ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಫೋನ್ ಬದಲು ಗಡ್ಡ ಬೆಳೆಸುವ ಎಣ್ಣೆ ಕಳುಹಿಸಿದ ಫ್ಲಿಪ್‌ಕಾರ್ಟ್‌ ; ಮುಂದೇನಾಯ್ತು?

ಮುಂಬೈನ ಗ್ರಾಹಕರೊಬ್ಬರಿಗೆ ಫ್ಲಿಪ್‌ಕಾರ್ಟ್ ಮೂಲಕ ಆರ್ಡರ್ ಮಾಡಿದ ಐಫೋನ್ 14 ಪ್ರೊ ಬದಲಾಗಿ ಗಡ್ಡ ಬೆಳೆಸುವ ಎಣ್ಣೆ ತಲುಪಿದ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯವು ಫ್ಲಿಪ್‌ಕಾರ್ಟ್ ಮತ್ತು ಮಾರಾಟಗಾರರಿಗೆ ₹1.8 ಲಕ್ಷಕ್ಕೂ ಅಧಿಕ ಮೊತ್ತವನ್ನು ಬಡ್ಡಿ ಹಾಗೂ ಪರಿಹಾರ ಸಮೇತ ಪಾವತಿಸಲು ಆದೇಶಿಸಿದೆ. ಆದರೆ ಈ ಪ್ರಕರಣದಲ್ಲಿ ಆಪಲ್ ಇಂಡಿಯಾ ವಿರುದ್ಧದ ದೂರನ್ನು ನ್ಯಾಯಾಲಯ ವಜಾಗೊಳಿಸಿದೆ.

ಫ್ಲಿಪ್‌ಕಾರ್ಟ್

ನವದೆಹಲಿ: ಫ್ಲಿಪ್‌ಕಾರ್ಟ್ (Flipkart) ಮೂಲಕ ಆಪಲ್ ಐಫೋನ್ (iPhone) ಆರ್ಡರ್ ಮಾಡಿದ ಗ್ರಾಹಕನಿಗೆ ಬೆಲೆಬಾಳುವ ಫೋನ್ ಬದಲಾಗಿ 'ಗಡ್ಡ ಬೆಳೆಸುವ ಎಣ್ಣೆ' (Beard Growth Oil) ತಲುಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗ್ರಾಹಕ ನ್ಯಾಯಾಲಯ(consumer court) ವು ಫ್ಲಿಪ್‌ಕಾರ್ಟ್ ಹಾಗೂ ಇ-ಕಾಮರ್ಸ್ ಮಾರಾಟಗಾರನಿಗೆ ₹1.8 ಲಕ್ಷಕ್ಕೂ ಹೆಚ್ಚು ಮೊತ್ತ ಪಾವತಿಸುವಂತೆ ಅತ್ಯಂತ ಮಹತ್ವದ ಆದೇಶ ನೀಡಿದೆ.

ಮುಂಬೈನ ಉಪನಗರ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ಆಯೋಗವು ಈ ಆದೇಶವನ್ನು ಹೊರಡಿಸಿದೆ. ಗ್ರಾಹಕರು ನಿಯಮಾವಳಿಗಳ ಪ್ರಕಾರ ದಾಖಲಿಸಿದ ದೂರುಗಳನ್ನು ಯಾವುದೇ ಸೂಕ್ತ ಪರಿಹಾರ ನೀಡದೆ ಪದೇ ಪದೇ ಕೋಸ್ ಮಾಡುವುದು "ಅನುಚಿತ ವ್ಯಾಪಾರ ಅಭ್ಯಾಸ" ಮತ್ತು "ಸೇವೆಯಲ್ಲಿನ ಗಂಭೀರ ನ್ಯೂನತೆ" ಎಂದು ನ್ಯಾಯಾಲಯ ಖಂಡಿಸಿದೆ.

ಮಗುಗೆ ಎಚ್ಚರವಾಗಬಹುದೆಂದು ಡೈಪರ್ ಆರ್ಡರ್ ಮಾಡಿದ ಮಹಿಳೆಯ ಮನೆಯ ಡೋರ್ ಬೆಲ್ ಮಾಡದ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

ಏನಿದು ಪ್ರಕರಣದ?

