Delhi Blast: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಜೊತೆ ಸಂಪರ್ಕದಲ್ಲಿದ್ದಳು ಡಾ. ಶಹೀನ್; ಬಗೆದಷ್ಟು ಬಯಲಾಗ್ತಿದೆ ವೈಟ್ ಕಾಲರ್ ಟೆರರಿಸಂ
ದೆಹಲಿ ಸ್ಫೋಟ ಮತ್ತು ಫರಿದಾಬಾದ್ ಸ್ಫೋಟಕ ಸಾಗಣೆಯಲ್ಲಿ ಜೈಶ್-ಎ-ಮೊಹಮ್ಮದ್ ನಂಟು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು, ಡಾ. ಶಾಹೀನ್ ಸಯೀದ್‌ಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಆಕೆ ಜೈಶ್ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಮರ್ ಫಾರೂಕ್ ಪತ್ನಿ ಅಫಿರಾ ಬೀಬಿಯೊಂದಿಗೆ ಸಂಪರ್ಕದಲ್ಲಿದ್ದಳು.
ಡಾ. ಶಹೀನ್ (ಸಂಗ್ರಹ ಚಿತ್ರ) -
ನವದೆಹಲಿ: ದೆಹಲಿ ಸ್ಫೋಟ ಮತ್ತು ಫರಿದಾಬಾದ್ ಸ್ಫೋಟಕ (Delhi Blast) ಸಾಗಣೆಯಲ್ಲಿ ಜೈಶ್-ಎ-ಮೊಹಮ್ಮದ್ ನಂಟು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು, ಡಾ. ಶಾಹೀನ್ ಸಯೀದ್‌ಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಆಕೆ ಜೈಶ್ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ (Pulvama Attack) ಮಾಸ್ಟರ್ ಮೈಂಡ್ ಉಮರ್ ಫಾರೂಕ್ ಪತ್ನಿ ಅಫಿರಾ ಬೀಬಿಯೊಂದಿಗೆ ಸಂಪರ್ಕದಲ್ಲಿದ್ದಳು ಎಂಬ ಆಘಾತಕಾರಿ ಅಂಶ ತಿಳಿದು ಬಂದಿದೆ. 2019 ರ ಪುಲ್ವಾಮಾ ದಾಳಿಯ ನಂತರ ನಡೆದ ಎನ್‌ಕೌಂಟರ್‌ನಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಸೋದರಳಿಯ ಉಮರ್ ಫಾರೂಕ್ ಸಾವನ್ನಪ್ಪಿದ್ದ.
ಉಮರ್ ಪತ್ನಿ ಅಫಿರಾ ಬೀಬಿ ಜೈಶ್ ಹೊಸದಾಗಿ ಆರಂಭಿಸಿದ ಮಹಿಳಾ ಬ್ರಿಗೇಡ್ ಜಮಾತ್-ಉಲ್-ಮೊಮಿನಾತ್‌ನಲ್ಲಿ ಶಹೀನ್ ಸಕ್ರಿಯಳಾಗಿದ್ದಳು. ದೆಹಲಿಯಲ್ಲಿ ಸ್ಫೋಟಕ್ಕೆ ವಾರಗಳ ಮೊದಲು, ಅಫಿರಾ ಬ್ರಿಗೇಡ್‌ನ ಸಲಹಾ ಮಂಡಳಿಯಾದ ಶುರಾದಲ್ಲಿ ಈಕೆ ಸೇರಿದ್ದಳು. ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಹಿರಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಶಾಹೀನ್ ಸಯೀದ್ ಕಾರಿನಲ್ಲಿ ಅಸಾಲ್ಟ್ ರೈಫಲ್‌ಗಳು ಮತ್ತು ಇತರ ಮದ್ದುಗುಂಡುಗಳು ಪತ್ತೆಯಾದ ನಂತರ ಬಂಧಿಸಲಾಯಿತು.
ಈ ಸುದ್ದಿಯನ್ನೂ ಓದಿ: Delhi Bomb Blast: ದೆಹಲಿಯಲ್ಲಿ ಮತ್ತೊಂದು ಭಾರೀ ಸ್ಫೋಟದ ಶಬ್ಧ- ಮತ್ತೆ ಆತಂಕ
ಜಮಾತ್-ಉಲ್-ಮೊಮಿನಾತ್ ಅನ್ನು ಭಾರತದಲ್ಲಿ ಸ್ಥಾಪಿಸಿ ಸಕ್ರಿಯಗೊಳಿಸುವ ಜವಾಬ್ದಾರಿಯನ್ನು ಶಹೀನ್‌ಗೆ ವಹಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಲಕ್ನೋ ಮೂಲದ ಶಾಹೀನ್ ಸಯೀದ್, ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲು ಹಲವಾರು ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡಿದ್ದಳು. ಇದುವರೆಗಿನ ತನಿಖೆಯ ಪ್ರಕಾರ, ಆಕೆ ಸೆಪ್ಟೆಂಬರ್ 2012 ರಿಂದ ಡಿಸೆಂಬರ್ 2013 ರವರೆಗೆ ಕಾನ್ಪುರದ ವೈದ್ಯಕೀಯ ಕಾಲೇಜಿನಲ್ಲಿ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥರಾದ್ದಳು. ಪಾಸ್‌ಪೋರ್ಟ್ ವಿವರಗಳ ಪ್ರಕಾರ, 2016 ರಿಂದ 2018 ರವರೆಗೆ ಎರಡು ವರ್ಷಗಳ ಕಾಲ ಯುಎಇಯಲ್ಲಿ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಸದ್ಯ ಈಕೆಯನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಕಾನ್ಪುರ ವೈದ್ಯಕೀಯ ವಿದ್ಯಾರ್ಥಿ ಬಂಧನ
ದೆಹಲಿ ಸ್ಫೋಟದ ತನಿಖೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಕಾನ್ಪುರದ ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ (ಜಿಎಸ್‌ವಿಎಂ) ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಎಂ (ಹೃದಯಶಾಸ್ತ್ರ) ವಿದ್ಯಾರ್ಥಿಯಾಗಿರುವ 32 ವರ್ಷದ ಡಾ. ಮೊಹಮ್ಮದ್ ಆರಿಫ್ ಬಂಧನಕ್ಕೊಳಗಾಗಿರುವ ವೈದ್ಯನಾಗಿದ್ದಾನೆ. ಆತನನ್ನು ಬಹಿರಂಗಪಡಿಸದ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಜೊತೆ ಸಂಪರ್ಕ ಹೊಂದಿರುವ "ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್" ತನಿಖೆಯ ಭಾಗವಾಗಿ ಅಲ್ ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಈತ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ.