ಗುರುಗ್ರಾಮ, ಸೆ.15: ಹರಿಯಾಣದ ಗುರುಗ್ರಾಮದಲ್ಲಿ (Gurugram) ಮಹಿಳಾ ಬೈಕ್ ಸವಾರಳನ್ನು ಬೆನ್ನಟ್ಟಿ ಡಿಕ್ಕಿ ಹೊಡೆದ ಆರೋಪಿ ಕಾರು ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ (Rajasthan) ದೌಸಾದಲ್ಲಿ ಬಂಧಿಸಲಾಗಿದೆ. ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆಸಿದ ಘಟನೆಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲ್ಲೇ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇದೀಗ ಹಿಂಡ್ ಆಂಡ್ ರನ್ ಪ್ರಕರಣದಲ್ಲಿ ಆರೋಪಿಯನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.
ಭಾನುವಾರ (ಸೆ.13) ರ ಬೆಳಿಗ್ಗೆ ಘಟನೆ ನಡೆದಾಗಿನಿಂದ ಬೈನ್ಸ್ಲಾ ತಲೆಮರೆಸಿಕೊಂಡಿದ್ದ. ಆತನ ಪತ್ತೆಗೆ ವ್ಯಾಪಕ ಶೋಧ ಕಾರ್ಯ ನಡೆಸಲಾಯಿತು. ಆರೋಪಿ ವಿರುದ್ಧ ಕೊಲೆ ಯತ್ನ ಸೇರಿದಂತೆ ಇತರ ಪ್ರಕರಣ ದಾಖಲಾಗಿದೆ. ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಆರೋಪಿಯು ಹಿಂಡ್ ಆಂಡ್ ರನ್ ಮಾಡಿ ಪರಾರಿಯಾಗಿದ್ದ.
ಸಿಯಾ ಎಂದೂ ಕರೆಯಲ್ಪಡುವ ಶಿವಾನಿ ಚೌಹಾಣ್ ಎಂಬ ಮಹಿಳಾ ಬೈಕರ್, ಇತರ ಬೈಕರ್‌ಗಳ ಗುಂಪಿನೊಂದಿಗೆ ಸವಾರಿ ಮಾಡುತ್ತಿದ್ದರು. ಇದಕ್ಕಿದ್ದಂತೆ ಬೈನ್ಸ್ಲಾ ಚಲಾಯಿಸುತ್ತಿದ್ದ ಕಾರು, ಅವರನ್ನು ಹಿಂಬಾಲಿಸಲು ಪ್ರಾರಂಭಿಸಿತು. ಅದರಲ್ಲಿದ್ದವರು ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿತು. ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಅವರು ಕೇಳಿದಾಗ, ಕಾರು ಅವರ ಬೈಕ್ ಕಡೆಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಬೈಕ್‌ನಿಂದ ಕೆಳಗೆ ಬಿದ್ದು ರಸ್ತೆಗೆ ಬಿದ್ದಿದ್ದಾರೆ.
ಇಲ್ಲಿದೆ ವಿಡಿಯೊ:
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರೋಪಿಯು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವುದು ವಿಡಿಯೊದಲ್ಲಿ ಕಾಣಬಹುದು. ಆದರೆ, ಬೈನ್ಸ್ಲಾ ಈ ಆರೋಪವನ್ನು ನಿರಾಕರಿಸಿದ್ದಾನೆ. ತನ್ನ ಕಾರು ಸಿಯಾ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಆದರೇ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿಲ್ಲ ಎಂದಿದ್ದಾನೆ, ಅಲ್ಲದೆ, ಬೈಕರ್ ಒಬ್ಬರು ಮಹಿಳೆ ಎಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆ.
ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ಹಿಟ್-ಆ್ಯಂಡ್-ರನ್ ಆರೋಪಿ ಕಲ್ಯಾಣ್ ಬೈನ್ಸ್ಲಾ ಯಾರು? ಏನಿವನ ಹಿನ್ನೆಲೆ?
ಸಿಯಾ ಜೊತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರರ ಗುಂಪು ತನ್ನ ಮೇಲೆ ದಾಳಿ ಮಾಡಬಹುದು ಎಂಬ ಭಯದಿಂದ ತಕ್ಷಣ ವಾಹನ ನಿಲ್ಲಿಸಲಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ, ಹಲವು ಬೈಕ್ ಸವಾರರು ತನ್ನ ವಾಹನವನ್ನು ಪದೇಪದೇ ಹಿಂದಿಕ್ಕುತ್ತಿದ್ದರು ಎಂದು ಹೇಳಿದ್ದಾನೆ.
ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಎಂದು ಹೇಳಿಕೊಂಡಿರುವ ಆರೋಪಿಯು, ಬೈಕ್ ಸವಾರರ ಗುಂಪು ತನ್ನ ಮೇಲೆ ಮತ್ತು ತನ್ನ ಕುಟುಂಬದ ಮೇಲೆ ಹಲ್ಲೆ ನಡೆಸಬಹುದೆಂಬ ಭಯದಿಂದ ಸ್ಥಳದಿಂದ ಓಡಿಹೋಗಿದ್ದಾಗಿ ಹೇಳಿದ್ದಾನೆ. ಘಟನೆ ಮತ್ತು ನಂತರದ ವಿವಾದದ ನಂತರ ಆತ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಸಹ ನಿಷ್ಕ್ರಿಯಗೊಳಿಸಿದ್ದಾನೆ.
ಗುರುಗ್ರಾಮ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಮಲಿಕ್ ಈ ಹಿಂದೆ ಹೇಳಿದ್ದ ಪ್ರಕಾರ, ವಿಡಿಯೊದಲ್ಲಿ ಉದ್ದೇಶಪೂರ್ವಕವಾಗಿ ಕಾರನ್ನು ಬೈಕ್ ಸವಾರಳ ಮೇಲೆ ಡಿಕ್ಕಿ ಹೊಡೆಸಿರುವಂತೆ ತೋರಿಸುತ್ತಿವೆ. ಸಿಯಾ ಅವರ ಕುಟುಂಬವು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ನಂತರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದರು.