ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ(Deepawali) ಕ್ಷಣಗಣನೆ ಆರಂಭವಾಗಿದ್ದು, ದೇಶದಾದಂತ್ಯ ಸಂಭ್ರಮ ಮನೆ ಮಾಡಿದೆ. ಇನ್ನು ದೀಪಾವಳಿ ಎಂದಾಕ್ಷಣ ನೆನಪಿಗೆ ಬರುವುದು ಜಗಮಗಿಸುವ ದೀಪಗಳು, ಬಗೆಬಗೆಯ ಸಿಹಿ ತಿಂಡಿಗಳು, ಪಟಾಕಿಗಳು. ಪಟಾಕಿ ಸಿಡಿಸುವ ವಿಚಾರ ಬಂದಾಗಲೆಲ್ಲಾ ಪರಿಸರವಾದಿಗಳ ಕೂಗು ಕೇಳಿ ಬರುತ್ತದೆ. ಪಟಾಕಿ ಸಿಡಿದಾಕ್ಷಣ ಅದರಿಂದ ಹೊರ ಹೊಮ್ಮುವ ಹೊಗೆ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಪ್ರತಿವರ್ಷ ಈ ಕೆಂಪು ಪಟಾಕಿ ಬದಲಿಗೆ, ಪರಿಸರಕ್ಕೆ ಪೂರಕವಾಗುವ ಹಸಿರು ಪಟಾಕಿ(Green Crackers)ಗಳನ್ನು ಸಿಡಿಸುವಂತೆ ಸರ್ಕಾರಗಳು, ಅನೇಕ ಸಂಘ-ಸಂಸ್ಥೆಗಳು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ.
ಹಾಗಿದ್ದರೆ ಏನಿದು ಹಸಿರು ಪಟಾಕಿ? ಪತ್ತೆ ಮಾಡುವುದು ಹೇಗೆ? ಪರಿಸರಕ್ಕೆ ಪೂರಕವೇ ಎಂಬುವುದನ್ನು ಇಲ್ಲಿ ತಿಯೋಣ
ಹೆಚ್ಚು ಮಾಲಿನ್ಯವಲ್ಲದ ಈ ಪಟಾಕಿ ಕೇವಲ ಶೇ.30ರಷ್ಟು ಪ್ರಮಾಣದ ಹೊಗೆಯನ್ನು ಹೊರಹಾಕುತ್ತದೆ. ಹಸಿರು ಪಟಾಕಿಗಳು ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುವ, ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ಹೊರ ಸೂಸುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಪರಿಗಣಿಸಲಾಗುತ್ತದೆ.
ಸಾಮಾನ್ಯ ಪಟಾಕಿಗಳನ್ನು ನೈಟ್ರೇಟ್ ಮತ್ತು ಬೇರಿಯಂಗಳು ಕಂಡು ಬರುತ್ತವೆ. ಈ ರಾಸಾಯನಿಕಗಳು ಹಸಿರು ಪಟಾಕಿಗಳಲ್ಲಿ ಇರುವುದಿಲ್ಲ. ಹಸಿರು ಪಟಾಕಿಗಳು ಸಿಡಿದಾಗ ನೀರಿನ ಆವಿ ಮತ್ತು ಹೊಗೆ ಹೊರ ಹಾಕುವುದನ್ನು ದುರ್ಬಲಗೊಳಿಸುತ್ತದೆ. ಇದರಲ್ಲಿ ಸುರಕ್ಷಿತ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ.
ಈ ಪಟಾಕಿಗಳು ಉರಿಯುವಾಗ, ಅವು ನೀರಿನ ಆವಿ ಅಥವಾ ಗಾಳಿಯಂತಹ ಅನಿಲಗಳನ್ನು ಬಿಡುಗಡೆ ಮಾಡುತ್ತವೆ, ಇದು ಪಟಾಕಿ ಸಿಡಿದ ಬಳಿಕ ಉಂಟಾಗುವ ಧೂಳನ್ನು ಕಡಿಮೆ ಮಾಡುತ್ತದೆ.
ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿ ಎರಡೂ ಮಾಲಿನ್ಯ ಉಂಟು ಮಾಡುತ್ತದೆ. ಆದರೆ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇ.30ರಷ್ಟು ಕಡಿಮೆ ಮಾಲಿನ್ಯ ಮಾಡುತ್ತದೆ.
ಹಸಿರು ಪಟಾಕಿಗಳು 110-125 ಡೆಸಿಬಲ್ ಶಬ್ದ ಉಂಟು ಮಾಡಿದರೆ, ಸಾಂಪ್ರದಾಯಿಕ ಪಟಾಕಿಗಳು 160 ಡೆಸಿಬಲ್‌ಗಳವರೆಗೆ ಶಬ್ದವನ್ನು ಉತ್ಪಾದಿಸಬಹುದು.ಹಸಿರು ಪಟಾಕಿ ಕಡಿಮೆ ಹೊಗೆ ಹೊರಸೂಸುತ್ತದೆ. ಮತ್ತು ಧೂಳು ಹೀರಿಕೊಳ್ಳುತ್ತದೆ .ಸಾಮಾನ್ಯ ಪಟಾಕಿಗಳು ಭಾರ ಲೋಹಗಳ ಸಂಯುಕ್ತಗಳನ್ನು ಹೊಂದಿರುತ್ತವೆ. ಅವುಗಳು ಸುಟ್ಟಾಗ ಗಾಳಿ ಮತ್ತು ಆರೋಗ್ಯ ಎರಡಕ್ಕೂ ಅತ್ಯಂತ ಹಾನಿಕಾರಕ.
