ಲಖನೌ: ದೇಶದಾದ್ಯಂತ ಅತ್ಯಾಚಾರ ಪ್ರಕರಣ ಹಾಗೂ ಲೈಗಿಂಕ ದೌರ್ಜನ್ಯ (Physical Abuse) ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಅಲಹಾಬಾದ್ ಕೋರ್ಟ್ ಅಚ್ಚರಿಯ ಹೇಳಿಕೆ ಒಂದನ್ನು ನೀಡಿದೆ. ಮಹಿಳೆಯ ಸ್ತನಗಳನ್ನು ಹಿಡಿಯುವುದು ಹಾಗೂ ಆಕೆಯ ಪೈಜಾಮ ದಾರ ಅಥವಾ ಪ್ಯಾಂಟ್ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಬದಲಿಗೆ ಅದು ಲೈಂಗಿಕ ದೌರ್ಜನ್ಯ ಎಂದು ಕೋರ್ಟ್ ಹೇಳಿದೆ. ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಕೋರ್ಟ್ (Allahabad High Court) ಈ ಮಹತ್ವದ ತೀರ್ಪು ನೀಡಿದೆ.
ಸಂತ್ರಸ್ತೆಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮ ಪ್ಯಾಂಟ್ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಆಗುವುದಿಲ್ಲ. ಬದಲಿಗೆ ಅದು ತೀವ್ರ ಲೈಂಗಿಕ ದೌರ್ಜನ್ಯವಾಗುತ್ತದೆ ಎಂದು ಕೋರ್ಟ್ ಹೇಳಿದೆ. ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ ಪವನ್ ಮತ್ತು ಆಕಾಶ್ ಎಂದು ಗುರುತಿಸಲಾದ ಆರೋಪಿಗಳು 11 ವರ್ಷದ ಬಾಲಕಿಯ ಸ್ತನಗಳನ್ನು ಹಿಡಿದು, ಆಕೆಯ ಪೈಜಾಮ ದಾರವನ್ನು ಹರಿದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರು. ಸಂತ್ರಸ್ತೆ ರಕ್ಷಣೆಗಾಗಿ ಕೂಗಿಕೊಂಡಿದ್ದಾಳೆ. ದಾರಿಹೋಕರಿಬ್ಬರು ಸರಿಯಾದ ಸಮಯಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದರು. ಪಟಿಯಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 18 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 9/10 (ಗಂಭೀರ ಲೈಂಗಿಕ ದೌರ್ಜನ್ಯ) ಜೊತೆಗೆ ಐಪಿಸಿ ಸೆಕ್ಷನ್ 354-ಬಿ (ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ದ ಸಣ್ಣ ಆರೋಪದ ಅಡಿಯಲ್ಲಿ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.
ಈ ಸುದ್ದಿಯನ್ನೂ ಓದಿ: Physical Abuse: ಹೋಳಿ ಹಬ್ಬದ ಪಾರ್ಟಿಯಲ್ಲಿ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ; ಸಹ ನಟನ ಮೇಲೆ ದೂರು
ಆರೋಪಿಗಳ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿ, ಈ ಪ್ರಕರಣವು ಅತ್ಯಾಚಾರ ಯತ್ನಕ್ಕೆ ಸಮನಾಗಿರುವುದಿಲ್ಲ ಹೆಚ್ಚೆಂದರೆ, ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಜೊತೆಗೆ ಐಪಿಸಿ ಸೆಕ್ಷನ್ 354 ಮತ್ತು 354-ಬಿ ನಿಬಂಧನೆಗಳ ಅಡಿಯಲ್ಲಿ ಬರಬೇಕು ಎಂದು ವಾದಿಸಿದ್ದರು. ಆರೋಪಿಗಳ ಕ್ರಮಗಳು ಅಪರಾಧ ಮಾಡಲು ಸಿದ್ಧತೆಯನ್ನು ಮೀರಿವೆ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕಾಗಿತ್ತು. ಅತ್ಯಾಚಾರ ಯತ್ನ ಮತ್ತು ಅಪರಾಧಕ್ಕೆ ಸಿದ್ಧತೆ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ಪೀಠವು ಈ ತೀರ್ಪನ್ನು ನೀಡಿದೆ.