ಭೋಪಾಲ್, ಮಾ. 14: ಮದುವೆ ಸಂಭ್ರಮದಲ್ಲಿದ್ದ ವರ ಶಾಕ್‌ಗೆ ಒಳಗಾಗಿದ್ದಾನೆ. ಮದುವೆ ಮಂಟಪದಿಂದಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಆತ ಕುಖ್ಯಾತ ದರೋಡೆಕೋರ. ಹೀಗಾಗಿ ವಿವಾಹ ಸಮಾರಂಭಕ್ಕೆ ನುಗ್ಗಿದ ಪೊಲೀಸರು, ದರೋಡೆಕೋರನನ್ನು ಮಂಟಪದಿಂದಲೇ ಬಂಧಿಸಿದರು. ಮಧ್ಯಪ್ರದೇಶದ (Madhya Pradesh) ಭೋಪಾಲ್‌ನಲ್ಲಿ ಘಟನೆ ನಡೆದಿದೆ (crime news).
ಮದುವೆಗೆ ಬಂದ ಅತಿಥಿಗಳಿ ರೀಲ್ಸ್‌ಗಾಗಿ ಇದನ್ನು ಮಾಡಿರಬಹುದು ಎಂದೇ ಭಾವಿಸಿದ್ದರು. ಆದರೆ ವಧು ಕೈಯಲ್ಲಿ ಹಾಕಿದ್ದ ಮೆಹೆಂದಿ ಹಾಗೂ ಮುಖದಲ್ಲಿ ಹಚ್ಚಿದ್ದ ಅರಶಿನದೊಂದಿಗೆ ಪೊಲೀಸ್ ಠಾಣೆಗೆ ಬಂದು ಪರಿಪರಿಯಾಗಿ ಮನವಿ ಮಾಡಿಕೊಂಡಾಗ ಎಲ್ಲರೂ ದಿಗ್ಭ್ರಮೆಗೊಳಗಾದರು. ʼʼನನ್ನ ಜೀವನ ನಾಶವಾಗುತ್ತದೆ. ನನ್ನ ತಪ್ಪೇನು? ಅವನು ಮಾಡಿದ ಅಪರಾಧಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಮನೆಯಲ್ಲಿ ಅತಿಥಿಗಳು ಕಾಯುತ್ತಿದ್ದಾರೆ. ಅರಶಿನ ಶಾಸ್ತ್ರ ಮತ್ತು ಇತರ ಆಚರಣೆಗಳು ಮುಗಿದಿವೆʼʼ ಎಂದು ವಧು ಸೀಮಾ ಪೊಲೀಸ್ ಅಧಿಕಾರಿಗಳ ಮುಂದೆ ಅತ್ತಿದ್ದಾಳೆ.
ಕಣ್ಣೀರನ್ನು ತಡೆದುಕೊಳ್ಳುತ್ತಾ, ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ತನ್ನ ನಿಶ್ಚಿತ ವರ ಆಕಾಶ್ ಅಥವಾ ಭೂರಾನನ್ನು ಕೇವಲ ಎರಡು ಗಂಟೆಗಳ ಕಾಲ ಬಿಡುಗಡೆ ಮಾಡುವಂತೆ ಅವಳು ಪೊಲೀಸರಲ್ಲಿ ಬೇಡಿಕೊಂಡಳು. ಅಧಿಕಾರಿಗಳು ನಿರಾಕರಿಸಿದಾಗ, ಅವಳು ಮಾಡಿರುವ ವಿನಂತಿಯು ಎಲ್ಲರಿಗೂ ಅಚ್ಚರಿ ತಂದಿದೆ. ಅವನ ಬಿಡುಗಡೆ ಅಸಾಧ್ಯವಾದರೆ, ಕನಿಷ್ಠ ಪಕ್ಷ ಪೊಲೀಸ್ ಕಸ್ಟಡಿಯಲ್ಲಿ ವಿವಾಹ ಮಾಡಬೇಕು ಎಂದು ಹೇಳಿದಳು. ಆದರೆ,ಪೊಲೀಸರು ಇದಕ್ಕೊಪ್ಪಲಿಲ್ಲ ಎಂದು ಹೇಳಲಾಗಿದೆ.
ಬಿಕ್ಲು ಶಿವ ಕೊಲೆ ಪ್ರಕರಣ; ಪರಪ್ಪನ ಅಗ್ರಹಾರ ಜೈಲಿನಿಂದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಬಿಡುಗಡೆ
ಅಂದಹಾಗೆ, ಬುಧವಾರ ಮಧ್ಯಾಹ್ನ (ಮಾ. 11) ಪೊಲೀಸ್ ತಂಡವು ಮದುವೆ ಸ್ಥಳಕ್ಕೆ ತಲುಪಿ ಅಕ್ರಮ ಗ್ಯಾಂಗ್‍ನ ನಾಯಕ ಎಂದು ಹೇಳಲಾದ ಆಕಾಶ್ ನೀಲಕಂಠ ಎಂಬಾತನನ್ನು ವಶಕ್ಕೆ ಪಡೆದರು. ಪೊಲೀಸ್ ಅಧಿಕಾರಿಗಳು ವರನನ್ನು ಬಂಧಿಸಿ ಕರೆದೊಯ್ಯುತ್ತಿರುವುದನ್ನು ಅತಿಥಿಗಳು ಆರಂಭದಲ್ಲಿ ನಂಬಿರಲಿಲ್ಲ. ಆಕಾಶ್ ಜತೆಗೆ ಪೊಲೀಸರು ಆತನ ಸಹಚರರಾದ ರಾಜಮ್‌ಜಿ ಠಾಕೂರ್, ಅಭಿಷೇಕ್ ಉಪಾಧ್ಯಾಯ, ಅಭಿಷೇಕ್ ಮೀನಾ, ನೀರಜ್ ಖಂಗೆ ಮತ್ತು ಅಮಿತ್ ಓಸ್ವಾಲ್ ಅವರನ್ನು ಬಂಧಿಸಿದರು. ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.
