ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಂಟಾವೈರಸ್ ಸೋಂಕು ಅಪರೂಪ, ಭಾರತಕ್ಕೆ ಆತಂಕವಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ

ಐಷಾರಾಮಿ ಕ್ರೂಸ್ ಹಡಗಿನಲ್ಲಿ ಅಪಾಯಕಾರಿ ಹಂಟಾವೈರಸ್ ಪತ್ತೆಯಾದ ಬೆನ್ನಲ್ಲೇ ಭಾರತದಲ್ಲಿ ಈ ಸೋಂಕು ಹರಡುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಐಸಿಎಂಆರ್ ಮತ್ತು ಎನ್‌ಸಿಡಿಸಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ವೈರಸ್ ಸಾಮಾನ್ಯವಾಗಿ ದಂಶಕಗಳಿಂದ ಹರಡುತ್ತದೆ ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುವಿಕೆ ಅತ್ಯಂತ ಅಪರೂಪ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಮೇ 8: ಐಷಾರಾಮಿ ಕ್ರೂಸ್ ಹಡಗೊಂದರಲ್ಲಿ ಕಾಣಿಸಿಕೊಂಡಿರುವ ಹಂಟಾವೈರಸ್ (Hantavirus) ಹರಡುವಿಕೆಯ ಬಗ್ಗೆ ಭಾರತದ ಉನ್ನತ ಆರೋಗ್ಯ ಸಂಸ್ಥೆಗಳಾದ ಐಸಿಎಂಆರ್ (Indian Council of Medical Research) ಮತ್ತು ಎನ್‌ಸಿಡಿಸಿ (National Centre for Disease Control) ತೀವ್ರ ನಿಗಾ ವಹಿಸಿವೆ. ಹಡಗಿನ ಸಿಬ್ಬಂದಿಯಲ್ಲಿ ಇಬ್ಬರು ಭಾರತೀಯರಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಆತಂಕ ಮೂಡಿದೆ. ಭಾರತದಲ್ಲಿ ಈ ವೈರಸ್ ಹರಡುವ ಸಾಧ್ಯತೆ ತೀರಾ ಕಡಿಮೆ ಎಂದು ಇದೀಗ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ.

"ಭಾರತವು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಕಾಯಿಲೆಯು ಇನ್ಫ್ಲುಯೆನ್ಸದಂತೆ ವೇಗವಾಗಿ ಹರಡುವುದಿಲ್ಲ. ಆದರೂ ನಮ್ಮ ಏಜೆನ್ಸಿಗಳು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿವೆ" ಎಂದು ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಡಗಿನಲ್ಲಿರುವ ಇಬ್ಬರು ಭಾರತೀಯರು ಸದ್ಯಕ್ಕೆ ಯಾವುದೇ ಲಕ್ಷಣಗಳನ್ನು ಹೊಂದಿಲ್ಲ ಮತ್ತು ಅಂತಾರಾಷ್ಟ್ರೀಯ ಆರೋಗ್ಯ ಶಿಷ್ಟಾಚಾರದ ಅಡಿಯಲ್ಲಿ ಅವರು ವೀಕ್ಷಣೆಯಲ್ಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವೈರಸ್ ಹರಡುವಿಕೆ ಮತ್ತು ಡಬ್ಲ್ಯುಎಚ್ಒ ನಿಲುವು

ವಿಶ್ವ ಆರೋಗ್ಯ ಸಂಸ್ಥೆಯು ಈ ಕುರಿತು ಶುಕ್ರವಾರ ಹೇಳಿಕೆ ನೀಡಿದ್ದು, ಈ ವೈರಸ್ ಕೇವಲ ʼಅತ್ಯಂತ ನಿಕಟ ಸಂಪರ್ಕʼದಿಂದ ಮಾತ್ರ ಹರಡುವುದರಿಂದ ಸಾರ್ವಜನಿಕರಿಗೆ ಇರುವ ಅಪಾಯ ತೀರಾ ಕಡಿಮೆ ಎಂದು ಸ್ಪಷ್ಟಪಡಿಸಿದೆ. ಈ ವೈರಸ್ ಸೋಂಕಿತ ವ್ಯಕ್ತಿಗೆ ಅಪಾಯಕಾರಿಯಾಗಿದ್ದರೂ, ಸಾಮಾನ್ಯ ಜನರಿಗೆ ಹರಡುವ ಸಾಧ್ಯತೆ ಅತ್ಯಲ್ಪ ಎಂದು ಜಿನೀವಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.

