ಲಖನೌ, ಸೆ. 8: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ (Air India) ವಿಮಾನವು ಮಂಗಳವಾರ (ಸೆಪ್ಟೆಂಬರ್ 8) ಉತ್ತರ ಪ್ರದೇಶದ ಲಖನೌ ವಿಮಾನ ನಿಲ್ದಾಣದಲ್ಲಿ ಬಲವಾದ ಗಾಳಿಯಿಂದಾಗಿ ಮೊದಲ ಲ್ಯಾಂಡಿಂಗ್ ಪ್ರಯತ್ನವನ್ನು ಸ್ಥಗಿತಗೊಳಿಸಿ ‘ಗೋ-ಅರೌಂಡ್’ ಮಾಡಿತು. ಬಳಿಕ ಎರಡನೇ ಪ್ರಯತ್ನದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ದೆಹಲಿ-ಲಖನೌ ಮಾರ್ಗದಲ್ಲಿ ಸಂಚರಿಸುತ್ತಿದ್ದ AI-1717 ವಿಮಾನವು ಮಧ್ಯಾಹ್ನ ಸುಮಾರು 3.45ಕ್ಕೆ ಮೊದಲ ಲ್ಯಾಂಡಿಂಗ್ ಪ್ರಯತ್ನವನ್ನು ಕೈಬಿಟ್ಟಿತು.
ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಪೈಲಟ್‌ಗಳು ಈ ನಿರ್ಧಾರ ಕೈಗೊಂಡಿದ್ದರು. ಸುಮಾರು 10 ನಿಮಿಷಗಳ ಬಳಿಕ, 3.55ಕ್ಕೆ 2ನೇ ಪ್ರಯತ್ನದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ಎರಡನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಲಖನೌವಲ್ಲಿ ಇಳಿದ ಏರ್ ಇಂಡಿಯಾ ವಿಮಾನ:
‘ಗೋ-ಅರೌಂಡ್’ ಎಂದರೇನು?
ಲ್ಯಾಂಡಿಂಗ್ ವೇಳೆ ಪರಿಸ್ಥಿತಿ ಸೂಕ್ತವಾಗಿಲ್ಲ ಎಂದು ಪೈಲಟ್‌ಗಳಿಗೆ ಅನಿಸಿದಾಗ, ವಿಮಾನವನ್ನು ಸುರಕ್ಷಿತ ಎತ್ತರಕ್ಕೆ ಏರಿಸಿ ಮತ್ತೊಮ್ಮೆ ಲ್ಯಾಂಡಿಂಗ್‌ಗೆ ಪ್ರಯತ್ನಿಸುವುದು ‘ಗೋ-ಅರೌಂಡ್’ ಎಂದು ಕರೆಯಲಾಗುತ್ತದೆ. ಪ್ರತಿಕೂಲ ಹವಾಮಾನ, ರನ್‌ವೇ ಪರಿಸ್ಥಿತಿ, ವಾಯು ಸಂಚಾರ ಅಥವಾ ಲ್ಯಾಂಡಿಂಗ್‌ಗೆ ಸೂಕ್ತವಲ್ಲದ ಅಪ್ರೋಚ್‌ನಂತಹ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ. ಲಖನೌನಲ್ಲಿ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ಇಳಿದಿದ್ದಾರೆ. ಘಟನೆ ಕುರಿತು ಏರ್ ಇಂಡಿಯಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ರಾಹುಲ್ ಗಾಂಧಿಯ ‘ಛಾತ್ರೋಂ ಕಿ ಗೂಂಜ್’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು
ಲಖನೌ ತಲುಪಿದ ಬಳಿಕ ರಾಹುಲ್ ಗಾಂಧಿ ರಾಯ್‌ಬರೇಲಿಗೆ ತೆರಳಿ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಎರಡು ದಿನಗಳ ಪ್ರವಾಸ ಆರಂಭಿಸಿದ್ದಾರೆ. ಈ ವೇಳೆ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗಿ, ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸ್ಥಳೀಯ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳೊಂದಿಗೂ ಸಂವಾದ ಕಾರ್ಯಕ್ರಮವಿದೆ.
ಇದಲ್ಲದೆ, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (DISHA) ಸಭೆಯ ಅಧ್ಯಕ್ಷತೆ ವಹಿಸುವುದು, ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿಯ ಅವಲೋಕನ ಮಾಡುವ ಸಾಧ್ಯತೆಯಿದೆ. ಸ್ಥಳೀಯ ನಿವಾಸಿಗಳು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿಯ ವೇಳೆ ಕ್ಷೇತ್ರದ ವಿವಿಧ ಸಮಸ್ಯೆಗಳ ಬಗ್ಗೆಯೂ ಅವರು ಚರ್ಚಿಸಲಿದ್ದಾರೆ.