ನವದೆಹಲಿ, ನ. 13: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (PM Modi) ಅವರ ವಿರುದ್ಧ ಅತ್ಯಂತ ಗಂಭೀರ ಆರೋಪವೊಂದನ್ನು ಮಾಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಇನ್ಸ್ಟಾಗ್ರಾಮ್ ಸಂವಾದವೊಂದರಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ತಮ್ಮ ಫೋನ್ ಅನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕದ್ದಾಲಿಕೆ (Phone Tapping) ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಆರೋಪಗಳಿಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರ ಫೋನ್ನಲ್ಲಿಯೇ ಇದೆ ಎಂದು ಹೇಳಿರುವ ಅವರು, ಪ್ರಧಾನಿ ಮೋದಿ ಅವರಿಗೆ ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚೆಗೆ ಬರುವಂತೆ ಬಹಿರಂಗ ಸವಾಲು ಹಾಕಿದ್ದಾರೆ.
ಇನ್ಸ್ಟಾಗ್ರಾಮ್ ಸಂವಾದದ ವೇಳೆ ಮಾತನಾಡಿದ ರಾಹುಲ್ ಗಾಂಧಿ, "ನಾನು ಮಾಡಿರುವ ಎಲ್ಲ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ನನ್ನ ಫೋನ್ನಲ್ಲಿವೆ. ಪ್ರಧಾನಿ ಮೋದಿ ನನ್ನ ಫೋನ್ ಅನ್ನು ಟ್ಯಾಪ್ ಮಾಡುತ್ತಿದ್ದಾರೆ" ಎಂದು ದೂರಿದ್ದಾರೆ. ತಮ್ಮ ಫೋನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಮೇರೆಗೆ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ನೇರವಾಗಿ ಆರೋಪಿಸಿದ್ದಾರೆ. ಈ ಮೂಲಕ ವಿರೋಧ ಪಕ್ಷದ ನಾಯಕರ ಖಾಸಗಿತನ ಮತ್ತು ಸಂವಹನದ ಮೇಲೆ ಕೇಂದ್ರ ಸರ್ಕಾರ ನಿಗಾ ಇರಿಸಿದೆ ಎಂದು ಅವರು ದೂರಿದ್ದಾರೆ.
ವಿಡಿಯೊ ನೋಡಿ:
ಮುಖಾಮುಖಿ ಚರ್ಚೆಗೆ ಸವಾಲು
ಪ್ರಧಾನಿ ಮೋದಿ ಅವರಿಗೆ ಬಹಿರಂಗ ಚರ್ಚೆಯ ಸವಾಲನ್ನು ಹಾಕಿರುವ ರಾಹುಲ್ ಗಾಂಧಿ, "ನನ್ನೊಂದಿಗೆ ಒಂದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚೆಗೆ ಬನ್ನಿ. ಯಾರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸತ್ಯ ಆ ಚರ್ಚೆಯಲ್ಲಿ ಬಯಲಾಗಲಿದೆ" ಎಂದು ಸವಾಲು ಎಸೆದಿದ್ದಾರೆ. ಈ ಚರ್ಚೆಯ ಮೂಲಕ ಸರ್ಕಾರದ ನೀತಿಗಳು, ಆರ್ಥಿಕ ನಿರ್ಧಾರಗಳು ಮತ್ತು ಆಡಳಿತವು ಯಾರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಎಂಬ ಸತ್ಯ ದೇಶದ ಜನರ ಮುಂದೆ ಸ್ಪಷ್ಟವಾಗಿ ಬಯಲಾಗಲಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಶುಕ್ರವಾರದ ಇನ್ಸ್ಟಾಗ್ರಾಮ್ ಸಂವಾದದಲ್ಲೂ ಇದೇ ವಿಚಾರವನ್ನು ಪುನರುಚ್ಚರಿಸಿದ ರಾಹುಲ್, ಸಂಸತ್ತಿನಲ್ಲಿ ತಮಗೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲು ಪ್ರಯತ್ನಿಸಿದಾಗ ಮೈಕ್ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ದೀರ್ಘ ಭಾಷಣಗಳ ಬದಲು ಪ್ರಧಾನಿ ಮತ್ತು ತಾವು ನೇರವಾಗಿ ಪ್ರಶ್ನೆ ಕೇಳುವ, ಉತ್ತರಿಸುವ ರೀತಿಯ ಚರ್ಚೆ ಬಯಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಚರ್ಚೆಗೆ ಉದ್ಯಮಿ ಗೌತಮ್ ಅದಾನಿ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನಿರ್ಣಾಯಕರಾಗಿ ನೇಮಿಸಿದರೂ ತಮ್ಮ ಅಭ್ಯಂತರವಿಲ್ಲ, ಚರ್ಚೆ ನಡೆದರೆ ಅವರು ಪ್ರಧಾನಿಯಾಗಿ ಉಳಿಯುವುದಿಲ್ಲ ಎಂಬ ವಿಶ್ವಾಸವಿದೆ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ನೀಡಿದ ಕೂಲ್ ಡಿಂಕ್ಸ್ ನಿರಾಕರಿಸಿದ ಪ್ರಿಯಾಂಕಾ ಗಾಂಧಿ
ಈ ಹಿಂದೆಯೂ ಪೆಗಾಸಸ್ ಆರೋಪ ಮಾಡಿದ್ದ ರಾಹುಲ್
2023ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುವಾಗ ರಾಹುಲ್ ಗಾಂಧಿ ತಮ್ಮ ಫೋನ್ನಲ್ಲಿ ಇಸ್ರೇಲ್ನ ಎನ್ಎಸ್ಒ ಕಂಪನಿ ಅಭಿವೃದ್ಧಿಪಡಿಸಿದ ಪೆಗಾಸಸ್ ಸ್ಪೈವೇರ್ ಇತ್ತು ಎಂದು ಆರೋಪಿಸಿದ್ದರು. ಹಲವು ರಾಜಕಾರಣಿಗಳ ಫೋನ್ಗಳ ಮೇಲೂ ನಿಗಾ ಇಡಲಾಗಿದೆ ಮತ್ತು ಫೋನ್ನಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಇರುವಂತೆ ಗುಪ್ತಚರ ಅಧಿಕಾರಿಗಳು ಸೂಚಿಸಿದ್ದರು ಎಂದು ಹೇಳಿದ್ದರು. ಆದರೆ ಕೇಂದ್ರ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿತ್ತು. ಈ ಹಿಂದೆ ಕೂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಯ ಸವಾಲು ಹಾಕಿದ್ದರು. ಆದರೆ, ಬಿಜೆಪಿ ನಾಯಕರು ಸಂಸತ್ತೇ ಚರ್ಚೆಗೆ ಸೂಕ್ತ ವೇದಿಕೆ ಎಂದು ಹೇಳಿ ಈ ಸವಾಲನ್ನು ತಿರಸ್ಕರಿಸಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದರು.