ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಮ್ಮ ಸೇನೆಯ ಬತ್ತಳಿಕೆ ಸೇರಿದ ಹ್ಯಾಮರ್ ಕ್ಷಿಪಣಿ: ಭಾರತ-ಫ್ರಾನ್ಸ್ ರಕ್ಷಣಾ ಸಹಕಾರದ ಹೊಸ ಅಧ್ಯಾಯ

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಫೆಬ್ರವರಿ 16ರಂದು ಮುಂಬೈಗೆ ಆಗಮಿಸಿದ್ದಾರೆ. ಫೆಬ್ರವರಿ 17ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ವೇಳೆ, ರಫೇಲ್ ಯುದ್ಧ ವಿಮಾನಗಳಲ್ಲಿ ಬಳಸುವ ‘ಹ್ಯಾಮರ್’ ಕ್ಷಿಪಣಿಗಳ ಜಂಟಿ ಉತ್ಪಾದನೆಗೆ ಸಂಬಂಧಿಸಿದಂತೆ MoUಗೆ ಸಹಿ ಹಾಕುವ ಸಾಧ್ಯತೆ ಇದೆ. ಹ್ಯಾಮರ್ ಅತ್ಯಂತ ನಿಖರವಾಗಿ ಗುರಿ ತಲುಪಬಲ್ಲ ಸ್ಮಾರ್ಟ್ ಬಾಂಬ್.

ಹ್ಯಾಮರ್ ಕ್ಷಿಪಣಿ

ನವದೆಹಲಿ, ಫೆ. 16: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಫೆಬ್ರವರಿ 16 ರಂದು ಮುಂಬೈಗೆ ಆಗಮಿಸಲಿದ್ದಾರೆ. ಫೆಬ್ರವರಿ 17ರಂದು ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಲಿದ್ದು, ಈ ವೇಳೆ ರಫೇಲ್ ಯುದ್ಧ ವಿಮಾನಗಳಲ್ಲಿ ಬಳಸಲಾಗುವ ಹ್ಯಾಮರ್ (HAMMER) ಕ್ಷಿಪಣಿಗಳ ಜಂಟಿ ಉತ್ಪಾದನೆಗೆ ಸಂಬಂಧಿಸಿದಂತೆ ತಿಳುವಳಿಕೆ ಪತ್ರಕ್ಕೆ (MoU) ಸಹಿ ಹಾಕುವ ಸಾಧ್ಯತೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಏನಿದು ಹ್ಯಾಮರ್ ಕ್ಷಿಪಣಿ?

'ಹ್ಯಾಮರ್' ಎಂದರೆ Highly Agile Modular Munition Extended Range ಎಂದರ್ಥ. ಇದು ಅತ್ಯಂತ ನಿಖರವಾಗಿ ಗುರಿ ತಲುಪಬಲ್ಲ ಸ್ಮಾರ್ಟ್ ಬಾಂಬ್ ಆಗಿದ್ದು, ಪ್ರಸ್ತುತ ರಫೇಲ್ ಯುದ್ಧ ವಿಮಾನಗಳಲ್ಲಿ ಬಳಸಲಾಗುತ್ತಿದೆ. ಇಲ್ಲಿಯವರೆಗೆ ಭಾರತವು ಇವುಗಳನ್ನು ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇನ್ನು ಮುಂದೆ ಇವುಗಳನ್ನು ಭಾರತದಲ್ಲೇ ತಯಾರಿಸುವ ಪ್ರಕ್ರಿಯೆ ಆರಂಭವಾಗಲಿದೆ. 'ಹ್ಯಾಮರ್' ಎಂಬ ಹೆಸರು ಒಂದು ಸುತ್ತಿಗೆಯ ಹೊಡೆತವು ಮೇಲ್ಮೈಯನ್ನು ಸಮತಟ್ಟಾಗಿಸುವ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಅಂದರೆ ಇದು ಶತ್ರು ಪಾಳಯದ ಗುರಿಯನ್ನು ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

ತಾಂತ್ರಿಕ ಸಾಮರ್ಥ್ಯಗಳು ಮತ್ತು ವೈಶಿಷ್ಟ್ಯಗಳು

ದಾಳಿಯ ವ್ಯಾಪ್ತಿ: ಈ ಕ್ಷಿಪಣಿಯು ಸುಮಾರು 60ರಿಂದ 70 ಕಿಲೋ ಮೀಟರ್ ದೂರದವರೆಗೆ ನಿಖರ ದಾಳಿ ನಡೆಸಬಲ್ಲದು.

