ಅಮರಾವತಿ, ಫೆ.18: ದಂಪತಿ ಕೋರ್ಟ್ ಮುಖಾಂತರ ಪ್ರತ್ಯೇಕವಾದಾಗ (ವಿಚ್ಛೇದನ ಪಡೆದಾಗ) ಪತ್ನಿಗೆ ಜೀವನಾಂಶ ನೀಡುವುದು ಪತಿಯ ಕರ್ತವ್ಯವಾಗಿದೆ. ಇದೀಗ ಆಂಧ್ರಪ್ರದೇಶ ಹೈಕೋರ್ಟ್ (Andhra Pradesh High Court) ಮಹತ್ವದ ತೀರ್ಪು ನೀಡಿದ್ದು, ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವುದು ದಾನವಲ್ಲ, ಬದಲಾಗಿ ಅದು ಒಂದು ಹಕ್ಕು (legal right) ಎಂದು ಆಂಧ್ರಪ್ರದೇಶ ಹೈಕೋರ್ಟ್ ದೃಢಪಡಿಸಿದೆ. ಸಮಾನತೆ, ನ್ಯಾಯ ಮತ್ತು ಉತ್ತಮ ಆತ್ಮಸಾಕ್ಷಿಯನ್ನು ಎತ್ತಿಹಿಡಿಯಲು ಇದರ ಜಾರಿ ಅತ್ಯಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದಂಪತಿಯ ವಿಚ್ಛೇದನ ಪ್ರಕರಣವೊಂದರಲ್ಲಿ, ಚಿನ್ನಂ ಕಿರಣ್ಮಯಿ ಸ್ಮೈಲಿ ಎಂಬುವವರಿಗೆ ತಿಂಗಳಿಗೆ ರೂ. 7,500 ಮತ್ತು ಅವರ ಅಪ್ರಾಪ್ತ ವಯಸ್ಕ ಮಗನಿಗೆ ತಿಂಗಳಿಗೆ ರೂ. 5,000 ನೀಡುವಂತೆ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ವೈ. ಲಕ್ಷ್ಮಣ ರಾವ್ ಅವರು ಆದೇಶ ನೀಡಿದ್ದಾರೆ.
ಕಾನೂನುಬದ್ಧವಾಗಿ ಅವರನ್ನು ಪೋಷಿಸಲು ಬದ್ಧರಾಗಿರುವವರ ನಿರ್ಲಕ್ಷ್ಯದಿಂದಾಗಿ ಹೆಂಡತಿ, ಮಗು ಅಥವಾ ಅವರನ್ನೇ ಅವಲಂಬಿಸಿರುವ ಪೋಷಕರು ಬಡತನದಲ್ಲಿ ಕೊಳೆಯಬಾರದು ಎಂಬುದು ಈ ನಿರ್ಧಾರದ ಉದ್ದೇಶ ಎಂದು ನ್ಯಾಯಮೂರ್ತಿ ರಾವ್ ಹೇಳಿದರು.
ಪತಿ-ಪತ್ನಿ ಮಧ್ಯೆ ಜಗಳ ಸಾಮಾನ್ಯ; 58 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಲು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್
ಜೀವನಾಂಶ ಕೊಡುವುದೆಂದರೆ ಅದು ದಾನವಲ್ಲ, ಬದಲಾಗಿ ಒಂದು ಹಕ್ಕು ಎಂದು ನ್ಯಾಯಾಲಯಗಳು ಸತತವಾಗಿ ಪುನರುಚ್ಚರಿಸಿವೆ. ಸಮಾನತೆ, ನ್ಯಾಯ ಮತ್ತು ಉತ್ತಮ ಆತ್ಮಸಾಕ್ಷಿಯನ್ನು ಎತ್ತಿಹಿಡಿಯಲು ಅದರ ಜಾರಿ ಅತ್ಯಗತ್ಯ. ಹೀಗಾಗಿ, ಭಾರತದ ಕಾನೂನಿನ ಪ್ರಕಾರ ಪೋಷಣೆ ಮಾಡಬೇಕಾದವರ ನಿರ್ಲಕ್ಷ್ಯದಿಂದಾಗಿ ಯಾವುದೇ ಹೆಂಡತಿ, ಮಗು ಅಥವಾ ಅವಲಂಬಿತ ಪೋಷಕರು ಬಡತನದಲ್ಲಿ ಕೊಳೆಯಬಾರದು ಎಂಬುದು ನ್ಯಾಯಾಂಗದ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಫೆಬ್ರವರಿ 9 ರಂದು ಹೈಕೋರ್ಟ್ ನ್ಯಾಯಮೂರ್ತಿ ತಮ್ಮ ಆದೇಶದಲ್ಲಿ ಹೇಳಿದರು.
ಮಾರ್ಚ್ 3, 2018 ರಂದು ಕೌಟುಂಬಿಕ ನ್ಯಾಯಾಲಯದ ಆದೇಶದಿಂದ ಬೇಸತ್ತ ಚಿನ್ನನ್ ಕಿಶೋರ್ ಕುಮಾರ್ ಎಂಬುವವರು, ಜೀವನಾಂಶ ನೀಡುವುದು ವಿಕೃತ ಮತ್ತು ತಾರತಮ್ಯದಿಂದ ಕೂಡಿದೆ ಎಂದು ವಾದಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕುಮಾರ್ ಅವರ ಅರ್ಜಿಯಲ್ಲಿ, ಫ್ಯಾಮಿಲಿ ಕೋರ್ಟ್ ಜೀವನಾಂಶ ಮಂಜೂರು ಮಾಡುವಲ್ಲಿ ತಪ್ಪು ಮಾಡಲಾಗಿದೆ ಎಂದು ಹೇಳಿದ್ದಾರೆ. ಪ್ರತ್ಯೇಕವಾಗಿ ವಾಸಿಸುವ ಪತ್ನಿ ವಿರುದ್ಧ ಹಲವು ಪ್ರಕರಣಗಳಿವೆ ಎಂದು ಆರೋಪಿಸಿದರು. ಇದಲ್ಲದೆ, ತಮ್ಮ ಮಾಜಿ ಪತ್ನಿಗೆ ತಿಂಗಳಿಗೆ 7,500 ರೂ. ಮತ್ತು ಅಪ್ರಾಪ್ತ ವಯಸ್ಕ ಮಗನಿಗೆ ತಿಂಗಳಿಗೆ 5,000 ರೂ. ಪಾವತಿಸಲು ನೀಡಿರುವ ಆದೇಶ ಸಮ್ಮತವಲ್ಲ. ಮನಬಂದಂತೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ರಾವ್ ಅವರು ಜೀವನಾಂಶ ನೀಡುವುದು ದಾನವಲ್ಲ, ಇದೊಂದು ಬದ್ಧತೆ ಎಂದು ಹೇಳಿದ್ದಾರೆ. ಇದು ಸಂವಿಧಾನದ 15 (3) ಮತ್ತು 39 ನೇ ವಿಧಿಗಳ ರಕ್ಷಣಾತ್ಮಕ ವ್ಯಾಪ್ತಿಯೊಳಗೆ ಬರುತ್ತದೆ ಎಂದು ನ್ಯಾಯಮೂರ್ತಿ ಒತ್ತಿ ಹೇಳಿದರು.