ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅವಧಿ ಮೀರಿದ ಬಿಸ್ಕೇಟ್‌ ಮಾರಾಟ: ಎಫ್‌ಡಿಎ ಅಧಿಕಾರಿಗೆ ಜನರಿಂದ ಘೇರಾವ್, ಬಾಯಿಗೆ ಬಿಸ್ಕೇಟ್‌ ತುರುಕಲು ಯತ್ನ

Food and Drug Administration: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಮಾರಾಟದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅಂಗಡಿಗೆ ಪರಿಶೀಲನೆಗೆ ತೆರಳಿದ್ದ ಎಫ್‌ಡಿಎ ಅಧಿಕಾರಿಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ. ಅಧಿಕಾರಿಯು ಅಂಗಡಿ ಮಾಲಕನನ್ನು ರಕ್ಷಿಸಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಜನರು, ವಶಪಡಿಸಿಕೊಂಡ ಅವಧಿ ಮೀರಿದ ಬಿಸ್ಕೇಟ್‌ ಅನ್ನು ಅವರೇ ತಿನ್ನುವಂತೆ ಒತ್ತಾಯಿಸಿದ್ದಾರೆ. ಕೆಲವರು ಬಿಸ್ಕೇಟ್‌ ಅಧಿಕಾರಿಯ ಬಾಯಿಗೆ ಹಾಕಲು ಯತ್ನಿಸಿದ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಎಫ್‌ಡಿಎ ಅಧಿಕಾರಿಗೆ ಜನರಿಂದ ತರಾಟೆ

ಮುಂಬೈ, ಆ. 29: ಅವಧಿ ಮೀರಿದ ಬಿಸ್ಕೇಟ್‌ ಪ್ಯಾಕೆಟ್‌ಗಳನ್ನು ಎಫ್‌ಡಿಎ ಅಧಿಕಾರಿಯ ಮುಂದೆ ಹಿಡಿದು ಸಾರ್ವಜನಿಕರು, “ನೀವೇ ತಿನ್ನಿ” ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ. ಅಧಿಕಾರಿ ಅಂಗಡಿ ಮಾಲಕನನ್ನು ರಕ್ಷಿಸಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಸ್ಥಳೀಯರು ಅವರನ್ನು ಸುತ್ತುವರಿದಿದ್ದಾರೆ. ಈ ವೇಳೆ ಕೆಲವರು ಅವಧಿ ಮೀರಿದ ಬಿಸ್ಕೇಟ್‌ ಅಧಿಕಾರಿಯ ಬಾಯಿಗೆ ಬಲವಂತವಾಗಿ ತುರುಕಲು ಯತ್ನಿಸಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.

ಸ್ಥಳೀಯ ಪಾನ್ ಅಂಗಡಿಯಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೇ ಈ ಘಟನೆಗೆ ಕಾರಣ.

ಸ್ಥಳೀಯರ ಪ್ರಕಾರ, ಅಂಗಡಿಯಿಂದ ಖರೀದಿಸಿದ ಖಾರ ಮಿಶ್ರಿತ ತಿಂಡಿ ಸೇವಿಸಿದ ಬಳಿಕ ಎರಡು ವರ್ಷದ ಮಗು ಅಸ್ವಸ್ಥಗೊಂಡು ತಲೆಸುತ್ತು ಅನುಭವಿಸಿತ್ತು. ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಘಟನೆಯ ಬಳಿಕ ಆಕ್ರೋಶಗೊಂಡ ಮಗುವಿನ ಕುಟುಂಬಸ್ಥರು ಹಾಗೂ ಸ್ಥಳೀಯರು ಛತ್ರಪತಿ ಸಂಭಾಜಿನಗರದ ಆಹಾರ ಮತ್ತು ಔಷಧ ಆಡಳಿತ (FDA) ಕಚೇರಿಗೆ ದೂರು ನೀಡಿದ್ದರು.

ಅಧಿಕಾರಿಗೆ ಅವಧಿ ಮೀರಿದ ಬಿಸ್ಕೇಟ್‌ ನೀಡಲು ಯತ್ನಿಸಿದ ಸಾರ್ವಜನಿಕರು:



ದೂರು ಆಧರಿಸಿ FDA ಅಧಿಕಾರಿಯೊಬ್ಬರು ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದರು. ಆದರೆ ಪರಿಶೀಲನೆಗೂ ಮುನ್ನವೇ ಮಗುವಿನ ಅಸ್ವಸ್ಥತೆಗೆ ಕಾರಣವೆಂದು ಆರೋಪಿಸಲಾಗಿದ್ದ ಖಾರ ಮಿಶ್ರಿತ ತಿಂಡಿಯನ್ನು ಅಂಗಡಿಯಿಂದ ತೆರವುಗೊಳಿಸಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪರಿಶೀಲನೆಯ ವೇಳೆ ಅಂಗಡಿಯಲ್ಲಿ ಅವಧಿ ಮೀರಿದ ಹಲವು ಬಿಸ್ಕೇಟ್‌ ಪ್ಯಾಕೆಟ್‌ ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ ಅಂಗಡಿ ಮಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಜನರು ಅಧಿಕಾರಿಯನ್ನು ಸುತ್ತುವರಿದು, “ಬಿಸ್ಕೇಟ್‌ ತಿನ್ನಲು ಯೋಗ್ಯವಾಗಿದ್ದರೆ ನೀವೇ ತಿನ್ನಿ” ಎಂದು ಸವಾಲು ಹಾಕಿದ್ದಾರೆ. ಪರಿಸ್ಥಿತಿ ಕೈ ಮೀರಿದ ಸಂದರ್ಭದಲ್ಲಿ ಕೆಲವರು ಅವಧಿ ಮೀರಿದ ಬಿಸ್ಕೇಟ್‌ ಅಧಿಕಾರಿಯ ಬಾಯಿಗೆ ತುರುಕಲು ಯತ್ನಿಸಿದ್ದಾರೆ.

ಅಧಿಕಾರಿ ಅಂಗಡಿ ಮಾಲಕನನ್ನು ರಕ್ಷಿಸಲು ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪವನ್ನೂ ಸ್ಥಳೀಯರು ಮಾಡಿದ್ದಾರೆ. ಆದರೆ ಈ ಆರೋಪಗಳ ಕುರಿತು ಅಧಿಕಾರಿಗಳಿಂದ ಅಧಿಕೃತ ಸ್ಪಷ್ಟನೆ ಲಭ್ಯವಾಗಬೇಕಿದೆ.

ಮಹಾರಾಷ್ಟ್ರದಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳ ವಿರುದ್ಧ FDA ಪರಿಶೀಲನೆ ಹಾಗೂ ಕ್ರಮಗಳನ್ನು ತೀವ್ರಗೊಳಿಸಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಆಹಾರ ಕಲಬೆರಕೆ, ಅವಧಿ ಮೀರಿದ ಆಹಾರ ಉತ್ಪನ್ನಗಳ ಮಾರಾಟ ಮತ್ತು ಇತರ ಆಹಾರ ಸುರಕ್ಷತಾ ಉಲ್ಲಂಘನೆಗಳ ವಿರುದ್ಧ ರಾಜ್ಯಾದ್ಯಂತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.