ಮುಂಬೈನ ಪೊವಾಯ್ ನಿವಾಸಿಯೊಬ್ಬರು ಏಪ್ರಿಲ್ 22, 2023 ರಂದು ಫ್ಲಿಪ್‌ಕಾರ್ಟ್‌ನಲ್ಲಿ ₹1,11,793 ಮೌಲ್ಯದ 'ಆಪಲ್ ಐಫೋನ್ 14 ಪ್ರೊ (128 GB)' ಫೋನ್ ಅನ್ನು ನೋ-ಕಾಸ್ಟ್ ಇಎಂಐ ಮೂಲಕ ಖರೀದಿಸಿದ್ದರು. ಪ್ರತ್ಯೇಕವಾಗಿ ಆರ್ಡರ್ ಮಾಡಲಾಗಿದ್ದ ಚಾರ್ಜರ್ ಮತ್ತು ಕವರ್ ಗ್ರಾಹಕರಿಗೆ ಸರಿಯಾಗಿ ತಲುಪಿದ್ದವು. ಆದರೆ ಮಾರನೇ ದಿನ ತಲುಪಿದ ಪ್ರಮುಖ ಪಾರ್ಸೆಲ್‌ನಲ್ಲಿ ಬೆಲೆಬಾಳುವ ಸ್ಮಾರ್ಟ್‌ಫೋನ್ ಬದಲು ಗಡ್ಡ ಬೆಳೆಸುವ ಎಣ್ಣೆ ಮತ್ತು ಪ್ಯಾಕಿಂಗ್ ಸಾಮಗ್ರಿಗಳಿದ್ದವು.

ಗ್ರಾಹಕರು ತಕ್ಷಣವೇ ಫ್ಲಿಪ್‌ಕಾರ್ಟ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳು ಹಾಗೂ ಫೋಟೋಗಳನ್ನು ಸಲ್ಲಿಸಿದರೂ, ಸಂಸ್ಥೆಯು ಯಾವುದೇ ಹಣ ಹಿಂತಿರುಗಿಸದೇ ಅಥವಾ ಹೊಸ ಫೋನ್ ನೀಡದೇ ದೂರನ್ನು 'ಪರಿಹರಿಸಲಾಗಿದೆ' ಎಂದು ಪದೇ ಪದೇ ಮುಚ್ಚಿಹಾಕಿತ್ತು.

ನ್ಯಾಯಾಲಯದ ತೀರ್ಪು:

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಕೇವಲ ವಸ್ತುಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿ ನಂತರ ತಮ್ಮ ಜವಾಬ್ದಾರಿಯಿಂದ ಸಂಪೂರ್ಣವಾಗಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸರಿಯಾದ ಉತ್ಪನ್ನ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸಮಸ್ಯೆ ಬಂದಾಗ ಪರಿಹರಿಸುವುದು ಫ್ಲಿಪ್‌ಕಾರ್ಟ್ ಮತ್ತು ಮಾರಾಟಗಾರ ಕಂಪನಿಯ (International Value Retail Pvt Ltd) ಜವಾಬ್ದಾರಿಯಾಗಿದೆ ಎಂದು ಆಯೋಗ ತಿಳಿಸಿದೆ. ಗ್ರಾಹಕರಿಗೆ ಉಂಟಾದ ನಷ್ಟ ಮತ್ತು ಅನುಭವಿಸಿದ ಅಪಾರ ಮಾನಸಿಕ ಕಿರುಕುಳಕ್ಕೆ ಫ್ಲಿಪ್‌ಕಾರ್ಟ್ ಹಾಗೂ ಮಾರಾಟಗಾರ ಕಂಪನಿ ಎರಡೂ ಜಂಟಿಯಾಗಿ ಹೊಣೆಗಾರರಾಗುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಆದ್ದರಿಂದ, ಖರೀದಿಸಿದ ಮೂಲ ಮೊತ್ತ ₹1,11,793 ಅನ್ನು ಏಪ್ರಿಲ್ 22, 2023 ರಿಂದ ಹಣ ಪಾವತಿಯಾಗುವವರೆಗೆ ಶೇ. 9 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಹಿಂತಿರುಗಿಸಬೇಕು.ಹಾಗೂ ಮಾನಸಿಕ ಕಿರುಕುಳಕ್ಕೆ ₹50,000 ಪರಿಹಾರ ಹಾಗೂ ಕಾನೂನು ವೆಚ್ಚವಾಗಿ ₹20,000 ಸೇರಿದಂತೆ ಒಟ್ಟು ₹70,000 ಹಣವನ್ನು 45 ದಿನಗಳ ನಿಗದಿತ ಅವಧಿಯೊಳಗೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.

ಇದೇ ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ 'ಆಪಲ್ ಇಂಡಿಯಾ' (Apple India) ಕಂಪನಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಉತ್ಪನ್ನದ ಪ್ಯಾಕಿಂಗ್ ಅಥವಾ ಪೂರೈಕೆಯಲ್ಲಿ ತಯಾರಕ ಕಂಪನಿಯ ಯಾವುದೇ ನೇರ ಪಾತ್ರವಿಲ್ಲದಿರುವುದರಿಂದ ಆಪಲ್ ಮೇಲಿನ ದೂರನ್ನು ಸಂಪೂರ್ಣವಾಗಿ ವಜಾಗೊಳಿಸಲಾಗಿದೆ.