ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಜೆಪಿ ಶಾಸಕನ ಮನೆ ತೊಳೆಯಲು ಅಗ್ನಿ ಶಾಮಕ ದಳ ವಾಹನ ಬಳಕೆ; ಅಧಿಕಾರದ ದರ್ಪ ಎಂದ ನೆಟ್ಟಿಗರು: ವಿಡಿಯೊ ವೈರಲ್‌

BJP MLA Bachubhai Khabad: ಗುಜರಾತ್‌ನ ದಾಹೋದ್ ಜಿಲ್ಲೆಯ ಬಿಜೆಪಿ ಶಾಸಕ ಬಚುಭಾಯಿ ಖಾಬಡ್ ಅವರ ನಿವಾಸದ ಮೇಲೆ ದೇವಗಢ್ ಬರಿಯಾ ಪುರಸಭೆಯ ಫೈರ್ ಎಂಜಿನ್‌ನಿಂದ ನೀರು ಸಿಂಪಡಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಬೆಂಕಿ ನಂದಿಸಲು ಬಳಸಬೇಕಾದ ತುರ್ತು ವಾಹನವನ್ನು ಬಂಗಲೆ ತೊಳೆಯಲು ಬಳಸಲು ಸೂಚಿಸಲಾಗಿತ್ತು ಎಂದು ಫೈರ್ ಎಂಜಿನ್‌ ಅಧಿಕಾರಿ ತಿಳಿಸಿದ್ದಾರೆ. ಸಿಬ್ಬಂದಿ ಕಾರ್ಯಾಚರಣೆಯನ್ನು ತಡೆದಿದ್ದು, ವಾಹನ ಸ್ಥಳಕ್ಕೆ ತೆರಳಿದ ಹಿನ್ನೆಲೆಯಲ್ಲಿ 2,700 ರೂಪಾಯಿ ಶುಲ್ಕವನ್ನು ವಸೂಲಿ ಮಾಡಲಾಗಿದೆ. ಘಟನೆ ಕುರಿತು ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಫೈರ್ ಎಂಜಿನ್ ವಾಹನ ಮತ್ತು ಗುಜರಾತ್‌ನ ಧನ್‌ಪುರ ತಾಲೂಕಿನಲ್ಲಿರುವ ಶಾಸಕ ಬಚುಭಾಯಿ ಖಾಬಡ್ ಅವರ ಬಂಗಲೆ

ಗಾಂಧಿನಗರ, ಅ. 6: ತುರ್ತು ಪರಿಸ್ಥಿತಿಗಳಲ್ಲಿ ಬೆಂಕಿ ನಂದಿಸಲು ಬಳಸಬೇಕಾದ ಅಗ್ನಿಶಾಮಕ ವಾಹನವನ್ನು ಶಾಸಕನ ಬಂಗಲೆ ತೊಳೆಯಲು ಬಳಿಸಿರುವ ಆರೋಪ ಕೇಳಿಬಂದಿದ್ದು, ಶಾಸಕನ ಈ ನಡೆಯ ಕುರಿತು ಗುಜರಾತ್‌ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ದೇವಗಢ್ ಬರಿಯಾ ಪುರಸಭೆಗೆ ಸೇರಿದ ಫೈರ್ ಎಂಜಿನ್‌ನ ನೀರನ್ನು ಧನ್‌ಪುರ ತಾಲೂಕಿನ ಪಿಪೇರೋ ಗ್ರಾಮದಲ್ಲಿರುವ ಶಾಸಕ ಬಚುಭಾಯಿ ಖಾಬಡ್ (Bachubhai Khabad) ಅವರ ನಿವಾಸದ ಮೇಲೆ ಸಿಂಪಡಿಸುತ್ತಿರುವ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ ಫೈರ್ ಎಂಜಿನ್‌ನಿಂದ ಬಂಗಲೆ ಸುತ್ತಮುತ್ತ ನೀರು ಸಿಂಪಡಿಸುತ್ತಿರುವುದು ಕಂಡುಬಂದಿದ್ದು, ತುರ್ತು ಸೇವೆಯ ವಾಹನವನ್ನು ಖಾಸಗಿ ಕೆಲಸಕ್ಕೆ ಬಳಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದುರಾಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಶಾಸಕರಿಂದ ₹ 2,700 ಶುಲ್ಕ ವಸೂಲಿ