ಪಾರ್ಕಿನ್ಸನ್ಸ್ ರೋಗದ ಕುರಿತು ಅರಿವು: ರೋಗಲಕ್ಷಣಗಳನ್ನು ಮೊದಲೇ ಕಂಡುಕೊಳ್ಳಲು ಮತ್ತು ಜೀವನ ಬದಲಾಯಿಸುವ ಚಿಕಿತ್ಸೆಗಳನ್ನು ಪಡೆಯಲು ತಜ್ಞರ ಕರೆ

ಭಾರತದಲ್ಲಿ ಹಂಟಾವೈರಸ್ ಇತಿಹಾಸ

ಭಾರತದಲ್ಲಿ ಹಂಟಾವೈರಸ್ ಪ್ರಕರಣಗಳು ಅತ್ಯಂತ ಅಪರೂಪ. 1964ರಲ್ಲಿ ತಮಿಳುನಾಡಿನ ವೆಲ್ಲೂರು ಸಿಎಂಸಿಯಲ್ಲಿ ಮೊದಲ ಬಾರಿಗೆ 'ತೊಟ್ಟಪಾಳಯಂ' ಎಂಬ ಸ್ಥಳೀಯ ವೈರಸ್ ಪ್ರಬೇಧವನ್ನು ಗುರುತಿಸಲಾಗಿತ್ತು. ಅಂದಿನಿಂದ ಇದುವರೆಗೆ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಬೆರಳೆಣಿಕೆಯಷ್ಟು ಮಾನವರಲ್ಲಿ ಈ ಸೋಂಕು ಪತ್ತೆಯಾಗಿದೆ. 2008ರಲ್ಲಿ ವೆಲ್ಲೂರಿನಲ್ಲಿ 28 ಇಲಿ ಮತ್ತು ಹಾವು ಹಿಡಿಯುವವರಲ್ಲಿ ಈ ಸೋಂಕು ಕಂಡುಬಂದಿತ್ತು. ಮುಖ್ಯವಾಗಿ, ಭಾರತದಲ್ಲಿ ಇದುವರೆಗೆ ಒಬ್ಬ ಮನುಷ್ಯನಿಂದ ಇನ್ನೊಬ್ಬನಿಗೆ ಈ ವೈರಸ್ ಹರಡಿದ ಯಾವುದೇ ದಾಖಲೆಗಳಿಲ್ಲ.

ರೋಗದ ಲಕ್ಷಣಗಳು ಮತ್ತು ಹರಡುವ ವಿಧಾನ

ಹಂಟಾವೈರಸ್‌ಗಳು ಪ್ರಾಣಿಗಳಿಂದ ಹರಡುವ ವೈರಸ್‌ಗಳಾಗಿದ್ದು, ಸೋಂಕಿತ ದಂಶಕಗಳ (ಇಲಿಗಳು) ಮೂತ್ರ, ಮಲ ಮತ್ತು ಲಾಲಾರಸದಿಂದ ಕಲುಷಿತಗೊಂಡ ಗಾಳಿಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಇದು ಯುರೋಪ್ ಮತ್ತು ಏಷ್ಯಾದಲ್ಲಿ ಮೂತ್ರಪಿಂಡದ ವೈಫಲ್ಯದೊಂದಿಗೆ ರಕ್ತಸ್ರಾವದ ಜ್ವರವನ್ನು ಇದು ಉಂಟು ಮಾಡಬಹುದು. ಮನುಷ್ಯರಿಂದ ಮನುಷ್ಯರಿಗೆ ಈ ಸೋಂಕು ಹರಡುವುದು ಅತ್ಯಂತ ಅಪರೂಪದ ವಿದ್ಯಮಾನ. ಭಾರತದಲ್ಲಿ ರೋಗನಿರ್ಣಯದ ಸೌಲಭ್ಯಗಳ ಕೊರತೆಯಿಂದ ಕೆಲವು ಪ್ರಕರಣಗಳು ಪತ್ತೆಯಾಗದೆ ಇರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದರೂ, ದೇಶದಲ್ಲಿ ಸದ್ಯಕ್ಕೆ ಯಾವುದೇ ಆತಂಕದ ವಾತಾವರಣವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.