ನವದೆಹಲಿ: ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಅಡುಗೆ ಅನಿಲ (LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ದೇಶಾದ್ಯಂತ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗವಾಗಿ ಇಂಡಕ್ಷನ್ ಕುಕ್‌ಟಾಪ್‌ಗಳ (Induction Cooktops) ಬೇಡಿಕೆ ದಿಢೀರನೆ ಏರಿಕೆಯಾಗಿದ್ದು, ಪ್ರಮುಖ ಆನ್‌ಲೈನ್ ಶಾಪಿಂಗ್ (online platforms) ತಾಣಗಳಲ್ಲಿ ಇವು 'ಔಟ್ ಆಫ್ ಸ್ಟಾಕ್' (Out of Stock) ಆಗುತ್ತಿವೆ.
ಆನ್‌ಲೈನ್ ಮಾರುಕಟ್ಟೆಯಲ್ಲಿನ ಸ್ಥಿತಿ:
NDTV ನಡೆಸಿರುವ ಪರೀಕ್ಷೆಯ ಪ್ರಕಾರ, ಅಮೆಜಾನ್ (Amazon), ಫ್ಲಿಪ್‌ಕಾರ್ಟ್ (Flipkart) ಮತ್ತು ಬ್ಲಿಂಕಿಟ್ (Blinkit) ಅಂತಹ ವೇದಿಕೆಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳ ಲಭ್ಯತೆ ಗಣನೀಯವಾಗಿ ಕುಸಿದಿದೆ. ಬ್ಲಿಂಕಿಟ್‌ನಲ್ಲಿ ಬಹುತೇಕ ಎಲ್ಲ ಮಾದರಿಗಳು ಖಾಲಿಯಾಗಿದ್ದರೆ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ ಬೆರಳೆಣಿಕೆಯಷ್ಟು ಬ್ರ್ಯಾಂಡ್‌ಗಳು ಮಾತ್ರ ಲಭ್ಯವಿವೆ. ಪ್ರಮುಖ ಕಂಪನಿಗಳ ಉತ್ಪನ್ನಗಳು ಈಗಾಗಲೇ ಮಾರಾಟವಾಗಿವೆ.
ಮಾರಾಟದಲ್ಲಿ ಭಾರಿ ಏರಿಕೆ:
ಟಾಟಾ ಸಮೂಹದ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಚಿಲ್ಲರೆ ಮಾರಾಟ ಸಂಸ್ಥೆಯಾದ ಕ್ರೋಮಾ (Croma), ಕಳೆದ ಕೆಲವು ದಿನಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳ ಬೇಡಿಕೆಯಲ್ಲಿ ಮೂರು ಪಟ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. ಅಂತೆಯೇ, ಪಿಜನ್ (Pigeon) ಮತ್ತು ಗಿಲ್ಮಾ ಬ್ರ್ಯಾಂಡ್‌ಗಳ ಮಾಲೀಕತ್ವ ಹೊಂದಿರುವ ಸ್ಟೋವ್‌ಕ್ರಾಫ್ಟ್ ಲಿಮಿಟೆಡ್, ಕಳೆದ ಒಂದು ವಾರದಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ತನ್ನ ಮಾರಾಟವು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ವರದಿ ಮಾಡಿದೆ.
LPG Crisis: ಗ್ಯಾಸ್ ಸಿಲಿಂಡರ್ ಅಲಭ್ಯ, ಬನಶಂಕರಿ ದೇವಾಲಯದಲ್ಲಿ ಅನ್ನ ಪ್ರಸಾದ ಬಂದ್
ಸರ್ಕಾರದ ಭರವಸೆ:
ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಕ್ಯೂ ನಿಲ್ಲುತ್ತಿರುವುದು ಮತ್ತು ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಗ್ರಾಹಕರಲ್ಲಿನ ಆತಂಕವನ್ನು ಪ್ರತಿಬಿಂಬಿಸುತ್ತಿದೆ. ಆದರೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಭಾರತದ ಕಚ್ಚಾ ತೈಲ ಪೂರೈಕೆ ಸುರಕ್ಷಿತವಾಗಿದೆ. ನಾವು ಶೇಕಡಾ 70 ರಷ್ಟು ತೈಲವನ್ನು ಹೋರ್ಮುಜ್ ಜಲಸಂಧಿಯ ಹೊರಗಿನ ಮಾರ್ಗಗಳಿಂದ ಪಡೆಯುತ್ತಿದ್ದೇವೆ. ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ," ಎಂದು ತಿಳಿಸಿದ್ದಾರೆ.
ಬುಕ್ಕಿಂಗ್ ಮಾಡಿದ 2.5 ದಿನಗಳಲ್ಲಿ ಸಿಲಿಂಡರ್ ವಿತರಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ಭವಿಷ್ಯದ ಅನಿಶ್ಚಿತತೆಗೆ ಹೆದರಿ ಜನ ಸಾಮಾನ್ಯರು ವಿದ್ಯುತ್ ಚಾಲಿತ ಒಲೆಗಳ ಮೊರೆ ಹೋಗುತ್ತಿದ್ದಾರೆ.