ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತರಬೇತಿ ವೇಳೆ ಮುಳುಗಿದ ದೋಣಿ; ಇಬ್ಬರು ಸೈನಿಕರ ಮೃತದೇಹ 2 ದಿನಗಳ ಬಳಿಕ ನೂರಾರು ಕಿಲೋ ಮೀಟರ್‌ ದೂರದಲ್ಲಿ ಪತ್ತೆ

Hathnikund Barrage Tragedy: ಹರಿಯಾಣದ ಹಥ್ನಿಕುಂಡ್ ಬ್ಯಾರೇಜ್‌ನಲ್ಲಿ ತರಬೇತಿ ವೇಳೆ ದೋಣಿ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಮೊದಲ ಸೈನಿಕನ ಮೃತದೇಹ ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಹಾಗೂ ಎರಡನೇ ಸೈನಿಕನ ಮೃತದೇಹ ಸುಮಾರು 200 ಕಿ.ಮೀ. ದೂರದ ಜಿಂದ್ ಬಳಿ ಪತ್ತೆಯಾಗಿದೆ. ಇಬ್ಬರ ಗುರುತನ್ನು ಸೇನೆ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

ಹರಿಯಾಣದಲ್ಲಿ ಸೇನಾ ತರಬೇತಿ ವೇಳೆ ಮುಳುಗಿದ ದೋಣಿ

ಚಂಡೀಗಢ, ಸೆ. 3: ಹರಿಯಾಣದ ಯಮುನಾನಗರ ಜಿಲ್ಲೆಯ ಹಥ್ನಿಕುಂಡ್ ಬ್ಯಾರೇಜ್‌ನಲ್ಲಿ (Hathnikund Barrage) ಸೆಪ್ಟೆಂಬರ್‌ರ 1ಂದು ತರಬೇತಿ ಕಾರ್ಯಾಚರಣೆ ವೇಳೆ ದೋಣಿ ಮುಳುಗಿ ನಾಪತ್ತೆಯಾಗಿದ್ದ ಇಬ್ಬರು ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಘಟನೆಯ ಎರಡು ದಿನಗಳ ಬಳಿಕ ಮೊದಲ ಸೈನಿಕನ ಮೃತದೇಹ ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಹಾಗೂ ಎರಡನೇ ಸೈನಿಕನ ಮೃತದೇಹ ಸುಮಾರು 200 ಕಿ.ಮೀ. ದೂರದ ಜಿಂದ್ ಬಳಿ ಪತ್ತೆಯಾಗಿದೆ.

ಜಿಂದ್‌ನಲ್ಲಿ ವಾಸಿಸುವ ನಿವೃತ್ತ ಕ್ಯಾಪ್ಟನ್ ಹಾಗೂ 1 ಪ್ಯಾರಾ ಸ್ಪೆಷಲ್ ಫೋರ್ಸಸ್‌ನ ಮಾಜಿ ಅಧಿಕಾರಿ ರಮೇಶ್ ಕುಮಾರ್ ಅವರ ಪ್ರಕಾರ, ಸ್ಥಳೀಯ ಸಬ್‌ಜಿ ಮಂಡಿ ಹಿಂಭಾಗದ ಪ್ರದೇಶದಲ್ಲಿ ಎರಡನೇ ಮೃತದೇಹವನ್ನು ಡೈವರ್‌ಗಳು ಹಾಗೂ ಸ್ಥಳೀಯ ನಿವಾಸಿಗಳು ಪತ್ತೆಹಚ್ಚಿದ್ದಾರೆ. ಮೃತ ಸೈನಿಕನನ್ನು ಮಹಾರಾಷ್ಟ್ರ ಮೂಲದ ಆರ್ಯನ್ ಪಾಟೀಲ್ ಎಂದು ಗುರುತಿಸಲಾಗಿದೆ. ಅವರು ಹಥ್ನಿಕುಂಡ್ ಬ್ಯಾರೇಜ್‌ನಲ್ಲಿ ನಡೆಯುತ್ತಿದ್ದ ವಿಶೇಷ ಪಡೆಗಳ ತರಬೇತಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

