ಲಕ್ನೋ: ಉತ್ತರ ಪ್ರದೇಶ ಕೆಡರ್‌ನ ದಕ್ಷ ಹಾಗೂ ಜನಪ್ರಿಯ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ (Divya Mittal) ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸುವುದಾಗಿ ಇಂದು ಘೋಷಿಸಿದ್ದಾರೆ. ಕಳೆದ ತಿಂಗಳು (ಆಗಸ್ಟ್ 30) ತಮ್ಮ 13 ವರ್ಷಗಳ ಸುದೀರ್ಘ ನಾಗರಿಕ ಸೇವೆಗೆ ದಿಢೀರ್ ರಾಜೀನಾಮೆ ನೀಡಿದ್ದ ಅವರು, ಇಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಎಕ್ಸ್ ಪೋಸ್ಟ್ ಮೂಲಕ ಈ ಕುರಿತು ವೀಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ʼಉತ್ತರ ಪ್ರದೇಶ ನನ್ನ ಕರ್ಮಭೂಮಿ, ನಾನು ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದೇನೆ, ಅದರೆ ಯಾವುದೇ ಪ್ರಭಾವಿ ಪಕ್ಷವನ್ನು ಸೇರುವುದಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.
ವೀಡಿಯೋದಲ್ಲಿ ಮಾತನಾಡಿರುವ ದಿವ್ಯಾ ಮಿತ್ತಲ್, ಯಾವುದೇ ಪ್ರಭಾವಿ ರಾಜಕೀಯ ಪಕ್ಷಗಳಿಗೆ ಸೇರದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ. ತಮ್ಮ ರಾಜಕೀಯ ಪ್ರವೇಶವು ಯಾವುದೇ ಹುದ್ದೆ ಅಥವಾ ಅಧಿಕಾರದ ಆಸೆಗೆ ಅಲ್ಲ. ವ್ಯವಸ್ಥೆಯ ತಳಮಟ್ಟದಲ್ಲಿದ್ದುಕೊಂಡು ಸಾರ್ವಜನಿಕರ ನಿಜವಾದ ಸಮಸ್ಯೆಗಳಿಗೆ ಧ್ವನಿಯಾಗಲು ಈ ನಿರ್ಧಾರ ತಳೆದಿರುವುದಾಗಿ ತಿಳಿಸಿದ್ದಾರೆ. ʼʼಜನರು ಯಾರೋ ಒಬ್ಬ ರಕ್ಷಕ ಬಂದು ಸಮಸ್ಯೆ ಪರಿಹರಿಸುತ್ತಾನೆ ಎಂದು ಕಾಯಬಾರದು. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕುʼʼ ಎಂದು ಕರೆ ನೀಡಿದ್ದಾರೆ.
ಉತ್ತರ ಪ್ರದೇಶವೇ ನನ್ನ ಕರ್ಮಭೂಮಿ ಎಂದ ದಿವ್ಯಾ ಮಿತ್ತಲ್, ʼʼನಾನು ಅಧಿಕಾರಿಯಾಗಿ ಉತ್ತರ ಪ್ರದೇಶಕ್ಕೆ ಬಂದೆ, ಆದರೆ ಇಲ್ಲಿನ ಜನರು ನನ್ನನ್ನು ತಮ್ಮ ಮಗಳಂತೆ ಸ್ವೀಕರಿಸಿದ್ದಾರೆ. ಹೀಗಾಗಿ ಉತ್ತರ ಪ್ರದೇಶವೇ ನನ್ನ ಕರ್ಮಭೂಮಿ. ನಾನು ಯಾರಿಗೂ ಹೆದರುವುದಿಲ್ಲ, ಸಾರ್ವಜನಿಕರ ಪರವಾಗಿ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆʼʼ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