ಈ ಸುದ್ದಿಯನ್ನು ಓದಿ: Deepavali 2025: ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ದೀಪಾವಳಿಗೆ ಶುಭ ಹಾರೈಸಿದ ವಿಶ್ವ ನಾಯಕರು
ಆದರೆ, ಹಸಿರು ಪಟಾಕಿಗಳಿಗೆ ಜಿಯೋಲೈಟ್ ಮತ್ತು ಕಬ್ಬಿಣದ ಆಕ್ಸೈಡ್‌ನಂತಹ ಬಹುಕ್ರಿಯಾತ್ಮಕ ವಸ್ತುಗಳನ್ನು ಸೇರಿಸಲಾಗುತ್ತದೆ, ಇದು ರಾಸಾಯನಿಕ ಅಂಶವನ್ನು ಕಡಿಮೆ ಮಾಡುವ ಮೂಲಕ ಹೊರ ಸೂಸುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಂದರೆ, ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ, ಹಸಿರು ಪಟಾಕಿಗಳು ಕಡಿಮೆ ಮಾಲಿನ್ಯವನ್ನು ಹರಡುತ್ತವೆ ಮತ್ತು ಆರೋಗ್ಯಕ್ಕೆ ಸುರಕ್ಷಿತ ಆಯ್ಕೆಯೆಂದು ಪರಿಗಣಿಸಲಾಗುತ್ತದೆ.
ಹಸಿರು ಪಟಾಕಿಗಳು ಮಾಲಿನ್ಯ ಕಡಿಮೆ ಮಾಡುತ್ತವೆಯೇ?
ಇಲ್ಲ, ಹಸಿರು ಪಟಾಕಿಗಳು ಸಂಪೂರ್ಣವಾಗಿ ಮಾಲಿನ್ಯ ಮುಕ್ತವಲ್ಲ, ಆದರೆ CSIR-NEERI ಪ್ರಕಾರ, ಅವು ಸಾಮಾನ್ಯ ಪಟಾಕಿಗಳಿಗಿಂತ ಸುಮಾರು 30% ನಷ್ಟು ಕಡಿಮೆ ವಾಯು ಮಾಲಿನ್ಯವನ್ನು ಉಂಟುಮಾಡುತ್ತವೆ. ಈ ಮಾಲಿನ್ಯವು ಮುಖ್ಯವಾಗಿ ಕಣಗಳ ವಸ್ತುವಿನಿಂದ ಉಂಟಾಗುತ್ತದೆ. ಇವು ಗಾಳಿಯಲ್ಲಿ ತೇಲುತ್ತಿರುವ ಸಣ್ಣ ಧೂಳಿನ ಕಣಗಳಾಗಿವೆ. ಸಿಪಿಸಿಬಿ ತಜ್ಞರ ಪ್ರಕಾರ, ಹೊಗೆ ಹೊರಸೂಸುವ ಯಾವುದನ್ನಾದರೂ ಪರಿಸರ ಸ್ನೇಹಿ ಎಂದು ಪರಿಗಣಿಸಲಾಗದು.
ಹಸಿರು ಪಟಾಕಿ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?
2018ರ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಹಾಗೂ ವಾಯುಮಾಲಿನ್ಯ ತಡೆ ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ 2020ರಲ್ಲಿ ಅಂದಿನ ಸರ್ಕಾರ ಪಟಾಕಿ ನಿಷೇಧಿಸಿತ್ತು. ಅಲ್ಲದೆ ಹಸಿರು ಪಟಾಕಿ ಸಿಡಿಸುವಂತೆ ಸೂಚಿಸಿತ್ತು. ದೆಹಲಿಯಲ್ಲಿ ಪಟಾಕಿಗಳ ಮೇಲೆ ನಿಷೇಧ ಹೇರಿದ್ದರೂ, ಸಾವಿರಾರು ಕಿಲೋ ಪಟಾಕಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ದೆಹಲಿಯಲ್ಲಿ ಪಟಾಕಿ ನಿಷೇಧ ಆದೇಶ ಸರಿಯಾಗಿ ಕಾರ್ಯರೂಪಕ್ಕೆ ಬಾರದ್ದನ್ನು ಉಲ್ಲೇಖಿಸಿ, ಅಕ್ಟೋಬರ್ 15, 2025ರಂದು ದೀಪಾವಳಿ ಸಮಯದಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.