ಭೌಗೋಳಿಕ ಅನುಕೂಲ: ಪರ್ವತ ಪ್ರದೇಶಗಳಲ್ಲಿ ಮತ್ತು ಶತ್ರುಗಳ ಬಲಿಷ್ಠ ಬಂಕರ್‌ಗಳನ್ನು ಧ್ವಂಸಗೊಳಿಸಲು ಇದು ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ.

ಫೈರ್-ಆ್ಯಂಡ್-ಫಾರ್ಗೆಟ್: ಒಮ್ಮೆ ಗುರಿಯನ್ನು ಲಾಕ್ ಮಾಡಿ ಕ್ಷಿಪಣಿ ಹಾರಿಸಿದ ನಂತರ, ಅದಕ್ಕೆ ಯಾವುದೇ ಹೆಚ್ಚಿನ ಮಾರ್ಗದರ್ಶನದ ಅಗತ್ಯವಿರುವುದಿಲ್ಲ. ಇದು ಸ್ಥಿರ ಮತ್ತು ಚಲಿಸುವ ಎರಡೂ ರೀತಿಯ ಗುರಿಗಳನ್ನು ನಾಶಪಡಿಸಬಲ್ಲದು. ಅಲ್ಲದೇ ಈ ಕ್ಷಿಪಣಿಯು ಹಗಲು ಮತ್ತು ರಾತ್ರಿ ಸೇರಿದಂತೆ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ರಫೇಲ್ ವಿಮಾನವು ಏಕಕಾಲದಲ್ಲಿ ಆರು ಹ್ಯಾಮರ್ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲದು. ಅಂದರೆ ಒಂದೇ ಸಮಯದಲ್ಲಿ ಆರು ವಿಭಿನ್ನ ಗುರಿಗಳನ್ನು ಹೊಡೆದುರುಳಿಸಬಹುದು.

ಆಗ್ರಾ ವಾಯುಪಡೆ ನಿಲ್ದಾಣದೊಳಗೆ ಪಾಕಿಸ್ತಾನ ಬಲೂನ್ ಪತ್ತೆ

ಮೇಕ್ ಇನ್ಇಂಡಿಯಾ ಮತ್ತು ಕರ್ನಾಟಕದ ಪಾತ್ರ

ಈ ಕ್ಷಿಪಣಿಗಳನ್ನು ಭಾರತದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮತ್ತು ಫ್ರಾನ್ಸ್‌ನ ಸಫ್ರಾನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಡಿಫೆನ್ಸ್ ಸಂಸ್ಥೆಗಳು ಜಂಟಿಯಾಗಿ ಉತ್ಪಾದಿಸಲಿವೆ. ಇದು ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಲ್ಲದೆ, 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ದೊಡ್ಡ ಬಲ ನೀಡಲಿದೆ.

ಇದಲ್ಲದೆ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿ ಕರ್ನಾಟಕದ ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ಹೆಲಿಕಾಪ್ಟರ್ ಜೋಡಣಾ ಘಟಕವನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಉದ್ಘಾಟಿಸಲಿದ್ದಾರೆ. ಇದು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಏರ್‌ಬಸ್ ಸಂಸ್ಥೆಗಳ ಜಂಟಿ ಯೋಜನೆಯಾಗಿದ್ದು, ಇಲ್ಲಿ H-125 ಹೆಲಿಕಾಪ್ಟರ್‌ಗಳನ್ನು ತಯಾರಿಸಲಾಗುತ್ತದೆ. ಈ ಮೂಲಕ ಭಾರತದ ವಾಯುಪಡೆಯ ಬಲವು ಮತ್ತಷ್ಟು ವೃದ್ಧಿಯಾಗಲಿದೆ.