ನವದೆಹಲಿ, ಸೆಪ್ಟೆಂಬರ್ 5: ನಿನ್ನೆಯಷ್ಟೇ ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ, ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಂಭೀರವಾಗಿ ಗಾಯಗೊಂಡಿದ್ದರೂ ಪರಿಸ್ಥಿತಿಯನ್ನು ಎದುರಿಸಿ ವಿಮಾನದಲ್ಲಿದ್ದ ನೂರಾರು ಜನರ ಜೀವಕ್ಕೆ ಅಪಾಯವಾಗದಂತೆ ಕಾಪಾಡಿದ್ದರು. ವಿಮಾನವನ್ನು ಬಳಿಕ ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿಗಿತ್ತು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸ್ಮಿತ್ ಮಚ್ಚರ್ ಅವರ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ನೂರಾರು ಜೀವಗಳನ್ನು ಉಳಿಸಲು ತಮ್ಮ ಕರ್ತವ್ಯವನ್ನು ಮೀರಿದ ಧೈರ್ಯ ತೋರಿದ ನೀರಜಾ ಭಾನೋಟ್ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದ್ದು, ಸುಮಾರು ನಾಲ್ಕು ದಶಕಗಳ ಹಿಂದೆಯೇ ಇಂತದೊಂದು ಘಟನೆ ನಡೆದಿತ್ತು ಎನ್ನುವುದರ ಕುರಿತು ಭಾರೀ ಚರ್ಚೆಯಾಗುತ್ತಿದೆ.
ಹಾಗಾದ್ರೆ ಯಾರಿದು ನೀರಜಾ ಭಾನೋಟ್? ಅಂದು ನಡೆದ ಘಟನೆಯಾದರೂ ಏನು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ
ವಿಮಾನವನ್ನು ಹೈಜಾಕ್ ಮಾಡಿದ ಭಯೋತ್ಪಾದಕರು
1986ರ ಸೆಪ್ಟೆಂಬರ್ 5ರಂದು ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ Pan Am Flight 73 ವಿಮಾನವು ಕರಾಚಿ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಿದ್ದ ವೇಳೆ ನಾಲ್ವರು ಭಯೋತ್ಪಾದಕರು ವಿಮಾನವನ್ನು ಹೈಜಾಕ್ ಮಾಡಿದರು. ಆ ಸಂದರ್ಭದಲ್ಲಿ ವಿಮಾನದ ಫ್ಲೈಟ್ ಪರ್ಸರ್ ಆಗಿದ್ದ 22 ವರ್ಷದ ನೀರಜಾ ಭಾನೋಟ್ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆ ಪ್ರದರ್ಶಿಸಿದರು.
ಅಪಾಯದ ನಡುವೆಯೂ ಅವರು ತಮ್ಮ ಸಹೋದ್ಯೋಗಿಗಳು ಮತ್ತು ಪ್ರಯಾಣಿಕರನ್ನು ಶಾಂತವಾಗಿರಿಸಲು ಪ್ರಯತ್ನಿಸಿದರು. ಕಾಕ್‌ಪಿಟ್ ಸಿಬ್ಬಂದಿಗೆ ಗುಪ್ತವಾಗಿ ಎಚ್ಚರಿಕೆ ನೀಡಿ, ವಿಮಾನದಿಂದ ಹೊರಹೋಗಲು ಅವರಿಗೆ ನೆರವಾದರು. ಹೈಜಾಕರ್‌ಗಳು ಪ್ರಯಾಣಿಕರ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ, ನೀರಜಾ ತಮ್ಮ ಪ್ರಾಣದ ಬಗ್ಗೆ ಯೋಚಿಸದೆ ಪ್ರಯಾಣಿಕರನ್ನು ರಕ್ಷಿಸಿದರು. ಭಯೋತ್ಪಾದಕರು ಮೂರು ಮಕ್ಕಳನ್ನು ಗುರಿಯಾಗಿಸಿಕೊಂಡು ಮಾಡಿದ ಗುಂಡಿನ ದಾಳಿಯಲ್ಲಿ ಮಕ್ಕಳನ್ನು ರಕ್ಷಿಸುವ ಸಂದರ್ಭದಲ್ಲಿ ನೀರಜಾ ಸ್ವತಃ ಗುಂಡೇಟಿಗೆ ಬಲಿಯಾದರು.
ಆ ದುರಂತದಲ್ಲಿ 20 ಮಂದಿ ಮೃತಪಟ್ಟರು. ಆದರೆ ನೀರಜಾ ಅವರ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ 350ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಯಿತು ಎಂದು ವರದಿಯಾಗಿದೆ.
ಹುಟ್ಟುಹಬ್ಬಕ್ಕೆ ಎರಡು ದಿನ ಬಾಕಿ ಇರುವಾಗಲೇ ಇಹಲೋಕ ತ್ಯಜಿಸಿದ ನೀರಜಾ
1963ರ ಸೆಪ್ಟೆಂಬರ್ 7ರಂದು ಚಂಡೀಗಢದಲ್ಲಿ ಜನಿಸಿದ್ದ ನೀರಜಾ, ತಮ್ಮ 23ನೇ ಹುಟ್ಟುಹಬ್ಬಕ್ಕೆ ಕೇವಲ ಎರಡು ದಿನಗಳ ಮುನ್ನ, 1986ರ ಸೆಪ್ಟೆಂಬರ್ 5ರಂದು ಪ್ರಾಣ ಕಳೆದುಕೊಂಡರು. ಅವರ ಅಪ್ರತಿಮ ಸಾಹಸಕ್ಕೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರ ಸೇರಿದಂತೆ ಹಲವು ಗೌರವಗಳು ಲಭಿಸಿದವು. ನೀರಜಾ ಅವರ ಕುಟುಂಬವು ನಂತರ Neerja Bhanot Pan Am Trust ಸ್ಥಾಪಿಸಿ, ಧೈರ್ಯ ಮತ್ತು ಮಾನವೀಯತೆಯ ಕಾರ್ಯಗಳನ್ನು ಬೆಂಬಲಿಸುವ ಕೆಲಸ ಮುಂದುವರಿಸಿದೆ.