ಗಾಂಧಿನಗರ, ಅ. 2: ಗುಜರಾತ್‌ನ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು( President Droupadi Murmu) ಅಂಕಿತ ಹಾಕಿದ್ದಾರೆ. ಇದರೊಂದಿಗೆ ಉತ್ತರಾಖಂಡದ ಬಳಿಕ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದ ದೇಶದ ಎರಡನೇ ರಾಜ್ಯವಾಗಿ ಗುಜರಾತ್ ಹೊರಹೊಮ್ಮಿದೆ. 2026ರ ಮಾರ್ಚ್ 24ರಂದು ಹೊಸ ಗುಜರಾತ್ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿತ್ತು. ಇದೀಗ ರಾಷ್ಟ್ರಪತಿ ಅಂಕಿತ ದೊರೆತಿದ್ದು, ರಾಜ್ಯ ಸರ್ಕಾರ ಜಾರಿಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದ ಬಳಿಕ ಕಾನೂನು ಜಾರಿಗೆ ಬರಲಿದೆ.
UCC ಅಡಿಯಲ್ಲಿ ವಿವಾಹ, ವಿಚ್ಛೇದನ, ಉತ್ತರಾಧಿಕಾರ ಹಾಗೂ ಲಿವ್-ಇನ್ ಸಂಬಂಧಗಳಿಗೆ ಸಾಮಾನ್ಯ ಕಾನೂನು ಚೌಕಟ್ಟು ರೂಪಿಸಲಾಗಿದೆ. ವಿವಾಹ ನೋಂದಣಿ ಕಡ್ಡಾಯವಾಗಿದ್ದು, ಬಹುಪತ್ನಿತ್ವ ಮತ್ತು ದ್ವಿವಿವಾಹಕ್ಕೆ ನಿಷೇಧ ಹೇರಲಾಗಿದೆ. ಪುತ್ರರು ಮತ್ತು ಪುತ್ರಿಯರಿಗೆ ಉತ್ತರಾಧಿಕಾರದಲ್ಲಿ ಸಮಾನ ಹಕ್ಕುಗಳನ್ನು ನೀಡಲಾಗಿದೆ.
ಉತ್ತರಾಖಂಡ, ಗುಜರಾತ್ ನಂತರ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಅಂಗೀಕರಿಸಿದ ಅಸ್ಸಾಂ
ಲಿವ್-ಇನ್ ಸಂಬಂಧಗಳ ನೋಂದಣಿ ಹಾಗೂ ಅವು ಅಂತ್ಯಗೊಂಡಾಗ ಸಂಬಂಧಿತ ಮಾಹಿತಿಯನ್ನು ಸಲ್ಲಿಸುವ ವ್ಯವಸ್ಥೆಯನ್ನೂ ಕಾನೂನು ಒಳಗೊಂಡಿದೆ. ಇಂತಹ ಸಂಬಂಧಗಳಿಂದ ಜನಿಸುವ ಮಕ್ಕಳಿಗೂ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಲಾಗಿದೆ. ಆದರೆ ಸಂವಿಧಾನದ ಅಡಿಯಲ್ಲಿ ರಕ್ಷಣೆ ಹೊಂದಿರುವ ಪರಿಶಿಷ್ಟ ಪಂಗಡಗಳು (ST) ಹಾಗೂ ಕೆಲವು ಸಾಂಪ್ರದಾಯಿಕ ಹಕ್ಕುಗಳನ್ನು ಹೊಂದಿರುವ ಸಮುದಾಯಗಳನ್ನು UCC ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಕಾನೂನು ಯಾವ ದಿನದಿಂದ ಜಾರಿಗೆ ಬರಲಿದೆ ಎಂಬುದನ್ನು ಗುಜರಾತ್ ಸರ್ಕಾರ ಪ್ರತ್ಯೇಕ ಅಧಿಸೂಚನೆಯ ಮೂಲಕ ಪ್ರಕಟಿಸಲಿದೆ.