ಐಐಟಿ ದೆಹಲಿಯಲ್ಲಿ ಬಿ.ಟೆಕ್ ಹಾಗೂ ಐಐಎಂ ಬೆಂಗಳೂರಿನಲ್ಲಿ ಎಂಬಿಎ ಪೂರ್ಣಗೊಳಿಸಿದ್ದ ದಿವ್ಯಾ ಮಿತ್ತಲ್, ಲಂಡನ್‌ನಲ್ಲಿ ಉತ್ತಮ ಉದ್ಯೋಗದಲ್ಲಿದ್ದರು. ದೇಶಸೇವೆಯ ಉದ್ದೇಶದಿಂದ ಲಂಡನ್ ಕೆಲಸ ತೊರೆದು ಭಾರತಕ್ಕೆ ಮರಳಿ, 2013ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಮಿರ್ಜಾಪುರ, ದೇವರಿಯಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಆಗಸ್ಟ್ 30, 2026 ರಂದು ದಿವ್ಯಾ ಮಿತ್ತಲ್ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆಯನ್ನು ಉತ್ತರ ಪ್ರದೇಶ ಸರ್ಕಾರ ಸೆಪ್ಟೆಂಬರ್ 15 ರಂದು ಪುರಸ್ಕರಿಸಿತ್ತು. ರಾಜೀನಾಮೆ ಬಳಿಕ ಅವರು ಯಾವುದೇ ರಾಜಕೀಯ ಪಕ್ಷ ಸೇರಲಿದ್ದಾರೆ ಅಥವಾ ಕೋಚಿಂಗ್ ಸೆಂಟರ್ ಆರಂಭಿಸಲಿದ್ದಾರೆ ಎಂಬ ಊಹಾಪೋಹಗಳಿದ್ದವು. ಇದೀಗ ಆ ಪ್ರಶ್ನೆಗೆ ತೆರೆ ಬಿದ್ದಿದೆ.
ಐಪಿಎಸ್ ಹುದ್ದೆ ತೊರೆದು ರಾಜಕೀಯ ಪಯಣ ಬೆಳೆಸಿದ್ದ ಅಣ್ಣಾಮಲೈ
ಕರ್ನಾಟಕದಲ್ಲಿ ‘ಸಿಂಗಂ’ಎಂದೇ ಹೆಸರುವಾಸಿಯಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಕೂಡ ಇದೇ ರೀತಿ ಆಡಳಿತ ಸೇವೆಯ ಗಡಿ ಮೀರಿ ಸಾರ್ವಜನಿಕರ ಸೇವೆ ಮಾಡುವ ಉದ್ದೇಶದಿಂದ 2019 ರಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆರಂಭದಲ್ಲಿ ಪ್ರಮುಖ ರಾಜಕೀಯ ಪಕ್ಷ ಬಿಜೆಪಿ ಜೊತೆ ಗುರುತಿಸಿಕೊಂಡು ಸಕ್ರಿಯರಾಗಿದ್ದ ಅವರು, ಸ್ವತಂತ್ರ ಆಲೋಚನೆ ಹಾಗೂ ತಮ್ಮದೇ ಸಿದ್ಧಾಂತಗಳ ಕಾರಣಕ್ಕೆ ಇತ್ತೀಚೆಗೆ ರಾಜಕೀಯ ಚೌಕಟ್ಟಿನಿಂದ ಹೊರಬಂದಿದ್ದಾರೆ. ಪ್ರಸ್ತುತ ಯಾವುದೇ ಪ್ರಮುಖ ಪಕ್ಷಕ್ಕೆ ಸೇರದೆ, ತಮ್ಮದೇ ಆದ 'ವಿ ದಿ ಲೀಡರ್ಸ್' ಎಂಬ ಸ್ವತಂತ್ರ ವೇದಿಕೆಯ ಮೂಲಕ ಸಾರ್ವಜನಿಕ ಕ್ಷೇತ್ರ ಮತ್ತು ಜನಸಾಮಾನ್ಯರ ಪರವಾಗಿ ತಮ್ಮದೇ ಶೈಲಿಯ ಪಯಣ ಮುಂದುವರಿಸಿದ್ದಾರೆ.