ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ನಡೆಯುತ್ತಿರುವ ಕಿಶ್ತ್ವಾರ್ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹಲವು ಸೈನಿಕರು ಭಾಗಿಯಾಗಿದ್ದರು. ಆದರೆ ಕಾರ್ಯಾಚರಣೆಯ ಪ್ರಮುಖ ಬಿಂದುವಾಗಿದ್ದ ಟೈಸನ್ ಧೈರ್ಯಕ್ಕೆ ಇದೀಗ ( Army Dog Tyson) ಮೆಚ್ಚುಗೆ ವ್ಯಕ್ತವಾಗಿದೆ. ಆರ್ಮಿ ಡಾಗ್ 'ಟೈಸನ್' ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಛತ್ರೂ ಪ್ರದೇಶದಲ್ಲಿನ ಭಯೋತ್ಪಾದಕರ ಅಡಗುತಾಣಕ್ಕೆ ಸೈನಿಕರನ್ನು ಕರೆದೊಯ್ದು, ಮೂವರು ಜೈಶ್-ಎ-ಮೊಹಮ್ಮದ್ ಉಗ್ರರನ್ನು ಹೊಡೆದುರುಳಿಸಲು ಭದ್ರತಾ ಪಡೆಗಳಿಗೆ ಸಹಾಯ ಮಾಡಿದೆ.
ಸೇನೆಯ 2 ಪ್ಯಾರಾ (ವಿಶೇಷ ಪಡೆ)ಯಲ್ಲಿದ್ದ ಜರ್ಮನ್ ತಳಿಯ ಟೈಸನ್, ಛತ್ರೂದ ಒರಟಾದ ಭೂಪ್ರದೇಶದಲ್ಲಿದ್ದ ಅಡಗುಣತಾಣಕ್ಕೆ ತೆರಳಿದ್ದು, ಉಗ್ರರು ಗುಂಡು ಹಾರಿಸುವಂತೆ ಪ್ರೇರೇಪಿಸಿದೆ. ಕಾಲಿಗೆ ಗುಂಡು ತಗುಲಿದ್ದರೂ ತರಬೇತಿ ಪಡೆದ ಶ್ವಾನ, ಅಡಗುತಾಣವನ್ನು ನಿಖರವಾಗಿ ಪತ್ತೆಹಚ್ಚಿ, ಉಗ್ರರನ್ನು ಹೊಡೆದುರುಳಿಸಲು ಸೈನ್ಯಕ್ಕೆ ನೆರವಾಗಿದೆ. ಕಾರ್ಯಾಚರಣೆಯ ಬಳಿಕ ವಿಮಾನದ ಮೂಲಕ ಉಧಂಪುರದಲ್ಲಿರುವ ಸೇನಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಟೈಸನ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದೆ.
ಟೈಸನ್ ಈ ವರೆಗೆ ಹಲವಾರು ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾನೆ. ಅನುಮಾನಾಸ್ಪದ ಸ್ಥಳಗಳನ್ನು ಗುರುತಿಸಲು ಮತ್ತು ಶೋಧ ಕಾರ್ಯಾಚರಣೆಗಳ ಸಮಯದಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಸಹಾಯ ಮಾಡಲು ತರಬೇತಿ ನೀಡಲಾಗಿದೆ. ಸೈನಿಕರಿಗೆ ಕಷ್ಟಕರವಾದ ಭೂಪ್ರದೇಶಗಳಲ್ಲಿ ಅಡಗುತಾಣಗಳನ್ನು ಪತ್ತೆಹಚ್ಚಲು ವಿಶೇಷವಾಗಿ ತರಬೇತಿ ನೀಡಲಾಗಿದೆ.
ಕಳೆದ ಎರಡು ವರ್ಷಗಳಿಂದ ಈ ಪ್ರದೇಶದಲ್ಲಿ ಪರಾರಿಯಾಗಿದ್ದ ಮತ್ತು ಕನಿಷ್ಠ 20 ಬಾರಿ ಪ್ರಾಣಾಪಾಯದಿಂದ ಪಾರಾಗಿದ್ದ ಜೆಇಎಂ ಭಯೋತ್ಪಾದಕ ಸೈಫುಲ್ಲಾ ಸೇರಿದಂತೆ ಮೂವರು ಉಗ್ರರನ್ನು ಭದ್ರತಾಪಡೆಗಳು ಹೊಡೆದುರುಳಿಸಿವೆ. ಹತ್ಯೆಗೀಡಾದ ಭಯೋತ್ಪಾದಕರ ವಶದಿಂದ ಎರಡು ಎಕೆ-47 ರೈಫಲ್‌ಗಳು, ಮದ್ದುಗುಂಡುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರನ್ನು ಹೊಡೆದುರುಳಿಸಿದವರಲ್ಲಿ ಜಮ್ಮು-ಕಾಶ್ಮೀರ ಪೊಲೀಸರು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ವಿಶೇಷ ಪಡೆಗಳು ಸೇರಿವೆ.
ಜಾಮೀನು ಪಡೆದು ಪರಾರಿಯಾಗಿದ್ದ ಶಂಕಿತ ಉಗ್ರ ಬೆಂಗಳೂರಿನಲ್ಲಿ ಸೆರೆ
ಚತ್ರೂ ಪಟ್ಟಿಯ ಪಾಸರ್ಕುಟ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರಲ್ಲಿ ಜೈಶ್-ಎ-ಮೊಹಮ್ಮದ್ ಕಮಾಂಡರ್ ಸೈಫುಲ್ಲಾ ಸಹ ಸೇರಿದ್ದಾನೆ. ಪಾಕಿಸ್ತಾನಿ ಪ್ರಜೆಯಾಗಿರುವ ಸೈಫುಲ್ಲಾ, ದೋಡಾ-ಕಿಶ್ತ್ವಾರ್ ಪ್ರದೇಶದಲ್ಲಿ ವರ್ಷಗಳಿಂದ ಸಕ್ರಿಯನಾಗಿದ್ದನು ಮತ್ತು ಅನೇಕ ದಾಳಿಗಳೊಂದಿಗೆ ಸಂಬಂಧ ಹೊಂದಿದ್ದನು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.