ನವದೆಹಲಿ: ಫ್ರಾನ್ಸ್ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ (Protest)ಗಳಿಗೂ ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಗೂ ನಂಟಿದೆ ಎಂಬ ಫಾಕ್ಸ್ ನ್ಯೂಸ್ ಡಿಜಿಟಲ್ ತನಿಖಾ ವರದಿ ಈಗ ದೇಶದಲ್ಲಿ ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಫ್ರಾನ್ಸ್ ಅಶಾಂತಿಯನ್ನು ಭಾರತದ ವಿದ್ಯಾರ್ಥಿ-ಯುವಜನರ ಹೋರಾಟಗಳೊಂದಿಗೆ ಬೆಸೆಯುವ ಈ ತನಿಖೆಯು, ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ವಿದೇಶಿ ಕೈವಾಡ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ. ಇದರಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ (BJP-Congress) ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ತೀವ್ರವಾಗಿ ಭುಗಿಲೆದ್ದಿವೆ.
ವರದಿಯ ಪ್ರಕಾರ, ಫ್ರಾನ್ಸ್ ಸೇರಿದಂತೆ ಒಂಬತ್ತು ದೇಶಗಳ ಸುಮಾರು 101 ಸಂಘಟನೆಗಳು ಜಾಗತಿಕ ಮಟ್ಟದಲ್ಲಿ ಇಂತಹ ಪ್ರತಿಭಟನೆಗಳನ್ನು ತೀವ್ರಗೊಳಿಸುವ ವ್ಯವಸ್ಥಿತ ಜಾಲವನ್ನು ಹೊಂದಿವೆ. ಕಮ್ಯುನಿಸ್ಟ್ ಹಾಗೂ ಇಸ್ಲಾಮಿಸ್ಟ್ ಸಂಘಟನೆಗಳನ್ನು ಒಳಗೊಂಡ ಈ ಜಾಲವನ್ನು "ರೆಡ್-ಗ್ರೀನ್ ಪ್ರತಿಭಟನಾ ವ್ಯವಸ್ಥೆ" ಎಂದು ಗುರುತಿಸಲಾಗಿದೆ. ಈ ವರದಿಯನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ‘ದೇಶದ್ರೋಹಿ’ ಹಾಗೂ ‘ಮೀರ್ ಜಾಫರ್’ ಎಂದು ಕರೆದಿದ್ದಾರೆ.
ಫ್ರಾನ್ಸ್ ಮೂಲದ 'ಇಂಡಿಯನ್ ಅಲಯನ್ಸ್ ಪ್ಯಾರಿಸ್' ಸಂಘಟನೆಯು ರಾಹುಲ್ ಗಾಂಧಿಯವರ ಬಲಗೈಯಂತೆ ಕೆಲಸ ಮಾಡುತ್ತಾ ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿಭಟನೆಯ ವೇಳೆ ಗಾಂಧಿಯವರನ್ನು ಕಾನೂನುಬದ್ಧವಾಗಿ ವಶಕ್ಕೆ ಪಡೆದಾಗಲೆಲ್ಲ ಈ ವಿದೇಶಿ ಸಂಘಟನೆಯೇ ಮೊದಲು ವಿಡಿಯೋಗಳನ್ನು ಪ್ರಸಾರ ಮಾಡಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಸುಳ್ಳು ಆರೋಪಗಳನ್ನು ಹರಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜ್ಞಾನೇಶ್ ಕುಮಾರ್ ವಜಾ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಮಹತ್ವದ ಹೇಳಿಕೆ
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮತದಾರರ ಪಟ್ಟಿಯ ಅಕ್ರಮಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಆಡಳಿತಾರೂಢ ಬಿಜೆಪಿ ಇಂತಹ ಆಧಾರರಹಿತ ಸುಳ್ಳುಗಳನ್ನು ಹರಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ದೇಶದಲ್ಲಿ ‘ಮತ ಕಳ್ಳತನ’ ನಡೆಯುತ್ತಿರುವುದು ನಿರಾಕರಿಸಲಾಗದ ವಾಸ್ತವ ಎಂದಿರುವ ಅವರು, ಭಾರತೀಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರವೇ 10 ಕೋಟಿಗೂ ಹೆಚ್ಚು ಭಾರತೀಯರು ತಮ್ಮ ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಫಾರ್ಮ್ 6 ಅನ್ನು ಬದಲಾಯಿಸಿ ಹೊಸ ಮತದಾರರಿಗೆ ಅಡ್ಡಿಪಡಿಸಲಾಗುತ್ತಿದೆ ಮತ್ತು ಫಾರ್ಮ್ 7 ಅನ್ನು ದುರುಪಯೋಗಪಡಿಸಿಕೊಂಡು ನಿಜವಾದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ರಮೇಶ್ ಆಪಾದಿಸಿದ್ದಾರೆ. ಅಲ್ಲದೆ ಈಸಿನೆಟ್ ಮೂಲಕ ಪಟ್ಟಿಯ ಮೇಲೆ ಅನಗತ್ಯ ಕೇಂದ್ರೀಕೃತ ನಿಯಂತ್ರಣ ಸಾಧಿಸಲಾಗುತ್ತಿದೆ ಎಂದಿದ್ದಾರೆ. ಫ್ರಾನ್ಸ್ ಗಲಭೆಗಳನ್ನು ತಳಕುಹಾಕಿ ಜನರ ನೈಜ ಆಕ್ರೋಶವನ್ನು ಮರೆಮಾಚುವ ಮೋದಿ-ಶಾ ಜೋಡಿಯ ಪ್ರಯತ್ನ ಫಲಿಸುವುದಿಲ್ಲ, ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.