ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ದೆಹಲಿ ಬಾಂಬ್‌ ಸ್ಫೋಟದ ಮಹತ್ವದ ರಹಸ್ಯ ಬಯಲು; ನೇಪಾಳದಿಂದ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಖರೀದಿಸಿದ್ದ ಉಗ್ರರು

ನವೆಂಬರ್‌ 10ರಂದು ನಡೆದ ದೆಹಲಿ ಕೆಂಪು ಕೋಟೆ ಸಮೀಪದ ಕಾರ್‌ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದ ಮಹತ್ವದ ವಿವರ ಹೊರ ಬಿದ್ದಿದೆ. ಈ ಸಂಚಿನಲ್ಲಿ ಭಾಗಿಯಾದ ಉಗ್ರರು ಸಂವಹನಕ್ಕಾಗಿ ನೇಪಾಳದಿಂದ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಫೋನ್‌ ಮತ್ತು ಉತ್ತರ ಪ್ರದೇಶದ ಕಾನ್ಪುರದಿಂದ ಸಿಮ್‌ ಖರೀದಿಸಿರುವ ವಿವರ ಗೊತ್ತಾಗಿದೆ.

ದೆಹಲಿ ಬಾಂಬ್‌ ಸ್ಫೋಟದ ಉಗ್ರರು ನೇಪಾಳದಿಂದ ಮೊಬೈಲ್‌ ಖರೀದಿಸಿರುವ ವಿಚಾರ ಬೆಳಕಿಗೆ (ಸಂಗ್ರಹ ಚಿತ್ರ).

ದೆಹಲಿ, ನ. 17: ಕೆಂಪು ಕೋಟೆ ಸಮೀಪ ಕಾರ್‌ ಬಾಂಬ್‌ ಸ್ಫೋಟ (Delhi Blast) ನಡೆದು 1 ವಾರ ಕಳೆದಿದ್ದು, ಇದೀಗ ಒಂದೊಂದೇ ರಹಸ್ಯ ಬೆಳಕಿಗೆ ಬರುತ್ತಿದೆ. ಇದರ ಹಿಂದಿನ ಜೈಶ್‌-ಎ-ಮೊಹಮ್ಮದ್‌ ಉಗ್ರರ ಸಂಚು ಬಯಲಾಗಿದ್ದು, ಗೂಢಾಲೋಚನೆಗೆ ಸಂಬಂಧಿಸಿದ ವಿವರಗಳು ಹೊರ ಬೀಳುತ್ತಿವೆ. ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಕೈಗೆತ್ತಿಕೊಂಡಿದ್ದು, ಜಾಲವನ್ನು ಬುಡ ಸಮೇತ ಕಿತ್ತು ಹಾಕುವ ಪಣ ತೊಟ್ಟಿದೆ. ಜಮ್ಮು ಮತ್ತು ಕಾಶ್ಮೀರ ಮೂಲದ ವೈದ್ಯ ಉಮರ್‌ ಮೊಹಮ್ಮದ್‌ ಆಲಿಯಾಸ್‌ ಉಮರ್‌ ಉನ್‌ನಬಿ ನವೆಂಬರ್‌ 10ರ ಸಂಜೆ ಹ್ಯುಂಡೈ ಐ20 ಕಾರನ್ನು ಚಲಾಯಿಸಿಕೊಂಡು ಹೋಗಿ ಮೆಟ್ರೋ ಸ್ಟೇಷನ್‌ ಬಳಿ ಸ್ಫೋಟಿಸಿ 13 ಮಂದಿಯ ಸಾವಿಗೆ ಕಾರಣವಾಗಿದ್ದ. ಈ ಸಂಚಿನಲ್ಲಿ ಭಾಗಿಯಾದ ಉಗ್ರರು ಸಂವಹನಕ್ಕಾಗಿ ನೇಪಾಳದಿಂದ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಫೋನ್‌ ಮತ್ತು ಉತ್ತರ ಪ್ರದೇಶದ ಕಾನ್ಪುರದಿಂದ ಸಿಮ್‌ ಖರೀದಿಸಿರುವ ವಿವರ ಗೊತ್ತಾಗಿದೆ.

ಉಗ್ರರು ದೆಹಲಿ ಸ್ಫೋಟದ ಸಂಚಿನ ಭಾಗವಾಗಿ ಬರೋಬ್ಬರಿ 7 ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಫೋನ್‌ ಮತ್ತು 17 ಸಿಮ್‌ ತೆಗೆದುಕೊಂಡಿದ್ದರು. ಈ ಪೈಕಿ 6 ಸಿಮ್‌ ಕಾನ್ಪುರದಲ್ಲಿ ಖರೀದಿಸಲಾಗಿದೆ. 2 ಸಿಮ್‌ಗಳನ್ನು ಕಾನ್ಪುರದ ಕೇಂದ್ರ ವಸತಿ ಮತ್ತು ವಾಣಿಜ್ಯ ಪ್ರದೇಶವಾದ ಬೆಕೊಂಗಂಜ್‌ನ ಐಡಿ ಬಳಸಿಕೊಂಡು ಖರೀದಿಸಿರುವುದು ಕಂಡು ಬಂದಿದೆ.