ವಿಡಿಯೊ ವೈರಲ್ ಆದ ಬೆನ್ನಲ್ಲೇ ಅಧಿಕಾರಿಗಳು ಘಟನೆ ಕುರಿತು ಕ್ರಮ ಕೈಗೊಂಡಿದ್ದು, ಫೈರ್ ಎಂಜಿನ್ ಸ್ಥಳಕ್ಕೆ ತೆರಳಿದ್ದಕ್ಕಾಗಿ ₹ 2,700 ಶುಲ್ಕವನ್ನು ಬಚುಭಾಯಿ ಖಾಬಡ್ ಅವರಿಂದ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಬದೇವಗಢ್ ಬರಿಯಾ ಪುರಸಭೆ ಅಧ್ಯಕ್ಷ ಘಮೇಶ್ ಕಲಾಲ್ ಈ ಕುರಿತು ಸ್ಪಷ್ಟನೆ ನೀಡಿದ್ದು, ಶಾಸಕರಿಂದ ಫೈರ್ ಎಂಜಿನ್ ಕಳುಹಿಸುವಂತೆ ಕರೆ ಬಂದಿತ್ತು ಎಂದು ಹೇಳಿದ್ದಾರೆ. ಕರೆ ಬಂದಾಗ ಏನಾದರೂ ಗಂಭೀರ ಘಟನೆ ಸಂಭವಿಸಿರಬಹುದು ಎಂದು ಭಾವಿಸಿ, ತಕ್ಷಣ ಅಗ್ನಿಶಾಮಕ ಇಲಾಖೆಗೆ ವಾಹನ ಕಳುಹಿಸುವಂತೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.

ಕತ್ತಿನಲ್ಲಿ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ ಅರಣ್ಯಾಧಿಕಾರಿಗಳು

ಸ್ಥಳಕ್ಕೆ ಹೋದಾಗ ಬೇರೆಯದ್ದೇ ಬೇಡಿಕೆ

ಫೈರ್ ಎಂಜಿನ್ ಪಿಪೇರೋ ಗ್ರಾಮದಲ್ಲಿರುವ ಶಾಸಕರ ನಿವಾಸಕ್ಕೆ ತಲುಪಿದ ಬಳಿಕ, ಸಹಚರರು ಸಿಬ್ಬಂದಿಗೆ ಮನೆಯನ್ನು ತೊಳೆಯಲು ವಾಹನವನ್ನು ಬಳಸುವಂತೆ ಸೂಚಿಸಿದ್ದರು ಎಂದು ಫೈರ್ ಅಧಿಕಾರಿ ಮಯೂರ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಈ ವೇಳೆ ಸಿಬ್ಬಂದಿ ಶಾಸಕರು ನೀಡಿದ ಕೆಲಸವನ್ನು ತಮ್ಮ ಅಧಿಕಾರಿಗೆ ಮಾಹಿತಿ ನೀಡಿದ್ದು, ಅದು ತುರ್ತು ಅಗ್ನಿಶಾಮಕ ಕಾರ್ಯಾಚರಣೆಯಲ್ಲ ಎಂದು ಅರಿತ ಅಧಿಕಾರಿಗಳು ತಕ್ಷಣವೇ ಆ ಕೆಲಸವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಸಿಬ್ಬಂದಿಗೆ ಮನೆಯ ಮುಂಭಾಗದಿಂದಲೇ ನೀರು ಹಾಕಿ ತೊಳೆಯುವಂತೆ ಸೂಚಿಸಲಾಗಿತ್ತು. ಈ ಮಾಹಿತಿ ದೊರೆತ ಬಳಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ವಾಹನ ಸ್ಥಳಕ್ಕೆ ತೆರಳಿದ ಶುಲ್ಕವನ್ನು ವಸೂಲಿ ಮಾಡಲಾಗಿದೆ.

ಹೋಕ್ಸ್ ಕಾಲ್ ಬಗ್ಗೆ ತನಿಖೆ

ಫೈರ್ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ, ಪಿಪೇರೋ ಗ್ರಾಮದಲ್ಲಿ ಘಟನೆ ನಡೆದಿದೆ ಎಂಬ ಮಾಹಿತಿ ಆಧರಿಸಿಯೇ ಫೈರ್ ಎಂಜಿನ್ ಕಳುಹಿಸಲಾಗಿತ್ತು. ಆದರೆ ಸ್ಥಳಕ್ಕೆ ತೆರಳಿದ ನಂತರ ಯಾವುದೇ ಅಗ್ನಿ ಅವಘಡದ ಬದಲು ಬಂಗಲೆ ತೊಳೆಯುವಂತೆ ಸೂಚನೆ ಬಂದಿರುವುದು ಬೆಳಕಿಗೆ ಬಂದಿದೆ.

ಹೀಗಾಗಿ ಫೈರ್ ಎಂಜಿನ್‌ ಅನ್ನು ತಪ್ಪು ಮಾಹಿತಿಯ ಮೂಲಕ ಕರೆಸಲಾಗಿತ್ತೇ? ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅಗ್ನಿಶಾಮಕ ವಾಹನದಂತಹ ತುರ್ತು ಸೇವಾ ಸಂಪನ್ಮೂಲಗಳನ್ನು ಖಾಸಗಿ ಉದ್ದೇಶಗಳಿಗೆ ಬಳಸಬಹುದೇ? ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಅಧಿಕಾರಿಗಳ ಮುಂದಿನ ತನಿಖೆಯ ಬಳಿಕ ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.