ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold price fall : ಬಂಗಾರದ ದರದಲ್ಲಿ 7,000 ರುಪಾಯಿ ಇಳಿಕೆ! ಈಗ ಖರೀದಿಸಬಹುದೇ?

ಗುರುವಾರ ಎಂಸಿಎಕ್ಸ್‌ನಲ್ಲಿ ದರ 92,325 ರುಪಾಯಿಯಷ್ಟಿತ್ತು. ಎಲ್‌ಕೆಪಿ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಜತಿನ್‌ ತ್ರಿವೇದಿಯವರ ಪ್ರಕಾರ ಎಂಸಿಎಕ್ಸ್‌ನಲ್ಲಿ ಶುಕ್ರವಾರ ಬಂಗಾರದ ದರ 93,325 ರುಪಾಯಿಯಷ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಬಂಗಾರದ ದರ 3,200 ಡಾಲರ್‌ ಮಟ್ಟದಲ್ಲಿದೆ.

ಬಂಗಾರದ ದರದಲ್ಲಿ 7,000 ರುಪಾಯಿ ಇಳಿಕೆ!

Vishakha Bhat Vishakha Bhat May 2, 2025 9:21 PM

ಕೇಶವಪ್ರಸಾದ .ಬಿ

ಮುಂಬಯಿ: ಕಳೆದ ಹತ್ತು ದಿನಗಳಲ್ಲಿ ಬಂಗಾರದ ದರದಲ್ಲಿ 7,000 ರುಪಾಯಿ ಇಳಿಕೆಯಾಗಿದೆ. ಪ್ರತಿ 10 ಗ್ರಾಮ್‌ ಚಿನ್ನದ ದರ 1 ಲಕ್ಷ ರುಪಾಯಿಗಳ ದಾಖಲೆಯ ಎತ್ತರಕ್ಕೇರಿತ್ತು. ಈಗ 93,300 ರುಪಾಯಿಗೆ ಇಳಿದಿದೆ. 2025ರ ಏಪ್ರಿಲ್‌ 22ರಂದು ಬಂಗಾರದ ದರ 1,00,484 ರುಪಾಯಿ ಇತ್ತು. ಗುರುವಾರ ಎಂಸಿಎಕ್ಸ್‌ನಲ್ಲಿ ದರ 92,325 ರುಪಾಯಿಯಷ್ಟಿತ್ತು. ಎಲ್‌ಕೆಪಿ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಜತಿನ್‌ ತ್ರಿವೇದಿಯವರ ಪ್ರಕಾರ ಎಂಸಿಎಕ್ಸ್‌ನಲ್ಲಿ ಶುಕ್ರವಾರ ಬಂಗಾರದ ದರ 93,325 ರುಪಾಯಿಯಷ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಬಂಗಾರದ ದರ 3,200 ಡಾಲರ್‌ ಮಟ್ಟದಲ್ಲಿದೆ.

ಬಂಗಾರವನ್ನು ಈಗ ಖರೀದಿಸಬಹುದೇ?

ತಜ್ಞರ ಪ್ರಕಾರ ಬಂಗಾರದ ದರದಲ್ಲಿ ಈಗ ಉಂಟಾಗಿರುವ ಇಳಿಕೆ ತಾತ್ಕಾಲಿಕ. ದರಗಳು ಮತ್ತೆ ಏರಿಕೆಯಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ದರ ಕಡಿಮೆಯಾದಾಗ ಖರೀದಿಸುವುದು ಉತ್ತಮ. ಕಳೆದ ವರ್ಷ ಚಿನ್ನದಲ್ಲಿ ಹೂಡಿಕೆ ಮಾಡಿದವರಿಗೆ 30% ಲಾಭ ಸಿಕ್ಕಿದೆ. ಚಾರಿತ್ರಿಕವಾಗಿ ಬಂಗಾರ 2001ರಿಂದ ವಾರ್ಷಿಕ ಸರಾಸರಿ 15% ಆದಾಯ ಕೊಟ್ಟಿದೆ ಎಂದು ಅಲ್ಮಾಂಡ್ಸ್‌ ಗ್ಲೋಬಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಕುಮಾರ್‌ ತಿಳಿಸಿದ್ದಾರೆ.

ಚೀನಾದಿಂದ ಭಾರಿ ಬಂಗಾರದ ಖರೀದಿ:

ಚೀನಾ ಭಾರಿ ಪ್ರಮಾಣದಲ್ಲಿ ಬಂಗಾರವನ್ನು ಕಳೆದ ಕೆಲ ವರ್ಷಗಳಿಂದ ಖರೀದಿಸುತ್ತಿದೆ. 2025ರ ಮಾರ್ಚ್‌ ವೇಳೆಗೆ ಚೀನಾ 2,292 ಟನ್‌ ಬಂಗಾರವನ್ನು ಹೊಂದಿದೆ. ಕಳೆದ ಮೂರು ವರ್ಷಗಳಲ್ಲಿ 1,000 ಟನ್ನಿಗೂ ಹೆಚ್ಚು ಖರೀದಿಸಿದೆ. ಭಾರತದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 879 ಟನ್‌ ಚಿನ್ನವನ್ನು ಹೊಂದಿದೆ.

