ಗ್ಯಾಂಗ್ಟಾಕ್, ಸೆ. 25: ಭಾರಿ ಮಳೆಯಿಂದಾಗಿ ಸಿಕ್ಕೊಂನ ರಿಂಬಿ ಗ್ರಾಮದಲ್ಲಿ ಬೆಟ್ಟ ಕುಸಿದ ನಂತರ ಭಾರಿ ಭೂಕುಸಿತ (Landslide in Sikkim) ಸಂಭವಿಸಿದೆ. ಭೂಕುಸಿತದಿಂದ ವ್ಯಾಪಕ ಹಾನಿಯಾಗಿದ್ದು, ಬಂಡೆಗಳು, ಮಣ್ಣು ಮತ್ತು ಭಗ್ನಾವಶೇಷಗಳು ಗ್ರಾಮದ ಕಡೆಗೆ ನುಗ್ಗಿ ಹಲವು ಮನೆಗಳು ನಾಶವಾಗಿವೆ. ಪಶ್ಚಿಮ ಸಿಕ್ಕಿಂನ ಯುಕ್ಸಮ್-ತಾಶಿಡಿಂಗ್ ಪ್ರದೇಶದ ರಿಂಬಿ ಗ್ರಾಮದ ಕೆಲವು ಭಾಗಗಳಲ್ಲಿ ಗುರುವಾರ (ಸೆಪ್ಟೆಂಬರ್ 24) ತಡರಾತ್ರಿ ಭೂಕುಸಿತ (Landslide) ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.
ಘಟನೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಭೂಕುಸಿತದ ನಂತರ ಬೆಟ್ಟದ ಇಳಿಜಾರಿನಲ್ಲಿ ಅಪಾರ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ಗ್ರಾಮದ ಕಡೆಗೆ ಹರಿಯುತ್ತಿರುವುದನ್ನು ಈ ದೃಶ್ಯಗಳು ತೋರಿಸುತ್ತವೆ. ಮಣ್ಣು, ಬಂಡೆಗಳು ವೇಗವಾಗಿ ಕೆಳಮುಖವಾಗಿ ಹರಿಯುತ್ತಿರುವುದು ಕಂಡು ಬಂದಿದೆ. ಇದು ಆ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಲ್ಲಿ ಕಳವಳವನ್ನುಂಟು ಮಾಡಿದೆ.
ಭೂಕುಸಿತದಲ್ಲಿ ಹಲವು ಮನೆಗಳು ನಾಶವಾಗಿವೆ. ಆದರೆ ನಿರಂತರ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಅಪಾಯ ಹೆಚ್ಚಾಗಿದೆ. ಹವಾಮಾನ ವೈಪರೀತ್ಯವನ್ನು ಗಮನದಲ್ಲಿಟ್ಟುಕೊಂಡು ಸುತ್ತಮುತ್ತಲಿನ ಜನರು ಎಚ್ಚರವಾಗಿರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇಲ್ಲಿದೆ ವಿಡಿಯೊ:
ರಿಂಬಿ ಪ್ರದೇಶದಲ್ಲಿ ಭೂಕುಸಿತದಿಂದ ಉಂಟಾಗಿರುವ ಅಡಚಣೆ ಇದೇ ಮೊದಲಲ್ಲ. ಇದಕ್ಕೂ ಮೊದಲು ರಿಂಬಿಗೆ ಖೇಚಿಯೋಪಲ್ರಿಯೊಂದಿಗೆ ಸಂಪರ್ಕಿಸುವ ರಸ್ತೆಯ ಒಂದು ಭಾಗವು ಭೂಕುಸಿತದ ನಂತರ ಕೊಚ್ಚಿಹೋಗಿತ್ತು. ರಾಜ್ಯಾದ್ಯಂತ ಮಳೆಗಾಲದಲ್ಲಿ ಹಾನಿಗೊಳಗಾದ ರಸ್ತೆಗಳ ಪರಿಶೀಲನೆಯನ್ನು ಸೆಪ್ಟೆಂಬರ್ 21ರಂದು ಪ್ರಾರಂಭಿಸಲಾಯಿತು ಎಂದು ಸಿಕ್ಕಿಂ ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ರಸ್ತೆ ಸಂಪರ್ಕವನ್ನು ಶೀಘ್ರವಾಗಿ ಪುನಃಸ್ಥಾಪಿಸುವಂತೆ ಹಾಗೂ ಅಪಾಯಕ್ಕೆ ಒಳಗಾಗಬಹುದಾದ ಸ್ಥಳಗಳಲ್ಲಿ ಸುರಕ್ಷತಾ ಅಪಾಯಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೇರಳಂನಲ್ಲಿ ಮತ್ತೆ ಭಾರಿ ಮಳೆ: ಭೂಕುಸಿತ, ಪ್ರವಾಹದಿಂದ 5 ಮಂದಿ ಸಾವು
ಯುಕ್ಸೋಮ್-ತಾಶಿಡಿಂಗ್ ವಿಧಾನಸಭಾ ಕ್ಷೇತ್ರದ ರಿಂಬಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಹಾನಿಗೊಳಗಾದ ರಸ್ತೆಗಳನ್ನು ಸೇರಿ ಹಲವು ಸ್ಥಳಗಳಿಗೆ ರಸ್ತೆಗಳು ಮತ್ತು ಸೇತುವೆಗಳ ಸಚಿವ ಎನ್.ಬಿ. ದಹಾಲ್ ಭೇಟಿ ನೀಡಿದರು. ರಸ್ತೆಗಳಿಗೆ ಆಗಿರುವ ಹಾನಿಯ ಪ್ರಮಾಣವನ್ನು ಅಂದಾಜಿಸುವುದು ಮತ್ತು ಮುಂದೆ ಸಂಭವಿಸಬಹುದಾದ ಸುರಕ್ಷತಾ ಅಪಾಯಗಳನ್ನು ಗುರುತಿಸುವುದು ಈ ಪರಿಶೀಲನೆಯ ಮುಖ್ಯ ಉದ್ದೇಶ.
ಇನ್ನು ಭೂಕುಸಿತದಿಂದ ರಿಂಬಿ ಮತ್ತು ಖೇಚಿಯೋಪಲ್ರಿ ನಡುವಿನ ರಸ್ತೆಯ ದೊಡ್ಡ ಭಾಗ ಕೊಚ್ಚಿ ಹೋಗಿದೆ. ರಿಂಬಿ ಪ್ರದೇಶದಲ್ಲಿ ಶೀಘ್ರದಲ್ಲೇ ರಸ್ತೆ ದುರಸ್ತಿ ಕಾಮಗಾರಿಗಳನ್ನು ಆರಂಭಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ನ್ಯಾಷನಲ್ ಹೈವೇಸ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ರಸ್ತೆ ಸಂಪರ್ಕವನ್ನು ಪುನಃಸ್ಥಾಪಿಸುವ ಕಾಮಗಾರಿಯನ್ನು ವೇಗಗೊಳಿಸುವಂತೆ ಸಚಿವರು ಸೂಚಿಸಿದ್ದಾರೆ.
ಈ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿರುವುದರಿಂದ, ಅಪಾಯಕ್ಕೆ ಒಳಗಾಗಬಹುದಾದ ಪ್ರದೇಶಗಳ ಮೇಲೆ ಅಧಿಕಾರಿಗಳು ನಿಕಟವಾಗಿ ನಿಗಾ ವಹಿಸುತ್ತಿದ್ದಾರೆ. ಅಲ್ಲದೆ, ಸ್ಥಳೀಯ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.