ನವದೆಹಲಿ: ದೇಶದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು, ಹಗಲಿರುಳು ದೇಶವನ್ನು ಕಾಯುವ ಯೋಧರ ಬಲಿದಾನ ಹಾಗೂ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಅಪ್ರತಿಮ ಸಾಹಸ ಮೆರೆದ ಧೀರ ಯೋಧರಿಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ರೈಲ್ವೆ ಐತಿಹಾಸಿಕ ಕೊಡುಗೆಯೊಂದನ್ನು ನೀಡಿದೆ. ಗ್ಯಾಲಂಟರಿ ಅವಾರ್ಡ್ ಪಡೆದ (Gallantry award) ಸೇನಾ, ನೌ ಸೇನಾ ಮತ್ತು ವಾಯು ಸೇನಾ ಮೆಡಲ್ ಪುರಸ್ಕೃತ ಯೋಧರು ಹಾಗೂ ಅವರ ಕುಟುಂಬಸ್ಥರಿಗೆ ಜೀವಮಾನ ಪೂರ್ತಿ ಉಚಿತವಾಗಿ ರೈಲಿನಲ್ಲಿ (Indian Railway) ಪ್ರಯಾಣಿಸುವ ಅವಕಾಶವನ್ನು ನೀಡಲಾಗಿದೆ. ಆನ್‌ಲೈನ್ ಪೋರ್ಟಲ್ ಮೂಲಕ ಈ ಸೌಲಭ್ಯ ಜಾರಿಗೆ ಬರಲಿದ್ದು, ಯೋಧರು ಹಾಗೂ ಅವರ ಕುಟುಂಬಸ್ಥರು ಉಚಿತ ಟಿಕೆಟ್ ಕಾಯ್ದಿರಿಸಲು ರೈಲ್ವೆ ಇಲಾಖೆ ದಿನಾಂಕ ನಿಗದಿಪಡಿಸಿದೆ.
ಈ ನಿರ್ಧಾರವನ್ನು ಈಗಾಗಲೇ ಘೋಷಿಸಲಾಗಿದ್ದರೂ, ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ಪ್ರಕ್ರಿಯೆಯು ಈಗಷ್ಟೇ ಆರಂಭವಾಗುತ್ತಿದೆ. ಪ್ರಮುಖ ವಿಚಾರವೆಂದರೆ, ಅರ್ಹ ಫಲಾನುಭವಿಗಳು ಈ ಹೊಸ ಸೌಲಭ್ಯದಡಿ 'ಐಆರ್‌ಸಿಟಿಸಿ' (IRCTC) ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು ಅಥವಾ ಬುಕ್ ಮಾಡಬಹುದು. ಅರ್ಹ ಶೌರ್ಯ ಪ್ರಶಸ್ತಿ ವಿಜೇತರು ಹಾಗೂ ಅವರ ಕುಟುಂಬಸ್ಥರು ಈ ಪ್ರಯೋಜನವನ್ನು ಸುಲಭವಾಗಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಇಡೀ ಪ್ರಕ್ರಿಯೆಯನ್ನು ಆನ್‌ಲೈನ್ ಹಾಗೂ ಕಾಗದರಹಿತ ವ್ಯವಸ್ಥೆಯಾಗಿ ವಿನ್ಯಾಸಗೊಳಿಸಲಾಗಿದೆ.
ನವೆಂಬರ್ 1 ರಿಂದ ಟಿಕೆಟ್ ಬುಕಿಂಗ್ ಪ್ರಾರಂಭ
ಹೊಸ ಸೌಲಭ್ಯವನ್ನು ಜಾರಿಗೆ ತರಲು ರಕ್ಷಣಾ ಸಚಿವಾಲಯವು ಡಿಜಿಟಲ್ ವ್ಯವಸ್ಥೆಯನ್ನು ಸಿದ್ಧಪಡಿಸಿದೆ. ಐಆರ್‌ಸಿಟಿಸಿ ವೆಬ್ ಪೋರ್ಟಲ್‌ನಲ್ಲಿ ಈ ಟಿಕೆಟ್ ಬುಕಿಂಗ್ ಸೌಲಭ್ಯವು 2026ರ ನವೆಂಬರ್ 1 ರಿಂದ ಲಭ್ಯವಾಗಲಿದೆ. ಅರ್ಹ ಫಲಾನುಭವಿಗಳು ಮೊದಲು 'ಇಂಡಿಯನ್ ರೈಲ್ವೇ ಕಾನ್ಸೆಷನ್ ಕಾರ್ಡ್ ಪೋರ್ಟಲ್' (IRCCP) ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ನೋಂದಣಿ ಪೂರ್ಣಗೊಂಡ ನಂತರ, ಫಲಾನುಭವಿಗಳು ಸಲ್ಲಿಸಿದ ವಿವರಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಪರಿಶೀಲನೆಯ ನಂತರ, ಆನ್‌ಲೈನ್‌ನಲ್ಲಿ ಇ-ಪಾಸ್‌ಗಳನ್ನು ನೀಡಲಾಗುತ್ತದೆ. ಈ ಇ-ಪಾಸ್‌ಗಳ ಮೂಲಕ ಫಲಾನುಭವಿಗಳು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ತಮ್ಮ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಬಹುದು ಅಥವಾ ಬುಕ್ ಮಾಡಬಹುದು.
