ಇಂಫಾಲ್/ಗುವಾಹಟಿ, ಆ. 27: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ನಾಗಾ ಬುಡಕಟ್ಟು (Naga community) ಸಮುದಾಯಕ್ಕೆ ಸೇರಿದ ನಾಲ್ವರನ್ನು ಅಪರಿಚಿತ ಬಂಡುಕೋರರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುವಾರ (ಆಗಸ್ಟ್ 27) ಬೆಳಗ್ಗೆ ನಡೆದಿದೆ. ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಓರ್ವ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ ಸುಮಾರು 8.30ಕ್ಕೆ ನಾಗಾ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಈ ದಾಳಿ ನಡೆದಿದೆ. ಹತ್ಯೆಯಾದವರಲ್ಲಿ ಓರ್ವ ಶಾಲಾ ಮುಖ್ಯೋಪಾಧ್ಯಾಯ ಕೂಡ ಇದ್ದಾರೆ ಎಂದು ನಾಗಾ ಬುಡಕಟ್ಟು ಸಂಘಟನೆಗಳು ಹೇಳಿವೆ.
ಘಟನೆಗೆ ಸಂಬಂಧಿಸಿದಂತೆ ದಾಳಿಕೋರರನ್ನು ಮಣಿಪುರ ಪೊಲೀಸರು ಇನ್ನೂ ಗುರುತಿಸಿಲ್ಲ. ಮುಖ್ಯಮಂತ್ರಿ ಯುಮ್ನಮ್ ಖೇಮಚಂದ್ ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಘಟನೆ ಕುರಿತು ಚರ್ಚಿಸಲಾಯಿತು. SoO (Suspension of Operations) ಒಪ್ಪಂದದಡಿ ಇರುವ ಸಂಘಟನೆಗಳ ಸದಸ್ಯರು ಅಥವಾ ಸರ್ಕಾರದೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿರುವ ಗುಂಪುಗಳ ಕಾರ್ಯಕರ್ತರು ತಮ್ಮ ನಿಗದಿತ ಶಿಬಿರಗಳ ಹೊರಗೆ ಶಸ್ತ್ರಾಸ್ತ್ರಗಳೊಂದಿಗೆ ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ದಾಳಿಕೋರರನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವಂತೆ ಭದ್ರತಾ ಪಡೆಗಳಿಗೆ ಮುಖ್ಯಮಂತ್ರಿ ಸಿಂಗ್ ಸೂಚಿಸಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದೇ ವೇಳೆ, ನಾಗಾ ಪೀಪಲ್ಸ್ ಆರ್ಗನೈಸೇಷನ್ (NPO) ಸೆನಾಪತಿ ಜಿಲ್ಲೆಯಲ್ಲಿ ಎಲ್ಲ ಅಂಗಡಿ-ಮುಂಗಟ್ಟು ಹಾಗೂ ವ್ಯಾಪಾರ ಸಂಸ್ಥೆಗಳನ್ನು ತಕ್ಷಣ ಬಂದ್ ಮಾಡುವಂತೆ ಕರೆ ನೀಡಿದೆ. ಹಲವು ನಾಗಾ ಸಂಘಟನೆಗಳು ಹತ್ಯೆಯನ್ನು ತೀವ್ರವಾಗಿ ಖಂಡಿಸಿವೆ.
ಕಳೆದ ಮೇ 13ರಂದು ಕಾಂಗ್‌ಪೊಕ್ಪಿ ಜಿಲ್ಲೆಯ ಗ್ರಾಮವೊಂದರಿಂದ ನಾಗಾ ಸಮುದಾಯದ ಆರು ಮಂದಿಯನ್ನು ಒತ್ತೆಯಾಳುಗಳಾಗಿ ಕರೆದೊಯ್ಯಲಾಗಿತ್ತು. ಜೂನ್ 10ರಂದು ಕುಕಿ ವಸತಿ ಪ್ರದೇಶದ ಸಮೀಪ ಅವರ ಮೃತದೇಹಗಳು ಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ನಲ್ಲಿ ಕುಕಿ-ಜೋ ಕೌನ್ಸಿಲ್ ಅಧ್ಯಕ್ಷ ಹೆನ್ಲಿಯೆಂತಾಂಗ್ ಥಾಂಗ್ಲೆಟ್ ಕ್ಷಮೆಯಾಚಿಸಿ, ಘಟನೆ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದರು.
1992ರಲ್ಲಿ ಆರಂಭವಾಗಿ ಸುಮಾರು ಆರು ವರ್ಷಗಳ ಕಾಲ ನಡೆದ ಕುಕಿ-ನಾಗಾ ಜನಾಂಗೀಯ ಸಂಘರ್ಷದಲ್ಲಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 2023ರಲ್ಲಿ ನಡೆದ ಕುಕಿ-ಮೈತೈ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.