ಹರಿಯಾಣದಲ್ಲಿ ನಾಪತ್ತೆಯಾದ ಸೂನಿಕರಿಗಾಗಿ ಶೋಧ ಕಾರ್ಯಾಚರಣೆ:



ಇದಕ್ಕೂ ಮೊದಲು ಮೊದಲ ನಾಪತ್ತೆಯಾಗಿದ್ದ ಸೈನಿಕನ ಮೃತದೇಹವು ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯ ಬರ್ತಾ ಗ್ರಾಮದ ಬಳಿ ಯಮುನಾ ನದಿ ತೀರದಲ್ಲಿ ಪತ್ತೆಯಾಗಿತ್ತು. ಬ್ಯಾರೇಜ್‌ನಿಂದ ಸುಮಾರು 14 ಕಿ.ಮೀ. ಕೆಳಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತರನ್ನು ಜಮ್ಮು-ಕಾಶ್ಮೀರದ ಅಖ್ನೂರ್ ನಿವಾಸಿ ಅಜಯ್ ಕುಮಾರ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಭಾರತೀಯ ಸೇನೆ ಇದುವರೆಗೆ ಮೃತದೇಹಗಳ ಪತ್ತೆ ಅಥವಾ ಸೈನಿಕರ ಗುರುತನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ (PRO)ಯ ಅಧಿಕೃತ ಹೇಳಿಕೆ ಇನ್ನೂ ನಿರೀಕ್ಷಿಸಲಾಗಿದೆ.

ಘಟನೆ ಹೇಗಾಯಿತು?

ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಐವರು ಸೇನಾ ಸಿಬ್ಬಂದಿಯನ್ನು ಹೊತ್ತಿದ್ದ ದೋಣಿ ಬ್ಯಾರೇಜ್‌ನ ಗೇಟ್‌ಗಳ ಸಮೀಪ ಕೆಳಭಾಗಕ್ಕೆ ಸಾಗುತ್ತಿದ್ದಾಗ ಪ್ರಬಲ ನೀರಿನ ಸೆಳೆತಕ್ಕೆ ಸಿಲುಕಿ ಮಗುಚಿತು. ಮೂವರು ಸೈನಿಕರು ಈಜಿ ಸುರಕ್ಷಿತವಾಗಿ ದಡ ಸೇರಲು ಯಶಸ್ವಿಯಾದರೆ, ಉಳಿದ ಇಬ್ಬರು ಭಾರೀ ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು.

ಬಹು-ಸಂಸ್ಥೆಗಳ ರಕ್ಷಣಾ ಕಾರ್ಯಾಚರಣೆ

ಘಟನೆಯ ಬಳಿಕ ಸೇನೆ, ಭಾರತೀಯ ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಹರಿಯಾಣ ಮತ್ತು ಉತ್ತರ ಪ್ರದೇಶದ SDRF ತಂಡಗಳು, ಸ್ಥಳೀಯ ಪೊಲೀಸರು ಹಾಗೂ ನಾಗರಿಕ ಆಡಳಿತದ ಸಹಯೋಗದಲ್ಲಿ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬ್ಯಾರೇಜ್ ಹಾಗೂ ಅದರ ಸಮೀಪದ ವೆಸ್ಟರ್ನ್ ಯಮುನಾ ಕಾಲುವೆ (WJC) ಮತ್ತು ಈಸ್ಟರ್ನ್ ಜಮುನಾ ಕಾಲುವೆ (EJC) ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ಗಳು ಹಾಗೂ ಡ್ರೋನ್‌ಗಳ ಮೂಲಕ ವೈಮಾನಿಕ ಶೋಧ ನಡೆಸಲಾಯಿತು.

ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಬ್ಯಾರೇಜ್ ಮತ್ತು WJCಯಲ್ಲಿ ನೀರಿನ ಹರಿವನ್ನು ಕಡಿಮೆ ಮಾಡುವಂತೆ ಸೇನೆಯ ಮನವಿಯ ಮೇರೆಗೆ ಹರಿಯಾಣ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ ಕ್ರಮ ಕೈಗೊಂಡಿತ್ತು.