ನವದೆಹಲಿ, ಜು. 22: ಮಾತುಕತೆಗೆ ಕೇಂದ್ರ ಸರ್ಕಾರವೇ ಮುಂದಾಳತ್ವ ವಹಿಸಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿಯ (Cockroach Janta Party) ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಹೇಳಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಮೇಲೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ವಿದ್ಯಾರ್ಥಿಗಳು ಸಂಸತ್ತಿನತ್ತ ಮೆರವಣಿಗೆ ನಡೆಸಲು ಪ್ರಯತ್ನಿಸಿದ ಎರಡು ದಿನಗಳ ನಂತರ ಈ ಹೇಳಿಕೆ ಬಂದಿದೆ. ಭಾರತದಾದ್ಯಂತ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಪರೀಕ್ಷೆ (NEET Exam) ಏಕೈಕ ಪ್ರವೇಶವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಆಕಾಂಕ್ಷಿಗಳು ಇದಕ್ಕೆ ಹಾಜರಾಗುತ್ತಾರೆ. ಈ ಬಾರಿ ಮೇಯಲ್ಲಿ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕಯಾಗಿ ಮರು ಪರೀಕ್ಷೆ ನಡೆಸಲಾಯಿತು. ನೀಟ್ ಅಕ್ರಮ ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ.
ಸರ್ಕಾರ ಮಾತನಾಡಲು ಬಯಸಿದರೆ, ಇಲ್ಲಿಗೆ ಬರಬೇಕು. ಅವರು ನಮ್ಮ ಷರತ್ತುಗಳಿಗೆ ಬದ್ಧರಾಗಿರಬೇಕು ಎಂದು ದೀಪ್ಕೆ ಹೇಳಿದರು. ಇತ್ತ ಕೇಂದ್ರ ಸರ್ಕಾರ ಮಾತುಕತೆಯ ಜವಾಬ್ದಾರಿಯನ್ನು ಪ್ರತಿಭಟನಾಕಾರರ ಮೇಲೆಯೇ ಹಾಕಿದೆ. ಪ್ರತಿಭಟನಾಕಾರರು ಮಾತನಾಡಲು ಬಂದರೆ, ಸರ್ಕಾರವು ಸಿದ್ಧವಿರುವುದಾಗಿ ತಿಳಿಸಿದೆ.
“ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯನ್ನು ತಟಸ್ಥ ಸ್ಥಳದಲ್ಲಿ ಅಥವಾ ಜಂತರ್ ಮಂತರ್‌ನಲ್ಲಿ ನಡೆಸಬಹುದು. ನಾವು ನಮ್ಮ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ. ಶಿಕ್ಷಣ ಸಚಿವರ ರಾಜೀನಾಮೆಯೇ ನಮ್ಮ ಪ್ರಮುಖ ಬೇಡಿಕೆ” ಎಂದು ಕಾಕ್ರೋಚ್ ಜನತಾ ಪಾರ್ಟಿಯ ವಕ್ತಾರ ಅಶುತೋಷ್ ರಂಕಾ ಹೇಳಿದರು.
ತಿಭಟನಾಕಾರರ ಮೇಲೆ ಪೊಲೀಸ್ ಹಲ್ಲೆಯ ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ತಮ್ಮ ಸಂಘಟನೆಯೊಂದಿಗೆ ಮಾತುಕತೆ ಆರಂಭಿಸುವುದರ ಸರ್ಕಾರದ ಹಿಂದಿನ ಉದ್ದೇಶವನ್ನು ದೀಪ್ಕೆ ಪ್ರಶ್ನಿಸಿದರು. ಸರ್ಕಾರವು ಸಿಜೆಪಿ ಜತೆ ಮಾತುಕತೆಯಲ್ಲಿ ತೊಡಗಿದೆ. ಅದೇ ಸಮಯದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸುತ್ತಿದೆ ಎಂದು ಕಿಡಿಕಾರಿದರು.
“ಕೇಂದ್ರ ಸರ್ಕಾರವು ನಮ್ಮ ಸಮಯವನ್ನು ವ್ಯರ್ಥ ಮಾಡಿತು. ಅವರು ನಮ್ಮ ನಿಯೋಗವನ್ನು ಆಹ್ವಾನಿಸಿದರು. ಬಳಿಕ ನಮ್ಮ ಸದಸ್ಯರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡರು. ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಒಂದು ರೀತಿಯಲ್ಲಿ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಗೃಹಬಂಧನದಲ್ಲಿದ್ದರು” ಎಂದು ದೀಪ್ಕೆ ಆರೋಪಿಸಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ 32ನೇ ದಿನಕ್ಕೆ ಕಾಲಿಟ್ಟಿದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಇಡೀ ಯೋಜನೆಯು ತಂಡವನ್ನು ಚದುರಿಸುವುದಾಗಿತ್ತು. ಕೇಂದ್ರ ಸಿಜೆಪಿ ಪದಾದಿಕಾರಿಗಳನ್ನು ಐದು ಗಂಟೆಗಳ ಕಾಲ ಕೂರಿಸಿ ಸಮಯವನ್ನು ವ್ಯರ್ಥ ಮಾಡಿದರು. ನೀವು ಒಂದು ಕಡೆ ಮಾತುಕತೆಗೆ ಕರೆ ನೀಡುತ್ತೀರಿ, ಮತ್ತೊಂದೆಡೆ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡುತ್ತೀರಿ” ಎಂದು ಅವರು ಆಕ್ರೋಶ ಹೊರಹಾಕಿದರು.
ಹಿಂಸೆಗೆ ತಿರುಗಿದ ಸಿಜೆಪಿ ಪ್ರತಿಭಟನೆ; ಗಂಭೀರ ಗಾಯಗೊಂಡ 20 ವರ್ಷದ ಮಹಿಳೆ ಐಸಿಯುಗೆ ದಾಖಲು
ಈ ಆರೋಪಗಳಿಗೆ ಕೇಂದ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋಮವಾರ (ಜು. 20), ಜೆ.ಪಿ. ನಡ್ಡಾ ಸಂಘಟನೆಯ ಇಬ್ಬರು ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಅದೇ ದಿನ ಸಾವಿರಾರು ಪ್ರತಿಭಟನಾಕಾರರು ಸಂಸತ್ತಿಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಆದರೆ ಪೊಲೀಸರು ಅವರನ್ನು ತಡೆದ ನಂತರ, ಅವರ ಬೇಡಿಕೆಗಳ ಕುರಿತು ಆಂತರಿಕ ಚರ್ಚೆಗಳನ್ನು ನಡೆಸಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿತು.
ಪೊಲೀಸ್ ಕ್ರಮದ ಒಂದು ದಿನದ ನಂತರವೂ ಭಾರಿ ಭದ್ರತೆಯಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರಿಯಿತು. ಪ್ರತಿಭಟನಾಕಾರರು ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ ನಂತರ ಭುಗಿಲೆದ್ದ ಹಿಂಸಾಚಾರಕ್ಕೆ ಎರಡೂ ಕಡೆಯವರು ಪರಸ್ಪರ ದೂಷಿಸಿದರು. ಪ್ರತಿಭಟನಾಕಾರರ ಪೊಲೀಸರ ಮೇಲೆ ದಾಳಿ ನಡೆಸಿದ ಬಳಿಕ ಲಾಠಿಚಾರ್ಜ್ ಮತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಬೇಕಾಯಿತು ಎಂದು ಕೇಂದ್ರ ಹೇಳಿದೆ.