Fire Accident: ಕರಾಳ ಭಾನುವಾರ; ಹೈದರಾಬಾದ್ ಜತೆಗೆ ಮಹಾರಾಷ್ಟ್ರದಲ್ಲಿಯೂ ಬೆಂಕಿ ಅವಘಡ: 8 ಮಂದಿ ಸಜೀವ ದಹನ
ಮಹಾರಾಷ್ಟ್ರದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಮೂವರು ಮಹಿಳೆಯರು, ಮಕ್ಕಳು ಸೇರಿ 8 ಮಂದಿ ಮೃತಪಟ್ಟಿದ್ದಾರೆ. ಸೋಲಾಪುರ ಜಿಲ್ಲೆಯ ಬಟ್ಟೆ ಕಾರ್ಖಾನೆಯೊಂದರಲ್ಲಿ ಭಾನುವಾರ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಸಂತ್ರಸ್ತರಿಗೆ ಪ್ರಧಾನಿ ಮೋದಿ ಪರಿಹಾರ ಘೋಷಿಸಿದ್ದಾರೆ.


ಮುಂಬೈ: ಮಹಾರಾಷ್ಟ್ರದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಮೂವರು ಮಹಿಳೆಯರು, ಮಕ್ಕಳು ಸೇರಿ 8 ಮಂದಿ ಮೃತಪಟ್ಟಿದ್ದಾರೆ. ಸೋಲಾಪುರ ಜಿಲ್ಲೆಯ ಬಟ್ಟೆ ಕಾರ್ಖಾನೆಯೊಂದರಲ್ಲಿ ಭಾನುವಾರ (ಮೇ 18) ಈ ಅವಘಡ ಸಂಭವಿಸಿದೆ (Fire Accident) ಎಂದು ಮೂಲಗಳು ತಿಳಿಸಿವೆ. ಮುಂಬೈಯಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ಸೋಲಾಪುರ ಎಂಐಡಿಸಿಯ ಅಕ್ಕಲ್ಕೋಟ್ ರಸ್ತೆಯಲ್ಲಿರುವ ಸೆಂಟ್ರಲ್ ಟೆಕ್ಸ್‌ಟೈಲ್ ಮಿಲ್ಸ್‌ನಲ್ಲಿ ಬೆಳಗಿನ ಜಾವ 3:45ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ ಕಾರ್ಖಾನೆಯ ಮಾಲೀಕ ಹಾಜಿ ಉಸ್ಮಾನ್ ಹಸನ್‌ಭಾಯ್ ಮನ್ಸೂರಿ, ಅವರ ಒಂದೂವರೆ ವರ್ಷದ ಮೊಮ್ಮಗ ಸೇರಿದಂತೆ ಕುಟುಂಬದ ಮೂವರು ಸದಸ್ಯರು ಮತ್ತು ನಾಲ್ವರು ಕಾರ್ಮಿಕರು ಸೇರಿದ್ದಾರೆ. ''ಮೃತರಲ್ಲಿ ಮೂವರು ಮಹಿಳೆಯರೂ ಇದ್ದಾರೆ'' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ನಿಯಂತ್ರಿಸಲು ಐದರಿಂದ ಆರು ಗಂಟೆಗಳು ಬೇಕಾಯಿತು.
ಪ್ರಧಾನ ಮಂತ್ರಿ ಕಚೇರಿಯ ಎಕ್ಸ್ ಪೋಸ್ಟ್:
Pained by the loss of lives due to a fire tragedy in Solapur, Maharashtra. Condolences to those who have lost their loved ones. May the injured recover soon.
— PMO India (@PMOIndia) May 18, 2025
An ex-gratia of Rs. 2 lakh from PMNRF would be given to the next of kin of each deceased. The injured would be given Rs.…
ಈ ಸುದ್ದಿಯನ್ನೂ ಓದಿ: Fire Accident: ಆಳಂದದಲ್ಲಿ ಪುಸ್ತಕ ಗೋದಾಮಿಗೆ ಬೆಂಕಿ; ಕೋಟ್ಯಂತರ ರೂ. ಮೌಲ್ಯದ ಪಠ್ಯ ಪುಸ್ತಕಗಳು ಸುಟ್ಟು ಭಸ್ಮ
ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ
ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಸಲಾಗಿದೆ.
#WATCH | Maharashtra | Fire broke out at a factory located in the MIDC area in Maharashtra's Solapur. Fire tenders are present at the spot. More details awaited. pic.twitter.com/cqE4YJGQKY
— ANI (@ANI) May 18, 2025
"ಮಹಾರಾಷ್ಟ್ರದ ಸೋಲಾಪುರದಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ 8 ಮಂದಿ ಮೃತಪಟ್ಟಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಮೃತರ ಸಂಬಂಧಿಕರಿಗೆ ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು" ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಎಕ್ಸ್‌ನಲ್ಲಿ ತಿಳಿಸಿದೆ.
ಹೈದರಬಾದ್ ಅಗ್ನಿ ದುರಂತದಲ್ಲಿ 17 ಮಂದಿ ದುರ್ಮರಣ
ಇನ್ನು ಭಾನುವಾರ ತೆಲಂಗಾಣದ ಹೈದರಾಬಾದ್‌ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಲ್ಲಿ ಸುಮಾರು 17 ಮಂದಿ ಸುಟ್ಟು ಕರಕಲಾಗಿದ್ದಾರೆ. ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿರುವ ಕಟ್ಟಡದಲ್ಲಿ ಬೆಳಗ್ಗೆ ಬೆಂಕಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲವಾದರೂ, ಶಾರ್ಟ್ ಸರ್ಕ್ಯೂಟ್ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಕೆಲವು ಆಭರಣ ಅಂಗಡಿಗಳನ್ನು ಹೊಂದಿರುವ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ನಂತರ ಶೀಘ್ರದಲ್ಲೇ 3 ಅಂತಸ್ತಿನ ಕಟ್ಟಡದ ಮೇಲಿನ ಮಹಡಿಗಳಿಗೆ ಬೆಂಕಿ ಹರಡಿತು. ಮೇಲಿನ ಮಹಡಿಯಲ್ಲಿ ಕೆಲವು ಕುಟುಂಬಗಳು ವಾಸಿಸುತ್ತಿದ್ದವು.
ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಮಾತನಾಡಿ, "ಈ ಘಟನೆ ಬಗ್ಗೆ ನಾನು ಕೇಂದ್ರ ಸರ್ಕಾರ ಮತ್ತು ಪ್ರಧಾನಿಯೊಂದಿಗೆ ಮಾತನಾಡುತ್ತೇನೆ ಮತ್ತು ಮೃತಪಟ್ಟವರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲು ಪ್ರಯತ್ನಿಸುತ್ತೇನೆʼʼ ಎಂದು ಭರವಸೆ ನೀಡಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದಾರೆ.