ಅಮರಾವತಿ, ಫೆ. 23: ಅನಧಿಕೃತ ಮಾರಾಟಗಾರರಿಂದ ಸರಬರಾಜು ಮಾಡಲಾದ ಕಲಬೆರಕೆ ಹಾಲು (Adulterated Milk) ಸೇವಿಸಿದ ನಂತರ ಕಳೆದ 48 ಗಂಟೆಗಳಲ್ಲಿ ನಾಲ್ವರು ಮೃತಪಟ್ಟ ಘಟನೆ ಆಂಧ್ರ ಪ್ರದೇಶದ (Andhra Pradesh) ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ (ಫೆಬ್ರವರಿ 22) ಇಬ್ಬರು ಮೃತಪಟ್ಟರೆ, ಸೋಮವಾರ ಇಬ್ಬರು ಸಾವಿಗೀಡಾಗಿದ್ದಾರೆ. ʼʼನಗರದಲ್ಲಿ ಅನಧಿಕೃತ ಮಾರಾಟಗಾರರಿಂದ ಸರಬರಾಜು ಮಾಡಲಾದ ಕಲಬೆರಕೆ ಹಾಲು ಸೇವಿಸಿದ ನಂತರ ಕಳೆದ ಎರಡು ದಿನಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆʼʼ ಎಂದು ರಾಜಮಹೇಂದ್ರವರಂ ಉತ್ತರ ವಲಯದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ವೈ. ಶ್ರೀಕಾಂತ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಕಲುಷಿತ ಹಾಲು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಿದ್ದು, ಹಠಾತ್ ಮೂತ್ರ ವಿಸರ್ಜನೆಯಲ್ಲಿ ಅಡಚಣೆ ಉಂಟಾಗಿ ಸಾವಿಗೆ ಕಾರಣವಾಗಿದೆ ಎಂದು ಅವರು ಹೇಳಿದರು. ಮೃತಪಟ್ಟ ನಾಲ್ವರು ರಾಜಮಹೇಂದ್ರವರಂನ ಮನೆಗಳಿಗೆ ಹಾಲು ಪೂರೈಸುವ ಅದೇ ಸ್ಥಳೀಯ ಮಾರಾಟಗಾರರಿಂದ ಹಾಲು ಖರೀದಿಸಿದ್ದರು.
ರಾಸಾಯನಿಕ ಬಳಸಿ ನಂದಿನಿ ಸೇರಿ ಹಲವು ಕಂಪನಿಗಳ ನಕಲಿ ಹಾಲು ತಯಾರಿಕೆ
ಮಾರಾಟಗಾರರು ಸುಮಾರು 40 ದನಗಳು ಮತ್ತು ಸ್ಥಳೀಯ ರೈತರಿಂದ ಹಾಲನ್ನು ಪಡೆದು ಮನೆಗಳಿಗೆ ವಿತರಿಸುತ್ತಿದ್ದರು ಎಂದು ಡಿಎಸ್‌ಪಿ ಹೇಳಿದರು. ಆಹಾರ ಸುರಕ್ಷತಾ ಅಧಿಕಾರಿಗಳು ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. ಅದೇ ವೇಳೆ, ಹಲವು ತಂಡಗಳು ಪಕ್ಕದ ಪ್ರದೇಶಗಳಲ್ಲಿ ಸ್ಥಳೀಯ ಪರಿಶೀಲನೆಗಳನ್ನು ನಡೆಸಿವೆ ಮತ್ತು ವೈದ್ಯಕೀಯ ನಿಗಾವನ್ನು ಹೆಚ್ಚಿಸಿವೆ.
ರಾಜಮಹೇಂದ್ರವರಂನಲ್ಲಿ ವರದಿಯಾದ ಸಾವುಗಳ ನಂತರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೋಮವಾರ ಪರಿಶೀಲನಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಪೀಡಿತ ಪ್ರದೇಶಗಳಲ್ಲಿ ಕ್ಷೇತ್ರಮಟ್ಟದ ಶಿಬಿರಗಳು ಹಾಗೂ ತ್ವರಿತ ಪರೀಕ್ಷಾ ವೈದ್ಯಕೀಯ ಶಿಬಿರಗಳನ್ನು ಒಳಗೊಂಡಂತೆ ಒದಗಿಸಲಾಗುತ್ತಿರುವ ವೈದ್ಯಕೀಯ ಸಹಾಯ ಮತ್ತು ವ್ಯವಸ್ಥೆಗಳ ಬಗ್ಗೆ ಅವರಿಗೆ ವಿವರಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಹೊಸ ವರ್ಷಕ್ಕೆ ಹಾಲಿನ ದರ ಹೆಚ್ಚಳದ ಕೊಡುಗೆ ನೀಡಿದ ಚಿಮುಲ್: ಹಾಲು ಉತ್ಪಾದಕರಿಗೆ ಲೀಟರ್‌ಗೆ ರೂ.1 ದರ ಹೆಚ್ಚಳ
ಚಿಕಿತ್ಸೆ ಪಡೆಯುತ್ತಿರುವವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 106 ಮನೆಗಳಿಗೆ ಹಾಲು ಸರಬರಾಜು ಮಾಡಲಾಗಿದ್ದು, 75 ಜನರಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ನಾಯ್ಡು ಅವರಿಗೆ ಮಾಹಿತಿ ನೀಡಿದರು. ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಆದೇಶಿಸಿದರು.