿದ ಪನ್ನೀರ್‌ಸೆಲ್ವಂ ಅವರ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಿದ್ದರು, ಈ ವೇಳೆ ಪನ್ನೀರ್ ಸೆಲ್ವಂಆಡಳಿತರೂಢ ಡಿಎಂಕೆ ಪಕ್ಷದ ಸದಸ್ಯತ್ವ ಸ್ವೀಕರಿಸಿದ್ದಾರೆ.
ಪನ್ನೀರ್‌ಸೆಲ್ವಂ ಅವರೊಂದಿಗೆ ಎಐಎಡಿಎಂಕೆ ಪಕ್ಷದ ಹಲವರು ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ. 2022ರ ಜುಲೈ 11ರಂದು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ನೇಮಿಸಲಾಗಿತ್ತು. ಪ್ರತಿಸ್ಪರ್ಧಿಯಾಗಿದ್ದ ಒ.ಪನ್ನೀರಸೆಲ್ವಂ ಅವರನ್ನು ಪಕ್ಷದ ಖಜಾಂಚಿ ಹುದ್ದೆ ಮತ್ತು ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಲಾಗಿತ್ತು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದಿಂದ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಪನ್ನೀರ್‌ಸೆಲ್ವಂ, ದಿವಂಗತ ಎಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಅವರ ನಿಧನದ ನಂತರ ಪಕ್ಷದೊಳಗಿನ ದೀರ್ಘಕಾಲದ ನಾಯಕತ್ವ ವಿವಾದಗಳ ನಂತರ ರಾಜಕೀಯವಾಗಿ ಪ್ರತ್ಯೇಕಿಸಲ್ಪಟ್ಟಿದ್ದಾರೆ.
ಎಐಎಡಿಎಂಕೆಗೆ ಸವಾಲು; ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಜಯಲಲಿತಾ ಆಪ್ತೆ ಶಶಿಕಲಾ: ತಮಿಳುನಾಡು ರಾಜಕೀಯದಲ್ಲಿ ಸಂಚಲನ
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ, ಎಂ.ಕೆ. ಸ್ಟಾಲಿನ್ ನೇತೃತ್ವದ ಮೈತ್ರಿಕೂಟವು BJP-AIADMK ಮೈತ್ರಿಕೂಟದ ವಿರುದ್ಧ ಗೆಲ್ಲಲು 'ದ್ರಾವಿಡ ಮಾದರಿ 2.0' ಅನ್ನು ಪರಿಚಯಿಸಲು ಸಿದ್ಧವಾಗಿದೆ. ನಟನಿಂದ ರಾಜಕಾರಣಿಯಾದ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪ್ರವೇಶದೊಂದಿಗೆ ತಮಿಳುನಾಡು ಚುನಾವಣೆ ತ್ರಿಕೋನ ಸ್ಪರ್ಧೆಯಾಗಿ ಬದಲಾಗುವ ನಿರೀಕ್ಷೆಯಿದೆ. 234 ಸದಸ್ಯರ ತಮಿಳುನಾಡು ವಿಧಾನಸಭೆಗೆ 2026 ರ ಮೊದಲಾರ್ಧದಲ್ಲಿ ಚುನಾವಣೆ ನಡೆಯಲಿದೆ.