ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೀವು ಪಿಎನ್‍ಜಿ ಸಂಪರ್ಕ ಹೊಂದಿದ್ದೀರಾ? ತಕ್ಷಣವೇ ಎಲ್‌ಪಿಜಿ ಹಿಂದಿರುಗಿಸಿ: ಕೇಂದ್ರ ಸರ್ಕಾರದ ಖಡಕ್ ಆದೇಶ

LPG Problem: ಮನೆಯಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಹೊಂದಿರುವವರು ಎಲ್‌ಪಿಜಿ (LPG) ಸಿಲಿಂಡರ್ ತಕ್ಷಣವೇ ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಹೊಸ ತಿದ್ದುಪಡಿ ಮಾಡಿದ ಆದೇಶವು ಪಿಎನ್‌ಜಿ ಸಂಪರ್ಕ ಇರುವ ಯಾವುದೇ ವ್ಯಕ್ತಿ ಎಲ್‌ಪಿಜಿ ಸಿಲಿಂಡರ್ ಅನ್ನು ಇಟ್ಟುಕೊಳ್ಳುವಂತಿಲ್ಲ ಎಂದು ತಿಳಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಮಾ. 15: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (Union Ministry of Petroleum and Natural Gas) ಶನಿವಾರ (ಮಾ. 14) ಹೊಸ ಅಧಿಸೂಚನೆ ಹೊರಡಿಸಿದ್ದು, ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಸಂಪರ್ಕ ಮತ್ತು ದೇಶೀಯ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಬ್ಸ್ಕ್ರಿಪ್ಷನ್ ಇರುವ ಕುಟುಂಬಗಳು ಎಲ್‍ಪಿಜಿ (LPG) ಚಂದಾದಾರಿಕೆಯನ್ನು ಬಿಟ್ಟುಕೊಡಬೇಕು ಎಂದು ಹೇಳಿದೆ. ಹೀಗಾಗಿ ಮನೆಯಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಹೊಂದಿರುವವರು ಎಲ್‌ಪಿಜಿ (LPG) ಸಿಲಿಂಡರ್ ತಕ್ಷಣವೇ ಹಿಂದಿರುಗಿಸಬೇಕಾಗುತ್ತದೆ. ಜತೆಗೆ ಇಂತಹ ಕುಟುಂಬಗಳು ಯಾವುದೇ ಸಾರ್ವಜನಿಕ ತೈಲ ಕಂಪನಿಗಳಿಂದ ಅಥವಾ ಅವರ ವಿತರಕರ ಮೂಲಕ ಎಲ್‍ಪಿಜಿ ಸಿಲಿಂಡರ್ ಮರುಪೂರೈಕೆ ಪಡೆಯಬಾರದು ಎಂದು ಆದೇಶಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿನ ಅಡಚಣೆಯ ಮಧ್ಯೆ ಹೊರಡಿಸಲಾದ ಅಧಿಸೂಚನೆಯಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಆದೇಶಕ್ಕೆ ತಿದ್ದುಪಡಿಯಾಗಿ ಬಂದಿದೆ. ತಿದ್ದುಪಡಿ ಮಾಡಿದ ಆದೇಶವು ಪಿಎನ್‌ಜಿ ಸಂಪರ್ಕ ಇರುವ ಯಾವುದೇ ವ್ಯಕ್ತಿ ಎಲ್‌ಪಿಜಿ ಸಿಲಿಂಡರ್ ಅನ್ನು ಇಟ್ಟುಕೊಳ್ಳುವಂತಿಲ್ಲ ಎಂದು ತಿಳಿಸಿದೆ.