ಸುಂಕ ಸಮರ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ, ಅಮೆರಿಕ-ಚೀನಾ ಸಂಘರ್ಷದ ಪರಿಣಾಮ ಬಂಗಾರದ ದರ ಏರುತ್ತಿದೆ. ಅಮೆರಿಕದ ವಾಣಿಜ್ಯ ನೀತಿ ಇನ್ನೂ ಸ್ಪಷ್ಟವಾಗಿಲ್ಲ, ಹೀಗಾಗಿ ಚಿನ್ನದ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಅಮೆರಿಕ-ಚೀನಾ ನಡುವಣ ಮಾತುಕತೆಯ ಫಲಶ್ರುತಿಯು ಬಂಗಾರದ ದರದ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ವಿಘ್ನಹರ್ತ ಗೋಲ್ಡ್‌ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲುನಿಯಾ ಅವರ ಪ್ರಕಾರ 2030ರ ವೇಳೆಗೆ 10 ಗ್ರಾಮ್‌ ಚಿನ್ನದ ದರ 1 ಲಕ್ಷ 68 ಸಾವಿರ ರುಪಾಯಿಗೆ ಏರಿಕೆಯಾಗಲಿದೆ.

ಇನ್ನು ಮೆಟಲ್‌ ಫೋಕಸ್‌ ಲಿಮಿಟೆಡ್‌ ಸಂಸ್ಥೆಯ ತಜ್ಞರಾದ ಚಿರಾಗ್‌ ಸೇಠ್‌ ಅವರೂ, ಚಿನ್ನದ ದರ ಸ್ಫೋಟ ನಮಗೆಲ್ಲ ಅಚ್ಚರಿ ತಂದಿದೆ ಎಂದಿದ್ದಾರೆ. ಕಳೆದ 1962ರಿಂದ ಗೋಲ್ಡ್‌ ಬಿಸಿನೆಸ್‌ನಲ್ಲಿರುವ ವಿಜಯ್‌ ಖನ್ನಾ ಅವರ ಪ್ರಕಾರ, ಸದ್ಯದ ಟ್ರೆಂಡ್‌ ಮುಂದುವರಿದರೆ, ಇನ್ನೆರಡು ವರ್ಷಗಳಲ್ಲಿಯೇ ಚಿನ್ನದ ದರ 10 ಗ್ರಾಮ್‌ಗೆ 2 ಲಕ್ಷ ರುಪಾಯಿಗೆ ಏರಿಕೆಯಾಗಲಿದೆ.

ಜ್ಯುವೆಲ್ಲರ್‌ ವಿಜಯ್‌ ಖನ್ನಾ ಹೀಗೆನ್ನುತ್ತಾರೆ- " 1965ರಲ್ಲಿ ಒಂದು ತೊಲ ಚಿನ್ನದ ದರ 50 ರುಪಾಯಿ ಇತ್ತು. ಒಂದು ತೊಲ ಎಂದರೆ ಹನ್ನೊಂದೂವರೆ ಗ್ರಾಮ್‌ ಆಗಿದೆ. ಬಂಗಾರದ ದರ ಯಾವತ್ತೂ ಭಾರಿ ಕಡಿಮೆ ಆಗಿದ್ದೇ ಇಲ್ಲ.

ಚಿನ್ನದಲ್ಲಿ ಏಕೆ ಹೂಡಿಕೆ ಮಾಡಬೇಕು? ಅದರಿಂದ ಪ್ರಯೋಜನ ಏನು ಎಂಬುದನ್ನು ತಿಳಿಯೋಣ.

ಮೊಟ್ಟ ಮೊದಲನೆಯದಾಗಿ ಹಣದುಬ್ಬರ ಅಥವಾ ಬೆಲೆ ಏರಿಕೆಯ ಎದುರು ನಿಮ್ಮ ಸಂಪತ್ತನ್ನು ಉಳಿಸಲು ಮತ್ತು ಬೆಳೆಸಲು ಬಂಗಾರದಲ್ಲಿ ಹೂಡಿಕೆ ಸಹಕರಿಸುತ್ತದೆ. ಬೆಲೆ ಏರಿಕೆಯಾದಾಗ ನಿಮ್ಮಲ್ಲಿರುವ ಹಣದ ಮೌಲ್ಯ ಕಡಿಮೆಯಾಗುತ್ತದೆ. ಆದರೆ ನಿಮ್ಮಲ್ಲಿರುವ ಬಂಗಾರದ ಮೌಲ್ಯ ಮಾತ್ರ ಏರುತ್ತದೆ. ಆದ್ದರಿಂದಲೇ ಇನ್‌ಫ್ಲೆಶನ್‌ ಎದುರು ಬಂಗಾರದಲ್ಲಿನ ಹೂಡಿಕೆಯೇ ಸೇಫ್‌ ಎಂದು ಜಗತ್ತು ನಂಬಿದೆ.

ಈ ಸುದ್ದಿಯನ್ನೂ ಓದಿ: Gold Price Today: ಚಿನ್ನದ ದರದಲ್ಲಿ ಮತ್ತೆ ಕೊಂಚ ಇಳಿಕೆ; ಇಂದಿನ ರೇಟ್‌ ಎಷ್ಟಿದೆ?

ವಿಶೇಷವೇನೆಂದರೆ ಭಾರತೀಯರಿಗೆ ಇದು ಪ್ರಾಚೀನ ಕಾಲದಿಂದಲೂ ಗೊತ್ತಿತ್ತು. ಆದ್ದರಿಂದಲೇ ಚಿನ್ನವನ್ನು ಆಪದ್ಧನ ಎಂದು ಕರೆಯುತ್ತಿದ್ದರು. ಹೀಗಾಗಿಯೇ ಇವತ್ತು ವೈಯಕ್ತಿಕವಾಗಿ ಜನರು ಮಾತ್ರವಲ್ಲದೆ ನಾನಾ ದೇಶಗಳ ಸೆಂಟ್ರಲ್‌ ಬ್ಯಾಂಕ್‌ಗಳೂ ಚಿನ್ನದ ಮೇಲೆ ಇನ್ವೆಸ್ಟ್‌ ಮಾಡುತ್ತಿವೆ.