ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ (Suvendu Adhikari) ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಾರಂಭವು ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ವೇದಿಕೆಯ ಮೇಲಿದ್ದ ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನ್ ಲಾಲ್ ಸರ್ಕಾರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗೌರವ ಸಲ್ಲಿಸಿದರು. 98 ವರ್ಷದ ಬಿಜೆಪಿ ಕಾರ್ಯಕರ್ತ ಮಖನ್ ಲಾಲ್ ಸರ್ಕಾರ್ ಅವರ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ, ನಂತರ ಅವರನ್ನು ಆಲಂಗಿಸಿದರು. ಈ ವೇಳೆ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳು ಜೋರಾಗಿ ಹರ್ಷೋದ್ಗಾರಗಳನ್ನು ಮೊಳಗಿಸಿದರು.
ಮಖನ್ ಲಾಲ್ ಸರ್ಕಾರ್ ಯಾರು?
98 ವರ್ಷ ವಯಸ್ಸಿನ ಸರ್ಕಾರ್ ಸ್ವಾತಂತ್ರ್ಯೋತ್ತರ ಭಾರತದ ರಾಷ್ಟ್ರೀಯ ಚಳವಳಿಯ ಆರಂಭಿಕ ಹಂತದ ಪ್ರಮುಖ ತಳಮಟ್ಟದ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 1952ರಲ್ಲಿ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಚಳವಳಿಯ ಸಂದರ್ಭದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜತೆಗಿದ್ದ ಇವರನ್ನು ಬಂಧಿಸಲಾಗಿತ್ತು.
1980ರಲ್ಲಿ ಬಿಜೆಪಿ ರಚನೆಯಾದ ನಂತರ ಸರ್ಕಾರ್ ಪಶ್ಚಿಮ ಬಂಗಾಳದ ಪಶ್ಚಿಮ ದಿನಾಜ್‌ಪುರ, ಜಲ್ಪೈಗುರಿ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳಿಗೆ ಸಂಘಟನಾ ಸಂಯೋಜಕರಾಗಿದ್ದರು. ಒಂದು ವರ್ಷದೊಳಗೆ ಅವರು ಸುಮಾರು 10,000 ಸದಸ್ಯರು ಬಿಜೆಪಿಗೆ ಸೇರುವಂತೆ ಮಾಡಿದ್ದರು. 1981ರಿಂದ ಅವರು ಜಿಲ್ಲಾಧ್ಯಕ್ಷರಾಗಿ ಏಳು ವರ್ಷ ನಿರಂತರವಾಗಿ ಸೇವೆ ಸಲ್ಲಿಸಿದರು.
ಇಲ್ಲಿದೆ ವಿಡಿಯೊ:
ಅಂದಹಾಗೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೊನೆಯ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ, ಇನ್ನು ತಾನು ಬರುವುದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಂದಿದ್ದರು. ಹೀಗಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾಗವಹಿಸಲು ಪ್ರಧಾನಿ ಮೋದಿ ಬ್ರಿಗೇಡ್ ಪೆರೇಡ್ ಮೈದಾನಕ್ಕೆ ಆಗಮಿಸಿದರು.
ಬಂಗಾಳದಲ್ಲಿನ್ನು ಸುವೇಂದು "ಅಧಿಕಾರ"; ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಮೋದಿ
ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮತ್ತು ನಿಯೋಜಿತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ವಿಶಾಲವಾದ ಸಮಾವೇಶದ ಮೈದಾನದಾದ್ಯಂತ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು.
ಪ್ರಮಾಣ ವಚನ ಸಮಾರಂಭಕ್ಕಾಗಿ ಮುಂಜಾನೆಯಿಂದಲೇ ನೆರೆದಿದ್ದ ಸಾವಿರಾರು ಬೆಂಬಲಿಗರತ್ತ ಪ್ರಧಾನಿ ತೆರೆದ ವಾಹನದಲ್ಲಿ ಮೈದಾನಕ್ಕೆ ಪ್ರವೇಶಿಸಿದರು. ಬೆಳಗ್ಗೆ 10 ಗಂಟೆಗೆ ಸುಮಾರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು, ನಂತರ ಹೆಲಿಕಾಪ್ಟರ್ ಮೂಲಕ ರೇಸ್ ಕೋರ್ಸ್ ಮೈದಾನಕ್ಕೆ ತಲುಪಿ ರಸ್ತೆ ಮಾರ್ಗದ ಮೂಲಕ ಸಮಾರಂಭದ ಸ್ಥಳಕ್ಕೆ ತೆರಳಿದರು.
ಸಮಾರಂಭಕ್ಕೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಬಿಜೆಪಿ ಕಾರ್ಯಕರ್ತರು ನೆರೆದಿದ್ದರಿಂದ ಬ್ರಿಗೇಡ್ ಪೆರೇಡ್ ಮೈದಾನವು ಕೇಸರಿಯಾಗಿ ಮಾರ್ಪಟ್ಟಿತು. ಕೋಲ್ಕತ್ತಾದ ಬೀದಿ-ಬೀದಿಗಳಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಪ್ರಧಾನಿ ಹಾಗೂ ಸುವೇಂದು ಅಧಿಕಾರಿ ಪರ ಜೈಕಾರ ಕೂಗಿ, ಹರ್ಷೋದ್ಗಾರ ಮಾಡಿದರು. ಸಮಾರಂಭದಲ್ಲಿ ಎನ್‌ಡಿಎ ಆಡಳಿತದ ರಾಜ್ಯಗಳ ಹಲವು ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗಳಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿತು. ಈ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು.