ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Fact Check: ರೇಷನ್‌ ಕಾರ್ಡ್‌ ಹೊಂದಿರುವ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಉಚಿತ ಎಸಿ! ಪ್ರಧಾನಿ ನರೇಂದ್ರ ಮೋದಿಯಿಂದ ಹೊಸ ಯೋಜನೆ? ವೈರಲ್‌ ಪೋಸ್ಟ್‌ನ ಅಸಲಿಯತ್ತೇನು?

PIB Fact Check: ಕೇಂದ್ರ ಸರ್ಕಾರ ರೇಷನ್‌ ಕಾರ್ಡ್‌ದಾರರಿಗೆ ಉಚಿತ ಎಸಿ ಒದಗಿಸಲು ಚಿಂತನೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಯೋಜನೆ ಘೋಷಿಸಿದ್ದಾರೆ ಎಂದು ಹೇಳಲಾದ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು. ಎಐ ತಂತ್ರಜ್ಞಾನ ಬಳಸಿ ವಿಡಿಯೊ ಸೃಷ್ಟಿಸಿಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ ತಿಳಿಸಿದೆ.

ಚಾಟ್‌ಜಿಪಿಟಿ ರಚಿತ ಚಿತ್ರ

ದೆಹಲಿ, ಸೆ. 14: ದೇಶಾದ್ಯಂತ ಮಳೆ ಕೈಗೊಟ್ಟಿದ್ದು, ಎಲ್‌ ನೀನೊ ಪರಿಣಾಮದಿಂದ ಈಗಲೇ ಬಿಸಿಲಿನ ಝಳ ಹೆಚ್ಚಾಗತೊಡಗಿದೆ. ಬಿರು ಬೇಸಗೆಯಂತಹ ವಾತಾವರಣ ಅದಾಗಲೇ ಎದುರಾಗುತ್ತಿದ್ದು, ಸೂರ್ಯ ನಿಗಿ ನಿಗಿ ಕೆಂಡದಂತಾಗಿದ್ದಾನೆ. ಜತೆಗೆ ವರ್ಷದಿಂದ ವರ್ಷಕ್ಕೆ ಬಿಸಿಲು ಪ್ರಖರವಾಗುತ್ತಿದ್ದು, ಸೆಖೆಯಿಂದ ಜನ ಬೇಯುವಂತಾಗುತ್ತಿದೆ. ಈ ಮಧ್ಯೆ ಕೇಂದ್ರ ಸರ್ಕಾರ ರೇಷನ್‌ ಕಾರ್ಡ್‌ದಾರರಿಗೆ ಉಚಿತ ಎಸಿ (Free Air Conditioner) ಒದಗಿಸಲು ಚಿಂತನೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಯೋಜನೆ ಘೋಷಿಸಿದ್ದಾರೆ ಎಂದು ಹೇಳಲಾದ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟು ದುಬಾರಿ ಉಪಕರಣವನ್ನು ಕೇಂದ್ರ ಉಚಿತವಾಗಿದ್ದು ನೀಡಲು ಮುಂದಾಗಿದ್ದು ನಿಜವೇ? ಪ್ರಧಾನಿ ಮೋದಿ ಭಾಷಣದ ಅಸಲಿಯತ್ತೇನು? (Fact Check) ಎಂದೂ ಕೆಲವರು ಪ್ರಶ್ನಿಸಿದ್ದಾರೆ. ಈ ಗೊಂದಲಗಳಿಗೆ ಇಲ್ಲಿದೆ ಉತ್ತರ.

ದೇಶದ ಪ್ರತಿ ರೇಷನ್‌ ಕಾರ್ಡ್‌ಗೆ ಒಂದರಂತೆ ಎಸಿ ನೀಡುವುದಾಗಿ ಮೋದಿ ಭಾಷಣ ಮಧ್ಯೆ ಘೋಷಿಸುತ್ತಿರುವುದು ವೈರಲ್‌ ವಿಡಿಯೊದಲ್ಲಿ ಕಂಡು ಬಂದಿದೆ. ಈ ಬಗ್ಗೆ ಫ್ಯಾಕ್ಟ್‌ ಚೆಕ್‌ ನಡೆಸಿದ ಪಿಐಬಿ ಇಂಡಿಯಾ ಇದರ ಹಿಂದಿನ ಸತ್ಯವನ್ನು ಬಯಲಿಗೆಳೆದಿದೆ.

