ರಾಂಚಿ, ಅ. 27: ಒಂದೆಡೆ ಭಾರತದ ವೈದ್ಯಕೀಯ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸಿ ಚಿಕಿತ್ಸೆ ಪಡೆಯಲು ಇಲ್ಲಿಗೆ ಆಗಮಿಸುವ ವಿದೇಶಿಗರು, ಇನ್ನೊಂದೆಡೆ ಕನಿಷ್ಠ ಮೂಲ ಸೌಕರ್ಯವೂ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳು-ಸದ್ಯ ದೇಶದಲ್ಲಿ ಈ ಎರಡು ವೈರುಧ್ಯಗಳು ಕಾಣ ಸಿಗುತ್ತಿವೆ. ಇದೀಗ ದೇಶದ ಕೆಲವೆಡೆ ವೈದ್ಯಕೀಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದನ್ನು ತಿಳಿಸುವ ಘಟನೆಯೊಂದು ನಡೆದಿದೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಸ್ಪತ್ರೆಯಿಂದಲೇ ನವಜಾತ ಶಿಶುವನ್ನು ಬೀದಿ ನಾಯೊಂದು ಕಚ್ಚಿಕೊಂಡು ಹೋಗಿದ್ದು, ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ದೇಶವೇ ಬೆಚ್ಚಿ ಬಿದ್ದಿದೆ. ಜಾರ್ಖಂಡ್ನಲ್ಲಿ ಈ ಧಾರುಣ ಘಟನೆ ನಡೆದಿದ್ದು, ನಾಪತ್ತೆಯಾದ ಶಿಶುವಿಗಾಗಿ ಹುಡುಕಾಟ ನಡೆಯುತ್ತಿದೆ.
ಜಾರ್ಖಂಡ್ನ ಪಲಾಮುವಿನಲ್ಲಿರುವ ಮೆದಿನಿರಾಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ನುಗ್ಗಿ ಬೀದಿ ನಾಯಿ ಶಿಶುವನ್ನು ಕೊಂಡೊಯ್ದಿದೆ. ಅಧಿಕಾರಿಗಳು ಮಂಗಳವಾರ (ಅಕ್ಟೋಬರ್ 27) ಶಿಶುವಿಗಾಗಿ ವ್ಯಾಪಕ ಶೋಧ ನಡೆಸಿದ್ದಾರೆ. ವೈರಲ್ ವಿಡಿಯೊದಲ್ಲಿ ಆಸ್ಪತ್ರೆಯ ಆವರಣದಲ್ಲಿ ಬೀದಿ ನಾಯಿಯೊಂದು ನವಜಾತ ಶಿಶುವನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿದೆ. ಆಸ್ಪತ್ರೆ ಆವರಣದ ಸೇರಿ ಸುತ್ತಮುತ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಆದರೆ ನವಜಾತ ಶಿಶು ಅಥವಾ ಶ್ವಾನದ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಶಿಶುವನ್ನು ಹೊತ್ತೊಯ್ದ ಬೀದಿ ನಾಯಿ:
ಬೆಚ್ಚಿ ಬೀಳಿಸಿದ ವಿಡಿಯೊ
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಶಿಶುವನ್ನು ಕಚ್ಚಿಕೊಂಡು ಓಡುತ್ತಿರುವ ಶ್ವಾನದ ವಿಡಿಯೊ ಕಿಚ್ಚು ಹಚ್ಚಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ವಿಡಿಯೊ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ವಿರಿದ್ಧ ಕಿಡಿಕಾರಿದ್ದಾರೆ. ಆಸ್ಪತ್ರೆಯಿಂದ ಶಿಶುವನ್ನು ನಾಯಿ ಕೊಂಡೊಯ್ದಿರುವ ಘಟನೆ ಆಘಾತ ತಂದಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ದಾಳಿ: ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ಶ್ವಾನಗಳ ಅಟ್ಯಾಕ್, ಗಂಭೀರ ಗಾಯ
ಡೆಪ್ಯುಟಿ ಕಮಿಷನರ್ ದಿಲೀಪ್ ಪ್ರತಾಪ್ ಸಿಂಗ್ ಶೆಖಾವತ್ ಈ ಬಗ್ಗೆ ಮಾತನಾಡಿ, ʼʼಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೊ ನಮ್ಮ ಗಮನಕ್ಕೆ ಬಂದಿದೆ. ಸ್ಥಳೀಯಾಡಳಿತ ಈಗಾಗಲೇ ತನಿಖೆಗೆ ಆದೇಶ ಹೊರಡಿಸಿದೆ. ಪೊಲೀಸರ ತಂಡದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆʼʼ ಎಂದು ಹೇಳಿದ್ದಾರೆ.
"ನಾವು ಆಸ್ಪತ್ರೆ ಆವರಣದ ವಿವಿಧ ಭಾಗಗಳಲ್ಲಿ, ಮರಣೋತ್ತರ ಪರೀಕ್ಷಾ ಕೊಠಡಿಯ ಸುತ್ತಮುತ್ತಲ ಪ್ರದೇಶ ಹಾಗೂ ಹತ್ತಿರದ ಪೊದೆಗಳ ನಡುವೆಯೂ ನವಜಾತ ಶಿಶುವಿಗಾಗಿ ಹುಡುಕಾಟ ನಡೆಸಿದ್ದೇವೆ. ಆದರೆ ಪತ್ತೆಯಾಗಿಲ್ಲ" ಎಂದು ಶೇಖಾವತ್ ಪಿಟಿಐಗೆ ತಿಳಿಸಿದ್ದಾರೆ.
ಆರಂಭಿಕ ಹುಡುಕಾಟದ ನಂತರವೂ ಮಗು ಮತ್ತು ಶ್ವಾನ ಪತ್ತೆಯಾಗದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ಸೂಕ್ತ ನಿರ್ದೇಶನ ನೀಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಆಸ್ಪತ್ರೆಯ ಅಧೀಕ್ಷಕರು, ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಹಾಗೂ ಮೆದಿನಿನಗರ ಮಹಾನಗರ ಪಾಲಿಕೆಯ ತಂಡದೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಲಾಗಿದೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ: ಮೇಜಿನ ಮೇಲಿದ್ದ ಆಹಾರ ತಿಂದ ಬೀದಿ ನಾಯಿ
ಆಸ್ಪತ್ರೆ ಆವರಣದ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲು, ಶ್ವಾನ ದಳವನ್ನು ನಿಯೋಜಿಸಲು ಹಾಗೂ ಸ್ಥಳೀಯ ಆರೋಗ್ಯ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲು ಸಲಹೆ ನೀಡಲಾಗಿದೆ. ನವಜಾತ ಶಿಶು ಮತ್ತು ನಾಯಿಯನ್ನು ಪತ್ತೆಹಚ್ಚಲು, ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.