ಸ್ಥಳೀಯವಾಗಿ ಅಕ್ರಮ ಗ್ಯಾಂಗ್ ಎಂದು ಕರೆಯಲ್ಪಡುವ ಈ ಗ್ಯಾಂಗ್ 2018ರಿಂದ ಭೋಪಾಲ್‌ನಲ್ಲಿ ಸಕ್ರಿಯವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಈ ಗುಂಪಿನಲ್ಲಿ ವಾಜಪೇಯಿ ನಗರ ಪ್ರದೇಶದ 50ಕ್ಕೂ ಹೆಚ್ಚು ಯುವಕರು ಇದ್ದರು.
ಈ ಗ್ಯಾಂಗ್‌ನ ನಾಯಕ ಎಂದು ಹೇಳಲಾಗುವ ಆಕಾಶ್ ಅಲಿಯಾಸ್ ಭೂರಾ ಸಾಮಾನ್ಯ ಅಪರಾಧಿಯಲ್ಲ. ಪೊಲೀಸ್ ದಾಖಲೆಗಳ ಪ್ರಕಾರ ಅವನ ವಿರುದ್ಧ ಕೊಲೆಯಂತಹ ಗಂಭೀರ ಆರೋಪಗಳು ಸೇರಿದಂತೆ 31 ಪ್ರಕರಣಗಳು ದಾಖಲಾಗಿವೆ.
ಭೋಪಾಲ್‌ನಲ್ಲಿ, ಬಿಜೆಪಿ ಯುವ ಮೋರ್ಚಾ ಮಂಡಲ ಉಪಾಧ್ಯಕ್ಷ ಸುರೇಂದ್ರ ಕುಶ್ವಾ ಅವರನ್ನು 2024ರ ಮಾರ್ಚ್ 18ರಂದು ಕೊಲೆ ಮಾಡಲಾಯಿತು. ಕೊಲೆ ಪ್ರಕರಣದಲ್ಲಿ ಆಕಾಶ್ ಪ್ರಮುಖ ಆರೋಪಿಯಾಗಿದ್ದ. ಈ ಸಂಬಂಧ, ಸುಮಾರು 18 ತಿಂಗಳು ಜೈಲಿನಲ್ಲಿ ಕಳೆದಿದ್ದ. ಈ ಪ್ರಕರಣದಲ್ಲಿ ಅವನು ಸುಮಾರು ನಾಲ್ಕು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾದ.
ಎಲ್‌ಪಿಜಿ ಕೊರತೆ ನಡುವೆ ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ; ಬೆಂಗಳೂರು ಸೇರಿ 2 ಕಡೆ ಸಿಲಿಂಡರ್ ಕಳವು
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗ್ಯಾಂಗ್ 26 ವರ್ಷದ ಪಾದ್ರಿಯನ್ನು ಅಪಹರಿಸಿ, ಈದ್ಗಾ ಹಿಲ್ಸ್ ಪ್ರದೇಶದ ಫ್ಲಾಟ್‌ನೊಳಗೆ ಕೂಡಿಹಾಕಿ ಕ್ರೂರವಾಗಿ ಹಲ್ಲೆ ನಡೆಸಿ, 8 ಲಕ್ಷ ರುಪಾಯಿ ಸುಲಿಗೆಗಾಗಿ ಬೇಡಿಕೆ ಇಟ್ಟಿದೆ ಎಂದು ಆರೋಪಿಸಲಾಗಿದೆ. ಹಣ ಪಾವತಿಸಲು ವಿಫಲವಾದರೆ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಲಾಗಿದೆ. ಪಾದ್ರಿಯ ಸಹೋದರನಿಗೆ ಆನ್‌ಲೈನ್‌ನಲ್ಲಿ 50,000 ರುಪಾಯಿ ವರ್ಗಾಯಿಸಲು ಮತ್ತು ಉಳಿದ 7.5 ಲಕ್ಷ ರುಪಾಯಿಗಳನ್ನು ಕಂತುಗಳಲ್ಲಿ ವ್ಯವಸ್ಥೆ ಮಾಡುವಂತೆ ಒತ್ತಡ ಹೇರಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 11ರಂದು ಪಾದ್ರಿ ಕೋ-ಎ-ಫಿಜಾ ಪೊಲೀಸ್ ಠಾಣೆಗೆ ಓಡಿಬಂದು, ಅಲ್ಲಿ ಎಫ್‌ಐಆರ್ ದಾಖಲಿಸಿದಾಗ ಇಡೀ ಕಾರ್ಯಾಚರಣೆ ಬೆಳಕಿಗೆ ಬಂದಿತು. ದೂರಿನ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ದಾಳಿ ನಡೆಸಿದರು. ಹೀಗಾಗಿ ಮದುವೆ ಸಮಾರಂಭದಿಂದಲೇ ಆತನನ್ನು ಬಂಧಿಸಲಾಯಿತು.
ಸೀಮಾ ಮತ್ತು ಆಕಾಶ್ ಸುಮಾರು ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೀಮಾ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ವಾರಗಳಿಂದ ಮದುವೆಗೆ ತಯಾರಿ ನಡೆಸುತ್ತಿದ್ದರು.