ಉಚಿತ ಪ್ರಯಾಣಕ್ಕೆ ಯಾರೆಲ್ಲಾಅರ್ಹರು?
ಶೌರ್ಯ ವಿಭಾಗದ ಸೇನಾ ಮೆಡಲ್, ನೌ ಸೇನಾ ಮೆಡಲ್ ಮತ್ತು ವಾಯು ಸೇನಾ ಮೆಡಲ್ ವಿಜೇತ ಯೋಧರು.
ಅರ್ಹ ಪ್ರಶಸ್ತಿ ವಿಜೇತರ ಪತಿ ಅಥವಾ ಪತ್ನಿ.
ಸೇವಾ ಅವಧಿಯಲ್ಲಿ ಹುತಾತ್ಮರಾಗಿ ಮರಣೋತ್ತರ ಶೌರ್ಯ ಪ್ರಶಸ್ತಿ ಪಡೆದ ಅವಿವಾಹಿತ ಯೋಧರ ತಂದೆ-ತಾಯಿಗೂ ಈ ಸೌಲಭ್ಯ ಅನ್ವಯವಾಗಲಿದೆ.
ಯಾವ ದರ್ಜೆ ರೈಲುಗಳಲ್ಲಿ ಪ್ರಯಾಣಿಸಬಹುದು?
ಪ್ರಶಸ್ತಿ ವಿಜೇತರು ಹಾಗೂ ಅವರ ಅರ್ಹ ಕುಟುಂಬಸ್ಥರು ಭಾರತೀಯ ರೈಲ್ವೆಯ ಎಲ್ಲಾ ರೈಲುಗಳ ಕೋಚ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು
ಪ್ರಥಮ ದರ್ಜೆ (First Class)
ಎರಡನೇ ದರ್ಜೆ ಎಸಿ (Second AC / 2AC)
ಎಸಿ ಚೇರ್ ಕಾರ್ (AC Chair Car)
ಇಲ್ಲಿಯವರೆಗೆ, ಜೀವಮಾನ ಪೂರ್ತಿ ಉಚಿತ ರೈಲು ಪ್ರಯಾಣದ ಸೌಲಭ್ಯವು ಕೇವಲ 'ಚಕ್ರ' ಸರಣಿಯ ಆರು ಪ್ರಮುಖ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಮಾತ್ರ ಲಭ್ಯವಿತ್ತು. ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ , ಅಶೋಕ ಚಕ್ರ , ಕೀರ್ತಿ ಚಕ್ರ, ಶೌರ್ಯ ಚಕ್ರ ಇತ್ತೀಚಿನ ಹೊಸ ನಿರ್ಧಾರದೊಂದಿಗೆ, ಶೌರ್ಯ ವಿಭಾಗದಲ್ಲಿ ನೀಡಲಾಗುವ ಸೇನಾ ಮೆಡಲ್, ನೌ ಸೇನಾ ಮೆಡಲ್ ಮತ್ತು ವಾಯು ಸೇನಾ ಮೆಡಲ್ ಪ್ರಶಸ್ತಿಗಳನ್ನೂ ಸಹ ಈ ಜೀವಮಾನ ಪೂರ್ತಿ ಉಚಿತ ರೈಲು ಪ್ರಯಾಣದ ಸೌಲಭ್ಯದ ವ್ಯಾಪ್ತಿಗೆ ತರಲಾಗಿದೆ.