Delhi Blast: ನಾಲ್ವರು ಉಗ್ರ ವೈದ್ಯರ ವೈದ್ಯಕೀಯ ನೋಂದಣಿ ರದ್ದು; NMC ಮಹತ್ವದ ಆದೇಶ

ದೆಹಲಿ ಸ್ಫೋಟಕ್ಕೂ ಮುನ್ನ ಮೂವರು ವೈದ್ಯ ಭಯೋತ್ಪಾದಕರು ಡಾ. ಉಮರ್‌ ಮೊಹಮ್ಮದ್‌ ಜತೆ ಸಂಪರ್ಕದಲ್ಲಿದ್ದುದು ಪತ್ತೆಯಾಗಿದೆ. ಈ ಮೂವರನ್ನು ಡಾ. ಪರ್ವೇಜ್‌, ಡಾ, ಮೊಹಮ್ಮದ್‌ ಆರಿಫ್‌ ಮತ್ತು ಡಾ. ಫಾರುಖ್‌ ಅಹಮ್ಮದ್‌ ದಾರ್‌ ಎಂದು ಗುರುತಿಸಲಾಗಿದೆ. ಈ ಪೈಕಿ ಡಾ. ಪರ್ವೇಜ್‌ ಈಗಾಗಲೇ ಬಂಧಿತಳಾಗಿರುವ ಹರಿಯಾಣದ ಫರಿದಾಬಾದ್‌ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯದ ವೈದ್ಯೆ ಡಾ. ಶಹೀನ್‌ ಶಹೀದ್‌ನ ಸಹೋದರ. ಈತ ಲಖನೌ ಇಂಟೆಗ್ರಲ್‌ ವಿಶ್ವ ವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಡಾ. ಮೊಹಮ್ಮದ್‌ ಆರಿಫ್‌ ಕಾನ್ಪುರರ ಜಿಎಸ್‌ವಿಎಂ ಮೆಡಿಕಲ್‌ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ. ಇನ್ನು ಡಾ. ಫಾರುಖ್‌ ಅಹಮ್ಮದ್‌ ಉತ್ತರ ಪ್ರದೇಶದ ಹಾರ್ಪುರ ಜಿಎಸ್‌ ಮೆಡಿಕಲ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಡಾ. ಶಹೀನ್‌ ಮತ್ತು ಮತ್ತೊಬ್ಬ ಶಂಕಿತ ಉಗ್ರ ಡಾ. ಮುಜಾಮ್ಮಿಲ್‌ ನವೆಂಬರ್‌ 8ರ ಬೆಳಗ್ಗೆಯವರೆಗೆ ಉಮರ್‌ ಜತೆ ಸಂಪರ್ಕದಲ್ಲಿದ್ದುದು ಕೂಡ ಗೊತ್ತಾಗಿದೆ. ಸದ್ಯ ಈ ಎಲ್ಲ ಶಂಕಿತರನ್ನು 4 ವಾರಗಳ ಕಾಲ ವಶಕ್ಕೆ ಪಡೆಯಲಾಗಿದೆ. ಅಕ್ಟೋಬರ್‌ 2ರಂದು ಸಂಚಿನ ಯೋಜನೆ ಆರಂಭಿಸಿದ ಅವರು ಅದನ್ನು ಅಕ್ಟೋಬರ್‌ 28ರ ವೇಳೆ ಪೂರ್ಣಗಳಿಸಿದ್ದರು ಎನ್ನಲಾಗಿದೆ.

Delhi blast: ದೆಹಲಿಯಲ್ಲಿ ಕಾರು ಸ್ಫೋಟಿಸಿದ ಕಿರಾತಕನ ಕಾಶ್ಮೀರದ ಮನೆ ಧ್ವಂಸ

ಕಾನ್ಪುರ ಲಿಂಕ್‌

ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಶಂಕೆಯ ಮೇರೆಗೆ ದೆಹಲಿ ಪೊಲೀಸರ ವಿಶೇಷ ದಳವು ಬೆಕೊನ್‌ಗಂಜ್‌ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಮತ್ತು ಡಾ. ಪರ್ವೇಜ್‌ನ ಸೋದರ ಮಾವ ಉಸ್ಮಾನ್‌ನನ್ನು 6 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಆದಾಗ್ಯೂ ಯಾವುದೇ ಮಹತ್ವದ ಮಾಹಿತಿ ಹೊರಬಂದಿಲ್ಲ. ಕಾನ್ಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ. ಪರ್ವೇಜ್ ಕರ್ನಲ್‌ಗಂಜ್, ಜಿಎಸ್‌ವಿಎಂ ವೈದ್ಯಕೀಯ ಕಾಲೇಜು, ಬಾಬುಪೂರ್ವ ಮತ್ತು ಮಂಧಾನಾದಲ್ಲಿ ಸ್ನೇಹಿತರನ್ನು ಭೇಟಿಯಾಗಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಡಾ. ಶಹೀನ್ ಅಕ್ಟೋಬರ್‌ನಲ್ಲಿ ಕಾನ್ಪುರದಲ್ಲಿ ಕಾಣಿಸಿಕೊಂಡಿದ್ದಳು.