ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heavy Rain: ಭಾರಿ ಮಳೆಗೆ ತತ್ತರಿಸಿದ ಬಿಹಾರ; ತೀವ್ರ ಪ್ರವಾಹ, ಅಲ್ಲಲ್ಲಿ ರಸ್ತೆ ಕುಸಿತ, ಆಸ್ಪತ್ರೆಗಳು ಜಲಾವೃತ

ಬಿಹಾರದಾದ್ಯಂತ ಭಾರಿ ಮಳೆಯಾಗಿದ್ದು, ಅಪಾರ ಹಾನಿಯಾಗಿದೆ. ಅಲ್ಲಲ್ಲಿ ರಸ್ತೆಗಳು ಕುಸಿದಿದ್ದು, ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರೋಹ್ತಾಸ್, ಮೋತಿಹಾರಿ, ಸಸಾರಾಮ್ ಮತ್ತು ಗೋಪಾಲ್‌ಗಂಜ್‌ಗಳಲ್ಲಿ ಆಸ್ಪತ್ರೆಗಳು ಜಲಾವೃತಗೊಂಡಿವೆ. ಹಲವೆಡೆ ರಸ್ತೆಗಳು ಸಂಪರ್ಕ ಕಡಿದುಕೊಂಡಿದ್ದು, ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಬಿಹಾರದಲ್ಲಿ ಭಾರಿ ಮಳೆ

-

ಪಾಟ್ನಾ: ಸುಮಾರು 24 ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ (Heavy Rain) ಬಿಹಾರದ (Bihar) ಹಲವು ಪ್ರದೇಶಗಳಲ್ಲಿ ಅಪಾರ ಹಾನಿಯಾಗಿವೆ. ಅಲ್ಲಲ್ಲಿ ರಸ್ತೆಗಳು ಕುಸಿದಿದ್ದು, ತೀವ್ರ ಪ್ರವಾಹ (Bihar flood) ಪರಿಸ್ಥಿತಿ ಉಂಟಾಗಿದೆ. ಆಸ್ಪತ್ರಗಳು, ಮನೆಗಳು ಜಲಾವೃತಗೊಂಡಿದ್ದು, ಹಲವೆಡೆ ರಸ್ತೆಗಳು ಸಂಪರ್ಕ ಕಡಿದುಕೊಂಡಿವೆ. ರೋಹ್ತಾಸ್, ಸಸಾರಾಮ್, ಮೋತಿಹಾರಿ ಮತ್ತು ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (State Disaster Response Force) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (National Disaster Response Force) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.

ರೋಹ್ತಾಸ್ ಜಿಲ್ಲೆಯ ಡೆಹ್ರಿ ಪ್ರದೇಶದ ಜಮುಹಾರ್‌ನಲ್ಲಿ ತೀವ್ರ ಪ್ರವಾಹ ಉಂಟಾಗಿದ್ದು ನಾರಾಯಣ್ ವೈದ್ಯಕೀಯ ಕಾಲೇಜು ಜಲಾವೃತಗೊಂಡಿತ್ತು. ಇದರಿಂದ ಹಲವಾರು ವೈದ್ಯರು, ರೋಗಿಗಳು ಮತ್ತು ಸಿಬ್ಬಂದಿ ಕಾಲೇಜಿನೊಳಗೆ ಸಿಲುಕಿಕೊಂಡರು. ರಕ್ಷಣಾ ತಂಡಗಳು ಇವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿವೆ.

ಪ್ರವಾಹದ ಭೀಕರತೆಯನ್ನು ತೋರಿಸುವ ವಿಡಿಯೊ:



ಪ್ರವಾಹ ಉಂಟಾಗಿರುವ ಪ್ರದೇಶಕ್ಕೆ ಭೇಟಿ ನೀಡಿರುವ ಡೆಹ್ರಿ ಎಸ್‌ಡಿಎಂ ನೀಲೇಶ್ ಕುಮಾರ್ ಹಾಗೂ ಆರ್‌ಜೆಡಿ ಶಾಸಕ ಫತೇಹ್ ಬಹದ್ದೂರ್ ಸಿಂಗ್, ನೀರನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ಹತ್ತಿರದ ಚೆಕ್ ಡ್ಯಾಂ ನೀರು ಪ್ರವಾಹಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಪರಿಶೀಲಿಸುತ್ತಿರುವುದಾಗಿ ಹೇಳಿದರು.