ಫ್ಯಾಕ್ಟ್‌ ಚೆಕ್‌ ವಿವರ ಇಲ್ಲಿದೆ:



ಎಐ ನಿರ್ಮಿತ ವಿಡಿಯೊ

ಇದು ನಿಜವಾದ ವಿಡಿಯೊವಲ್ಲ; ಬದಲಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಮಾಡಲಾದ ವಿಡಿಯೊ ಎನ್ನುವುದನ್ನು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಪಿಐಬಿ ಪೋಸ್ಟ್‌ ಮಾಡಿದ್ದು, ʼʼಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರದ್ದೆಂದು ಬಿಂಬಿಸಿ ಎಐ ರಚಿತ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಮ್ ಖಾತೆ 'mistri_bhau12' ಮೂಲಕ ಹಂಚಿಕೊಳ್ಳಲಾಗುತ್ತಿದೆ. ಪ್ರತಿ ರೇಷನ್ ಕಾರ್ಡ್‌ಗೆ 1 ಏರ್ ಕಂಡೀಷನರ್ ಉಚಿತವಾಗಿ ನೀಡಲಾಗುತ್ತದೆ ಎಂದು ಸುಳ್ಳು ಹೇಳಲಾಗುತ್ತಿದೆ. ಇದು ಸಂಪೂರ್ಣ ನಕಲಿ ಸುದ್ದಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂತಹ ಯಾವುದೇ ಘೋಷಣೆ ಮಾಡಿಲ್ಲ. ದಯವಿಟ್ಟು ಇಂತಹ ಸುಳ್ಳುಗಳಿಗೆ ಮೋಸ ಹೋಗಬೇಡಿʼʼ ಎಂದು ಎಚ್ಚರಿಸಿದೆ. ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಅಧಿಕೃತ ಮಾಹಿತಿಗಾಗಿ myscheme.gov.in ವೆಬ್‌ಸೈಟ್‌ಗೆ ಭೇಟಿ ನೀಡಿʼʼ ಎಂದು ಹೇಳಿದೆ.

ವೈದ್ಯರಿಗಾಗಿ ಯಾವುದೇ ಇಂಟರ್ನ್‌ಶಿಪ್ ಆಯೋಜಿಸಿಲ್ಲ; ನಕಲಿ ಗೂಗಲ್ ಫಾರ್ಮ್ ಬಗ್ಗೆ ಕೇಂದ್ರ ಎಚ್ಚರಿಕೆ

ನಕಲಿ ಸುದ್ದಿ ನಂಬಬೇಡಿ

ಸದ್ಯ ಕಿಡಿಗೇಡಿಗಳು ಅದುನಿಕ ತಂತ್ರಜ್ಞಾನ ಬಳಸಿಕೊಂಡು ನಕಲಿ ಸುದ್ದಿಗಳನ್ನು ನೈಜವೆಂಬಂತೆ ಬಿಂಬಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರವಾಗಿರಿ. ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಆಮಿಷ ಒಡ್ಡಿದರೆ ನಂಬಬೇಡಿ. ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಂತಹ ಯೋಜನೆ ಇದ್ಯಾ ಎನ್ನುವುದನ್ನು ಪರಿಶೀಲಿಸಿ ಎಂದು ಕೇಂದ್ರ ಸಾರ್ವಜನಿಕರಿಗೆ ಸೂಚಿಸಿದೆ. ವಿದ್ಯಾವಂತರೇ ಕೆಲವೊಮ್ಮೆ ಗೊತ್ತಿದ್ದೂ ಇಂತಹ ವಂಚನೆಯ ಜಾಲಕ್ಕೆ ಸಿಲುಕುತ್ತಿದ್ದು, ಪರಿಶೀಲಿಸದ ಹೊರತು ಯಾವುದನ್ನೂ ನಂಬಬೇಡಿ ಎಂದು ಸೂಚಿಸಿದೆ.

ಉಚಿತ ಎಸಿ ಯೋಜನೆ ಇಲ್ಲ ಎಂದ ಕೇಂದ್ರ:



ಆಮಿಷ ಒಡ್ಡುವ ವಂಚಕರು

ʼʼಈ ಯೋಜನೆ ಕೆಲವೊಮ್ಮೆ ಸೈಬರ್‌ ವಂಚಕರ ಜಾಲವಾಗಿರಬಹುದು. ಯೋಜನೆ ಹೆಸರಿನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಖಾತೆಯಲ್ಲಿರುವ ಹಣವನ್ನು ಲಪಟಾಯಿಸುವ ಸಾಧ್ಯತೆಯೂ ಇದೆʼʼ ಎಂದು ತಜ್ಞರು ತಿಳಿಸಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author