ಭೋಪಾಲ್, ಜೂ. 14: ದೇಶದಲ್ಲಿ ಮತ್ತೊಂದು ಭೀಕರ ರೈಲು ಅಪಘಾತ ಸಂಭವಿಸಿದೆ (Train Accident). ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರು ಜಿಗಿದಿದ್ದು, ಇದೇ ವೇಳೆ ಪಕ್ಕದ ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಮತ್ತೊಂದು ರೈಲು ಹರಿದು ನಾಲ್ವರು ಮೃತಪಟ್ಟಿದ್ದಾರೆ. ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಈ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ (ಜೂನ್ 14) ಸಂಜೆ 4:15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಖಜುರಾಹೊ-ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 19665) ರೈಲು ಝಾನ್ಸಿ ವಿಭಾಗವಾದ ಹೇತಾಂಪುರ್ ಮತ್ತು ಧೋಲ್ಪುರ್ ನಿಲ್ದಾಣಗಳ ನಡುವೆ ನಿಂತಾಗ ಈ ಅಪಘಾತ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಸಾಮಾನ್ಯ ಭೋಗಿಯ ಪ್ರಯಾಣಿಕನೊಬ್ಬ ಚೈನ್ ಎಳೆದು ರೈಲು ನಿಲ್ಲಿಸಿದ ಬಳಿಕ ಹಲವರು ಒಮ್ಮೆಲೇ ಕೆಳಗೆ ಇಳಿದಿದ್ದರು.
ರೈಲ್ವೆ ಆಡಳಿತ ಬಿಡುಗಡೆ ಮಾಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ರೈಲು ನಿಲ್ಲುತ್ತಿದ್ದಂತೆ ಹಲವು ಪ್ರಯಾಣಿಕರು ಇಳಿದು ಪಕ್ಕದ ಹಳಿಗೆ ತೆರಳಿದರು. ಈ ಸಮಯದಲ್ಲಿ ಫಿರೋಜ್‌ಪುರ-ಸಿಯೋನಿ ಪಾತಾಳಕೋಟ್ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 20424) ಆಗಮಿಸಿದ್ದು, ಪ್ರಯಾಣಿಕರ ಮೇಲೆ ಹರಿದಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈಲು ಅಪಘಾತದ ದೃಶ್ಯ:
ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಆಡಳಿತ, ರೈಲ್ವೆ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ಸ್ಥಳೀಯಾಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. "ಇದ್ದಕ್ಕಿದ್ದಂತೆ ರೈಲು ನಿಂತಾಗ, ಕೆಲವು ಪ್ರಯಾಣಿಕರು ಕೆಳಗಿಳಿದರು. ಈ ವೇಳೆ ಮತ್ತೊಂದು ಹಳಿಯಲ್ಲಿ ಫಿರೋಜ್‌ಪುರ-ಸಿಯೋನಿ ಪಾತಾಳಕೋಟ್ ಎಕ್ಸ್‌ಪ್ರೆಸ್ ಪ್ರಯಾಣಿಸುತ್ತಿತ್ತು. ಹಳಿ ದಾಟುತ್ತಿದ್ದ ಈ ಪ್ರಯಾಣಿಕರ ಮೇಲೆ ಪಾತಾಳಕೋಟ್ ಎಕ್ಸ್‌ಪ್ರೆಸ್ ಎಕ್ಸ್‌ಪ್ರೆಸ್ ಹರಿದಿದೆ" ಎಂದು ಉತ್ತರ ಮಧ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ʼʼಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಬೆಂಕಿ ವದಂತಿ ಹರಡಿದ್ದೇಗೆ ಎನ್ನುವುದನ್ನು ತಿಳಿಯಲು, ದುರಂತದ ನಿಖರ ಕಾರಣ ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಯಾಣಿಕ ಚೈನ್ ಎಳೆದಿರುವ ಹಿಂದಿನ ಕಾರಣವನ್ನು ಇನ್ನೂ ನಿರ್ಧರಿಸಿಲ್ಲ. ರೈಲು ಚಲಿಸುತ್ತಿರಲಿ ಅಥವಾ ನಿಂತಿರಲಿ, ಅನುಮತಿಯಿಲ್ಲದೆ ರೈಲಿನಿಂದ ಇಳಿಯಬಾರದು ಮತ್ತು ಅಂತಹ ಘಟನೆಗಳನ್ನು ತಡೆಗಟ್ಟಲು ರೈಲ್ವೆ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರೈಲ್ವೆ ಆಡಳಿತವು ಸೂಚಿಸಿದೆ.
ಎರಡು ರೈಲುಗಳ ನಡುವೆ ಡಿಕ್ಕಿ; ನಾಲ್ವರ ಸಾವು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಘಟನೆಯನ್ನು ವಿವರಿಸಿದ್ದಾರೆ. ''ಯಾರೋ ಚೈನ್ ಎಳೆದು ಬೆಂಕಿ ಹೊತ್ತಿಕೊಂಡಿದೆ ಎಂದು ಕೂಗಲು ಪ್ರಾರಂಭಿಸಿದಾಗ ಭಯದ ವಾತಾವರಣ ನಿರ್ಮಾಣವಾಯಿತು. ಪ್ರಯಾಣಿಕರು ತಕ್ಷಣ ರೈಲಿನಿಂದ ಇಳಿಯಲು ಪ್ರಾರಂಭಿಸಿದರು. ಪ್ರಯಾಣಿಕರು ಪಕ್ಕದ ಹಳಿಯನ್ನು ದಾಟುತ್ತಿದ್ದಾಗ, ಪಾತಾಳಕೋಟ್ ಎಕ್ಸ್‌ಪ್ರೆಸ್ ಇನ್ನೊಂದು ದಿಕ್ಕಿನಿಂದ ಸಮೀಪಿಸಿತು. ಹಲವು ಪ್ರಯಾಣಿಕರಿಗೆ ರೈಲು ಡಿಕ್ಕಿ ಹೊಡೆಯಿತುʼʼ ಎಂದು ಅವರು ಹೇಳಿದ್ದಾರೆ. ಮೃತ ನಾಲ್ವರು ಒಂದೇ ಕುಟುಂಬಸ್ಥರು ಎನ್ನಲಾಗಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.