ಸಸಾರಾಮ್‌ನ ಜೈಲು ಸಂಕೀರ್ಣಕ್ಕೆ ಪ್ರವಾಹದ ನೀರು ನುಗ್ಗಿದ್ದು, ಜೈಲು ಸಿಬ್ಬಂದಿ ಮತ್ತು ಕೈದಿಗಳು ಸಂಕಷ್ಟಕ್ಕೆ ಸಿಲುಕಿದರು. ನೀರು ಕೋಣೆಗಳಿಗೂ ನುಗ್ಗಿ ಜೈಲು ಆವರಣವನ್ನು ಸಂಪೂರ್ಣವಾಗಿ ಮುಳುಗಿಸಿದೆ ಎನ್ನಲಾಗಿದೆ.



ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿ ಪ್ರದೇಶವು ದ್ವೀಪದಂತಾಗಿದ್ದು, ರಸ್ತೆ, ವಸತಿ, ಮಾರುಕಟ್ಟೆ ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿ ಜಿಲ್ಲಾಡಳಿತವು ಆರೆಂಜ್ ಅಲರ್ಟ್ ಘೋಷಿಸಿದ್ದು, ಅಕ್ಟೋಬರ್ 6 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಗೋಪಾಲ್‌ಗಂಜ್ ಜಿಲ್ಲೆಯ ಮಾಡೆಲ್ ಸದರ್ ಆಸ್ಪತ್ರೆಯು ಜಲಾವೃತವಾಗಿದ್ದು ತುರ್ತು ವಾರ್ಡ್ ವರೆಗೂ ನೀರು ನುಗ್ಗಿದೆ. ರೋಗಿಗಳು, ಸಹಾಯಕರು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರವಾಹ ನೀರಲ್ಲೇ ನಿಂತು ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ವೈದ್ಯಕೀಯ ತ್ಯಾಜ್ಯಗಳು ಪ್ರವಾಹ ನೀರಿನಲ್ಲಿ ತೇಲುತ್ತಿದ್ದು, ಸೋಂಕಿನ ಭೀತಿ ಉಂಟು ಮಾಡಿದೆ.

ಕಳೆದ ತಿಂಗಳಷ್ಟೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಪೂರ್ಣಗೊಂಡಿದ್ದ ಹೊಸ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿದ್ದರು. ಇದರಿಂದಾಗಿ ತುರ್ತು ಸೇವೆಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯ ಆಮ್ಲಜನಕ ಸಾಂದ್ರಕಗಳು, ವೀಲ್‌ಚೇರ್‌ಗಳು ಮತ್ತು ಸ್ಟ್ರೆಚರ್‌ಗಳಂತಹ ಅಗತ್ಯ ಉಪಕರಣಗಳು ಪ್ರವಾಹ ನೀರಿನಲ್ಲಿ ಮುಳುಗಿದ್ದು, ಆಸ್ಪತ್ರೆಯ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ.

ಗೋಪಾಲ್‌ಗಂಜ್‌ನ ಮಿಂಜ್ ಸ್ಟೇಡಿಯಂ ರಸ್ತೆ, ನಗರ್ ಥಾಣಾ ಚೌಕ್ ಮತ್ತು ಪುರಾನಿ ಚೌಕ್ ಸೇರಿದಂತೆ ಹಲವಾರು ರಸ್ತೆ, ವಸತಿ ಪ್ರದೇಶಗಳು ಮುಳುಗಡೆಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: Cylinder Blast: ಹೊಸಪೇಟೆ ಸಿಲಿಂಡರ್ ಸ್ಫೋಟ ದುರಂತ: ಮೃತರ ಸಂಖ್ಯೆ 4ಕ್ಕೇರಿಕೆ, ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಈ ನಡುವೆ ಪಶ್ಚಿಮ ಜಾರ್ಖಂಡ್ ಮತ್ತು ದಕ್ಷಿಣ ಬಿಹಾರದ ಕೆಲವು ಭಾಗಗಳಲ್ಲಿ ಸೋಮವಾರದ ವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಬಂಕುರಾದಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಕಚೇರಿ ವರದಿ ಮಾಡಿದೆ.