ಪೈಪ್ಡ್ ನೈಸರ್ಗಿಕ ಅನಿಲ ಸಂಪರ್ಕ ಹೊಂದಿರುವ ಮತ್ತು ಗೃಹಬಳಕೆಯ ಎಲ್‌ಪಿಜಿ ಸಂಪರ್ಕ ಹೊಂದಿರುವ ಯಾವುದೇ ವ್ಯಕ್ತಿ ಗೃಹಬಳಕೆಯ ಎಲ್‌ಪಿಜಿ ಸಂಪರ್ಕವನ್ನು ಇಟ್ಟುಕೊಳ್ಳುವುಂತಿಲ್ಲ. ಪೈಪ್ ಮೂಲಕ ಅಡುಗೆ ಅನಿಲ ಪಡೆಯುತ್ತಿರುವ ಗ್ರಾಹಕರು ತಮ್ಮಲ್ಲಿರುವ ಎಲ್‌ಪಿಜಿ ಸಂಪರ್ಕವನ್ನು ತಕ್ಷಣವೇ ಆಯಾ ತೈಲ ಕಂಪನಿಗಳಿಗೆ ಮರಳಿಸಬೇಕು. ಪಿಎನ್‌ಜಿ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಿಲಿಂಡರ್ ರೀಫಿಲ್ ಮಾಡಿಕೊಡುವುದನ್ನು ಸಹ ನಿಷೇಧಿಸಲಾಗಿದೆ. ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ಕೂಡ ಅವಕಾಶವಿರುವುದಿಲ್ಲ ಎಂದು ಹೇಳಿದೆ.

ಭಾರತದ ಅಡುಗೆಮನೆಗೆ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷದ ಬಿಸಿ: ಎಲ್‌ಪಿಜಿ ಕೊರತೆ ಇಲ್ಲ ಎಂದ ಕೇಂದ್ರ ಸರ್ಕಾರ

ಸರ್ಕಾರದ ಅಧಿಸೂಚನೆ ಹೊರಬರುವ ಕೆಲವೇ ಗಂಟೆಗಳ ಮೊದಲು, ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ, ಕೆಲವು ಭಾರತೀಯ ಹಡಗುಗಳಿಗೆ ಹೊರ್ಮುಜ್ ಜಲಸಂಧಿ ಮೂಲಕ ಸಂಚರಿಸಲು ಅನುಮತಿ ನೀಡಲಾಗಿದೆ ಎಂದು ದೃಢಪಡಿಸಿದರು.

ಭಾರತ ಮತ್ತು ಇರಾನ್ ನಡುವಿನ ದೀರ್ಘಕಾಲದ ಸ್ನೇಹ ಹಾಗೂ ಪರಸ್ಪರ ಹಿತಾಸಕ್ತಿಗಳನ್ನು ಉಲ್ಲೇಖಿಸಿದ ಅವರು, ಆರಂಭದಲ್ಲಿ ಭಾರತದೊಂದಿಗೆ ಸಂಪರ್ಕ ಸಾಧಿಸುವಲ್ಲಿ ಕೆಲವು ತೊಂದರೆಗಳಿದ್ದವು ಎಂದು ಒಪ್ಪಿಕೊಂಡರು. ಆದರೀಗ ಎರಡು ದೇಶಗಳೂ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಿವೆ ಎಂದು ಹೇಳಿದರು.

ಹೌದು, ನಾವು ಕೆಲವು ಹಡಗುಗಳಿಗೆ ಹೊರ್ಮುಝ್ ಮೂಲಕ ಸಾಗಲು ಅನುಮತಿ ನೀಡಿದ್ದೇವೆ. ಆದರೆ ಈ ಕ್ಷಣದಲ್ಲಿ ಎಷ್ಟು ಹಡಗುಗಳು ಹಾದುಹೋಗಿವೆ ಎಂದು ಹೇಳಲು ಸಾಧ್ಯವಿಲ್ಲ. ಇರಾನ್ ಮತ್ತು ಭಾರತ ಐತಿಹಾಸಿಕ ಸಂಬಂಧಗಳು ಮತ್ತು ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ (ಮಾ. 13) ಇರಾನ್ ಮತ್ತು ಇಸ್ರೇಲ್ ಮತ್ತು ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮಾರ್ಚ್ ಮೊದಲ ವಾರದಿಂದ ಮುಚ್ಚಲ್ಪಟ್ಟ ಹೊರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಧ್ವಜವನ್ನು ಹೊಂದಿದ್ದ ಎರಡು ಹಡಗುಗಳಿಗೆ ಪ್ರಯಾಣಿಸಲು ಇರಾನ್ ಅವಕಾಶ ನೀಡಿತ್ತು. ಕಿರಿದಾದ ಜಲಮಾರ್ಗವು ವಿಶ್ವದ ತೈಲದ ಸುಮಾರು 20 ಪ್ರತಿಶತದಷ್ಟು ಹಾದುಹೋಗುವ ಪ್ರಮುಖ ಚಾಕ್‌ಪಾಯಿಂಟ್ ಆಗಿದೆ.