ನವದೆಹಲಿ, ಮಾ. 14: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ (Middle East conflict) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್‌ಪಿಜಿ (LPG) ಪೂರೈಕೆ ಇನ್ನೂ ಕಳವಳಕಾರಿ ವಿಷಯವಾಗಿ ಮುಂದುವರಿದಿದೆ. ಆದರೆ ಯಾವುದೇ ವಿತರಣಾ ಕೇಂದ್ರದಲ್ಲೂ ಸಂಪೂರ್ಣ ಕೊರತೆ ಉಂಟಾಗಿಲ್ಲ ಎಂದು ಕೇಂದ್ರ ಸರ್ಕಾರ ಶನಿವಾರ (ಮಾ. 14) ಸ್ಪಷ್ಟಪಡಿಸಿದೆ. ಜನರು ಆತಂಕದಿಂದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬುಕ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕೇಂದ್ರ ತಿಳಿಸಿದೆ.
ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಎಲ್‌ಪಿಜಿ ಖರೀದಿದಾರ ರಾಷ್ಟ್ರವಾಗಿದ್ದು, ಸುಮಾರು ಶೇಕಡಾ 90ರಷ್ಟು ಇರಾನ್‌ನ ಹೊರ್ಮುಜ್ ಜಲಸಂಧಿ (Strait of Hormuz) ಮೂಲಕ ಬರುತ್ತದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದ ಈ ಪ್ರಮುಖ ಸಾಗಣೆ ಮಾರ್ಗದಲ್ಲಿ ಸಂಚಾರವು ಬಹುತೇಕ ಸ್ಥಗಿತಗೊಂಡಿದೆ. ಆದರೂ ಕಚ್ಚಾ ತೈಲ ಪೂರೈಕೆ ಸಮರ್ಪಕವಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಲಭ್ಯವಿದೆ ಎಂದು ಕೇಂದ್ರವು ಒತ್ತಿ ಹೇಳಿದೆ.
ಜನರು ಅಗತ್ಯವಿಲ್ಲದೆ ಆತಂಕದಿಂದ ಎಲ್‌ಪಿಜಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಅಗತ್ಯವಿದ್ದರೆ ಮಾತ್ರ ಬುಕ್ ಮಾಡಿ ಎಂದು ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈವರೆಗೆ ದೇಶದಲ್ಲಿ ಸುಮಾರು 88 ಲಕ್ಷ ಪ್ಯಾನಿಕ್ ಬುಕ್ಕಿಂಗ್‌ಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.
ಇರಾನ್ ಸಂಘರ್ಷದಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಮಸ್ಯೆ ಕಾಡದೇ ಇದ್ದರೂ ಎಲ್‌ಪಿಜಿಗೆ ಕೊರತೆಯಾಗಿರುವುದೇಕೆ?
ವಾಣಿಜ್ಯ ಗ್ರಾಹಕರಿಗೆ ಸಿಲಿಂಡರ್‌ಗಳ ಪೂರೈಕೆಯ ಕುರಿತ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಎಲ್ಲ ರಾಜ್ಯಗಳಲ್ಲೂ ಈಗಾಗಲೇ ಕಾಮರ್ಷಿಯಲ್ ಸಿಲಿಂಡರ್ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಇದೇ ವೇಳೆ ಸಿಲಿಂಡರ್ ಕಾಳಸಂತೆಯನ್ನು ತಡೆಗಟ್ಟಲು ನಿರಂತರವಾಗಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ತಿಳಿಸಿದ್ದು, ಇದರಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಅತ್ಯಂತ ಪ್ರಮುಖ ಎಂದು ಒತ್ತಿ ಹೇಳಿದೆ.
ಮಾರ್ಚ್ 13ರಂದು, ತೈಲ ಮಾರುಕಟ್ಟೆ ಕಂಪನಿಗಳು 1,300ಕ್ಕೂ ಹೆಚ್ಚು ಅನಿರೀಕ್ಷಿತ ತಪಾಸಣೆಗಳನ್ನು ನಡೆಸಿದವು. ಉತ್ತರ ಪ್ರದೇಶದಲ್ಲಿ, 1,400 ಸ್ಥಳಗಳಲ್ಲಿ ಅನಿರೀಕ್ಷಿತ ತಪಾಸಣೆಗಳನ್ನು ನಡೆಸಲಾಯಿತು ಎಂದು ಅಧಿಕಾರಿ ಹೇಳಿದರು.
ಗಲ್ಫ್ ದೇಶಗಳಿಂದ ಎಲ್‌ಪಿಜಿ ಸಾಗಿಸುತ್ತಿದ್ದ ಎರಡು ಭಾರತೀಯ ಧ್ವಜ ಹೊಂದಿರುವ ಹಡಗುಗಳು ಶನಿವಾರ (ಮಾ. 14) ಮುಂಜಾನೆ ಯುದ್ಧ ಪೀಡಿತ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿವಾಲಿಕ್ ಮತ್ತು ನಂದಾ ದೇವಿ ಎಂಬ ಎಲ್‌ಪಿಜಿ ಸಾಗಣೆಯ ಹಡಗುಗಳು ಈಗ ಗುಜರಾತಿನ ಮುಂದ್ರಾ ಮತ್ತು ಕಂಡ್ಲಾ ಬಂದರಿನತ್ತ ಸಾಗುತ್ತಿವೆ ಎಂದು ನೌಕಾಯಾನ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಈ ಹಡಗುಗಳಲ್ಲಿ ಒಟ್ಟು 92,700 ಟನ್ ಎಲ್‌ಪಿಜಿ ಇದ್ದು, ಅವು ಮಾರ್ಚ್ 16 ಅಥವಾ 17ರಂದು ಭಾರತದ ಬಂದರುಗಳಿಗೆ ತಲುಪುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿ ದಾಟಿ ಭಾರತದತ್ತ ಹೊರಟ 40,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ನಂತರ ಹೊರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಸಿಲುಕಿದ್ದ 24 ಹಡಗುಗಳ ಪೈಕಿ ಈ ಎರಡು ಹಡಗುಗಳು ಕೂಡ ಇದ್ದವು. ಇದಕ್ಕೂ ಮುನ್ನ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ದೇಶದಾದ್ಯಂತ ಗೃಹ ಬಳಕೆಯ ಎಲ್‌ಪಿಜಿ ಪೂರೈಕೆ ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಯುತ್ತಿದೆ ಎಂದು ತಿಳಿಸಿತ್ತು. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಕೂಡ ನಿರಂತರ ಪೂರೈಕೆ ನಡೆಯುತ್ತಿದೆ ಎಂದು ಹೇಳಿತ್ತು.
ಇರಾನ್ ಸಂಘರ್ಷ ಮತ್ತು ನಂತರದ ಹೊರ್ಮುಜ್ ಜಲಸಂಧಿ ಮುಚ್ಚುವಿಕೆಯಿಂದ ಉಂಟಾದ ಪ್ರಮುಖ ಜಾಗತಿಕ ಅಡೆತಡೆಗಳ ಹೊರತಾಗಿಯೂ ಭಾರತದ ಇಂಧನ ಸರಬರಾಜು ಸುರಕ್ಷಿತವಾಗಿದೆ ಎಂದು ಗುರುವಾರ (ಮಾ. 12), ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಂಸತ್ತಿಗೆ ಭರವಸೆ ನೀಡಿದರು.