ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ಲಾಸ್ಟಿಕ್‌ನಲ್ಲಿ ಇನ್ಮುಂದೆ ಪಾನ್‌ ಮಸಾಲಾ ಪ್ಯಾಕ್‌ ಮಾಡುವಂತಿಲ್ಲ: ಹೊಸ ಮಾರ್ಗಸೂಚಿ ಪ್ರಕಟಿಸಿದ FSSAI

FSSAI: ಪಾನ್ ಮಸಾಲಾ ಪ್ಯಾಕಿಂಗ್‌ನಲ್ಲಿ ಪ್ಲಾಸ್ಟಿಕ್, ಅಲ್ಯೂಮಿನಿಯಂ ಫಾಯಿಲ್ ಹಾಗೂ ಮೆಟಲೈಸ್ಡ್ ಲೇಯರ್‌ಗಳ ಬಳಕೆಯನ್ನು FSSAI ನಿಷೇಧಿಸಿದೆ. ಇನ್ನು ಮುಂದೆ ಪೇಪರ್, ಪೇಪರ್‌ ಬೋರ್ಡ್, ಸೆಲ್ಯುಲೋಸ್, ನೈಸರ್ಗಿಕ ವಸ್ತುಗಳು, ಟಿನ್ ಅಥವಾ ಗ್ಲಾಸ್ ಕಂಟೇನರ್‌ಗಳಲ್ಲಿ ಮಾತ್ರ ಪ್ಯಾಕ್ ಮಾಡಲು ಅವಕಾಶವಿರಲಿದೆ. ಪರಿಸರ ಮಾಲಿನ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಆ. 11: ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು (FSSAI) ಪಾನ್ ಮಸಾಲಾ (Pan masala) ಪ್ಯಾಕಿಂಗ್‌ಗೆ ಸಂಬಂಧಿಸಿದಂತೆ ನೂತನ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ಲಾಸ್ಟಿಕ್, ಅಲ್ಯೂಮಿನಿಯಂ ಫಾಯಿಲ್ ಹಾಗೂ ಮೆಟಲೈಸ್ಡ್ ಲೇಯರ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಪ್ಯಾಕೇಜಿಂಗ್) ತಿದ್ದುಪಡಿ ನಿಯಮಗಳು, 2026 ಅಡಿಯಲ್ಲಿ ಈ ಹೊಸ ಮಾರ್ಗಸೂಚಿಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಎಫ್ಎಸ್ಎಸ್ಎಐ ಪಾನ್ ಮಸಾಲಾವನ್ನು ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಪ್ಯಾಕೇಜಿಂಗ್) ನಿಯಮಗಳು, 2018ರ ಶೆಡ್ಯೂಲ್ 4ರ ಅಡಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಿದೆ.

ಹೊಸ ನಿಯಮಗಳ ಪ್ರಮುಖ ಅಂಶಗಳು

ಅನುಮತಿಸಲಾದ ವಸ್ತುಗಳು: ಪಾನ್ ಮಸಾಲಾವನ್ನು ಇನ್ಮುಂದೆ ಸಂಪೂರ್ಣ ಪ್ಲಾಸ್ಟಿಕ್-ರಹಿತ ಕಾಗದ (ಪೇಪರ್), ಪೇಪರ್‌ ಬೋರ್ಡ್, ಸೆಲ್ಯುಲೋಸ್ ಅಥವಾ ಇತರ ನೈಸರ್ಗಿಕ ವಸ್ತುಗಳು, ಟಿನ್ ಮತ್ತು ಗ್ಲಾಸ್ ಕಂಟೇನರ್‌ಗಳಲ್ಲಿ ಮಾತ್ರ ಪ್ಯಾಕ್ ಮಾಡಲು ಅವಕಾಶ ನೀಡಲಾಗಿದೆ.

ಪ್ಲಾಸ್ಟಿಕ್ ನಿಷೇಧ: ಪಾಲಿಥಿನ್, ಪಾಲಿಪ್ರೊಪಿಲೀನ್, ಪಾಲಿಎಸ್ಟರ್, ಪಿವಿಸಿ ಸೇರಿ ಯಾವುದೇ ರೀತಿಯ ಸಿಂಥೆಟಿಕ್ ಪಾಲಿಮರ್‌ಗಳು, ಲ್ಯಾಮಿನೇಟ್‌ಗಳು ಹಾಗೂ ಅಲ್ಯೂಮಿನಿಯಂ ಫಾಯಿಲ್ ಬಳಸುವಂತಿಲ್ಲ. ಕಾಗದದ ಹೊರಕವಚವಿದ್ದು ಒಳಗಡೆ ಪ್ಲಾಸ್ಟಿಕ್ ಲೇಯರ್ ಇರುವ ಪ್ಯಾಕೆಟ್‌ಗಳಿಗೂ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.

ಪರಿಸರ ಕಾಳಜಿ ಹಾಗೂ ನಿಯಮಗಳ ಅನ್ವಯ: ಪರಿಸರ (ಸಂರಕ್ಷಣೆ) ಕಾಯ್ದೆ 1986ರ ಅಡಿಯಲ್ಲಿ ರೂಪಿಸಲಾದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016ರ ನಿಬಂಧನೆಗಳು ಈ ಹೊಸ ಪ್ಯಾಕೇಜಿಂಗ್‌ಗೆ ಅನ್ವಯಿಸುತ್ತವೆ. ದಿನನಿತ್ಯ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕ ಸಲಹೆ ಪಡೆದು ನಿರ್ಧಾರ: ಏಪ್ರಿಲ್ 28ರಂದು ಕರಡು ನಿಯಮ ಪ್ರಕಟಿಸಿ 60 ದಿನಗಳ ಕಾಲ ಸಾರ್ವಜನಿಕರು ಹಾಗೂ ಉದ್ದಿಮೆದಾರರಿಂದ ಬಂದ ಸಲಹೆ-ಆಕ್ಷೇಪಣೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರವೇ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಈ ಅಂತಿಮ ತಿದ್ದುಪಡಿಯನ್ನು ಹೊರಡಿಸಲಾಗಿದೆ.

ಈ ತಿದ್ದುಪಡಿಯು ಪಾನ್ ಮಸಾಲಾ ಉತ್ಪನ್ನದ ಮೇಲಿನ ನಿಷೇಧವಲ್ಲ, ಬದಲಿಗೆ ಪರಿಸರ ಮಾಲಿನ್ಯ ತಡೆಯಲು ಮತ್ತು ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಅದರ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮೇಲೆ ಹೇರಲಾದ ಕಟ್ಟುನಿಟ್ಟಿನ ನಿಯಂತ್ರಣ ಎಂದು ಮೂಲಗಳು ತಿಳಿಸಿವೆ. ಉತ್ಪಾದಕ ಸಂಸ್ಥೆಗಳು ತಕ್ಷಣವೇ ಈ ಹೊಸ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಫ್ಎಸ್ಎಸ್ಎಐ ಸ್ಪಷ್ಟಪಡಿಸಿದೆ. ಈ ನೂತನ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಗೊಂಡ ತಕ್ಷಣದಿಂದಲೇ ಜಾರಿಗೆ ಬಂದಿವೆ.