ಬೆಂಗಳೂರು ಮೂಲದ ನವೀಕರಿಸಬಹುದಾದ ಇಂಧನ ಕಂಪನಿ 'ಜಿಪಿಎಸ್ ರಿನ್ಯೂವಬಲ್ಸ್' (GPS Renewables) ತನ್ನ ಸೀರೀಸ್ 'ಸಿ' ಹೂಡಿಕೆ ಸುತ್ತಿನಲ್ಲಿ ಒಟ್ಟು ₹635 ಕೋಟಿ ಬಂಡವಾಳ ಸಂಗ್ರಹಿಸಿದೆ. ಈ ಹೂಡಿಕೆಯು ಕಂಪನಿಯ ಮುಂದಿನ ಬೆಳವಣಿಗೆ, ಸಂಕುಚಿತ ಜೈವ ಅನಿಲ (CBG) ಯೋಜನೆಗಳ ವಿಸ್ತರಣೆ ಮತ್ತು ಹಸಿರು ಇಂಧನ ಮೂಲಸೌಕರ್ಯಗಳ ಅಭಿವೃದ್ಧಿಗೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ.
ಈ ಹೂಡಿಕೆ ಸುತ್ತಿನಲ್ಲಿ ಪಿಕ್ಸೆಲ್‌ಸ್ಕೈ ಕ್ಯಾಪಿಟಲ್ ನೇತೃತ್ವದಲ್ಲಿ ₹125 ಕೋಟಿ ಈಕ್ವಿಟಿ ಹೂಡಿಕೆ ದೊರೆತಿದ್ದು, ಇದರಲ್ಲಿ ಸ್ಪೆಕ್ಟ್ರಮ್ ಇಂಪ್ಯಾಕ್ಟ್ ಫ್ಯಾಮಿಲಿ ಆಫೀಸ್ ಸೇರಿದಂತೆ ಹಲವು ಹೂಡಿಕೆ ದಾರರು ಭಾಗಿಯಾಗಿದ್ದಾರೆ. ಇದರ ಜೊತೆಗೆ, ಕಂಪನಿಯ ಯೋಜನಾ ಅಭಿವೃದ್ಧಿ ವೇದಿಕೆಯಾದ 'ಆರ್ಯ'ಗೆ ಪ್ರಮುಖ ಕೊರಿಯನ್ ಸಮೂಹ ಸಂಸ್ಥೆಯೊಂದರಿಂದ ₹200 ಕೋಟಿ ಹೂಡಿಕೆ ಲಭಿಸಿದೆ. ಇದಕ್ಕೂ ಮುನ್ನ, ಸೊಜಿಟ್ಜ್ ಕಾರ್ಪೊರೇಷನ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ₹310 ಕೋಟಿ ಬಂಡವಾಳವನ್ನು ಕಂಪನಿ ಕ್ರೋಢೀಕರಿಸಿತ್ತು.
ಕಂಪನಿಯ ಸಹ-ಸ್ಥಾಪಕ ಮತ್ತು ಸಿಇಒ ಮೇನಾಕ್ ಚಕ್ರಬರ್ತಿ ಮಾತನಾಡಿ, ಈ ಹೂಡಿಕೆಯು ನವೀಕರಿಸಬಹುದಾದ ನೈಸರ್ಗಿಕ ಅನಿಲ ಕ್ಷೇತ್ರದ ಮೇಲಿನ ಹೂಡಿಕೆದಾರರ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ ಮತ್ತು ಭಾರತದಲ್ಲಿ ಶುದ್ಧ ಇಂಧನ ಮೂಲಸೌಕರ್ಯ ನಿರ್ಮಾಣಕ್ಕೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Wind Energy: ಪವನ ಶಕ್ತಿ ಸಾಮರ್ಥ್ಯದಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ ಭಾರತ: ಪ್ರಲ್ಹಾದ್ ಜೋಶಿ
ಕಳೆದ ಹತ್ತು ವರ್ಷಗಳಲ್ಲಿ ಜಿಪಿಎಸ್ ರಿನ್ಯೂವಬಲ್ಸ್ ತಂತ್ರಜ್ಞಾನ, ಎಂಜಿನಿಯರಿಂಗ್, ಇಪಿಸಿ (EPC), ಕಾರ್ಯಾಚರಣೆ ಮತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ಗಮನಾರ್ಹವಾಗಿ ವಿಸ್ತರಿಸಿಕೊಂಡಿದೆ. ಪ್ರಸ್ತುತ ಕಂಪನಿಯು ಸುಮಾರು ₹1,000 ಕೋಟಿ ವಾರ್ಷಿಕ ಆದಾಯವನ್ನು ಹೊಂದಿದ್ದು, 800ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದೋರ್‌ನ ನಗರ ಘನ ತ್ಯಾಜ್ಯ ಆಧಾರಿತ ಸಿಬಿಜಿ ಘಟಕ, ಬಾರಾಬಂಕಿಯ ಘಟಕ ಮತ್ತು ಕಾಕಿನಾಡಾದ ನಿರ್ಮಾಣ ಹಂತದಲ್ಲಿರುವ ಬೃಹತ್ ಸಿಬಿಜಿ ಸಂಕೀರ್ಣ ಕಂಪನಿಯ ಪ್ರಮುಖ ಸಾಧನೆಗಳಾಗಿವೆ.
ಸದ್ಯ 30ಕ್ಕೂ ಹೆಚ್ಚು ಸಕ್ರಿಯ ಯೋಜನೆಗಳನ್ನು ಹೊಂದಿರುವ ಕಂಪನಿ, ತೈಲ ಮಾರುಕಟ್ಟೆ ಕಂಪನಿ ಗಳ ಸಹಯೋಗದಲ್ಲಿ ಭವಿಷ್ಯದಲ್ಲಿ 200ಕ್ಕೂ ಹೆಚ್ಚು ಸಿಬಿಜಿ ಯೋಜನೆಗಳನ್ನು ಕೈಗೆತ್ತಿ ಕೊಳ್ಳುವ ಗುರಿಯನ್ನು ಹೊಂದಿದೆ. ಇತ್ತೀಚೆಗೆ ಭಾರತದ ಮೊದಲ 'ಎಥನಾಲ್-ಟು-ಜೆಟ್' ಸಸ್ಟೇನ ಬಲ್ ಏವಿಯೇಷನ್ ಫ್ಯುಯೆಲ್ ಘಟಕ ನಿರ್ಮಾಣದ ಗುತ್ತಿಗೆಯನ್ನು ಪಡೆದಿರುವುದು ಕಂಪನಿಯ ಮತ್ತೊಂದು ಹೆಗ್ಗಳಿಕೆಯಾಗಿದೆ. ಈ ಬಂಡವಾಳ ಹೂಡಿಕೆಯು ಭಾರತದ ಹಸಿರು ಇಂಧನ ಕ್ಷೇತ್ರ ದಲ್ಲಿ ಕಂಪನಿಯ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ.