ಶ್ರೀನಗರ, ನ. 18: ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್‌ನನ್ನು (Lateef Bhat) ಭದ್ರತಾ ಪಡೆಯ ಸಿಬ್ಬಂದಿ ಬುಧವಾರ (ನವೆಂಬರ್ 18) ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಎನ್‌ಕೌಂಟರ್ ನಡೆಸಿ ಹೊಡೆದುರುಳಿಸಿದೆ. ಆ ಮೂಲಕ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾಕ್ಕೆ (Lashkar-e-Taiba) ಬಲವಾದ ಹೊಡೆತ ನೀಡಿದೆ. ಕಾಶ್ಮೀರ ಕಣಿವೆಯಲ್ಲಿದ್ದ ಲಷ್ಕರ್-ಎ-ತೊಯ್ಬಾದ ಕೊನೆಯ ಸ್ಥಳೀಯ ಸಕ್ರಿಯ ಸದಸ್ಯ ಎನಿಸಿಕೊಂಡಿದ್ದ 22 ವರ್ಷದ ಲತೀಫ್ ಭಟ್ ಅನೇಕ ದಾಳಿಯನ್ನು ಸಂಘಟಿಸುವ ಮೂಲಕ ದೇಶಕ್ಕೆ ತಲೆನೋವಾಗಿ ಪರಿಣಮಿಸಿದ್ದ. ಅಲ್ಲದೆ ನವೆಂಬರ್ 11ರಂದು ಕುಲ್ಗಾಮ್‌ನಲ್ಲಿ ನಡೆದ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ನಡೆದ ದಾಳಿಯಲ್ಲೂ ಈತನ ಕೈವಾಡವಿತ್ತು. ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು.
ಅಚ್ಚರಿ ಎಂದರೆ 2025ರ ನವೆಂಬರ್ 18ರಂದು ಲತೀಫ್ ಭಟ್ ಎಲ್‌ಇಟಿ ಉಗ್ರ ಸಂಘಟನೆಗೆ ಸೇರಿದ್ದ. ಸರಿಯಾಗಿ 1 ವರ್ಷದ ಬಳಿಕ ಇದೀಗ ಆತ ಹತನಾಗಿದ್ದು, ಇದನ್ನು ಭಾರತೀಯ ಸೇನೆಗೆ ದೊರೆತ ಮಹತ್ವದ ಜಯ ಎಂದೇ ಪರಿಗಣಿಸಲಾಗಿದೆ. ಆತನ ಸಹಚರ ಉಮರ್ ನಿಸಾರ್ ದರ್ ನವೆಂಬರ್ 16ರಂದು ನಡೆದ ಕಾರ್ಯಾಚರಣೆಯಲ್ಲಿ ಹತನಾಗಿದ್ದ. ಕೊನೆಯ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದ ಲತೀಫ್ ಭಟ್ ಬುಧವಾರ ಕೊನೆಗೂ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.
ಲತೀಫ್ ಭಟ್ ಹತ್ಯೆ ಕಾರ್ಯಾಚರಣೆ:
ಉಗ್ರ ವಾದ ತಿರಸ್ಕರಿಸಿದ ಯುವ ಜನತೆ
ಸದ್ಯ ಕಣಿವೆ ರಾಜ್ಯ ಉಗ್ರವಾದದ ನೆರಳಿನಿಂದ ಹೊರ ಬರುತ್ತಿದ್ದು, ಯುವ ಜನತೆ ಇದನ್ನು ತಿರಸ್ಕರಿಸುತ್ತಿರುವುದು ಇತ್ತೀಚಿನ ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತಿದೆ. ಈ ವರ್ಷ ಒಬ್ಬನೇ ಒಬ್ಬ ಉಗ್ರ ಸಂಘಟನೆಗೆ ಸೇರಿಲ್ಲ ಎಂದು ಮೂಲಗಳು ತಿಳಿಸಿವೆ. ʼʼಪಾಕಿಸ್ತಾನ ಆನ್‌ಲೈನ್ ಮೂಲಕ ಆಮಿಷ ಒಡ್ಡುವ ಹೊರತಾಗಿಯೂ ಯುವ ಜನತೆ ಉಗ್ರ ಸಂಘಟನೆಯತ್ತ ಆಸಕ್ತಿ ತೋರಿಸದೇ ಇರುವುದು ಜಮ್ಮು ಕಾಶ್ಮೀರ ಬದಲಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ʼʼಕಣಿವೆಯ ಯುವ ಜನತೆ ಉಗ್ರ ವಾದ ಮತ್ತು ಪ್ರತ್ಯೇಕವಾದವನ್ನು ಸರಾಸಗಟಾಗಿ ತಿರಸ್ಕರಿಸುತ್ತಿದ್ದಾರೆ. ಅವರೀಗ ಪಾಕಿಸ್ತಾನದ ನಿಜ ಮುಖ ನೋಡುತ್ತಿದ್ದಾರೆ. ಉಗ್ರರು ಹೇಗೆ ಜಮ್ಮು ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಮಾಯಕರನ್ನು ಕೊಲೆ ಮಾಡುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರೀಗ ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆʼʼ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೈದ್ ಹೇಳಿದ್ದಾರೆ. "ಪಾಕಿಸ್ತಾನ ಮತ್ತು ಅದರ ಭಯೋತ್ಪಾದಕ ಸಂಘಟನೆಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ತಮ್ಮನ್ನು ಕೇವಲ ಬಲಿಪಶುಗಳನ್ನಾಗಿ ಬಳಸಿಕೊಳ್ಳುವುದನ್ನು ಇವರು ಇನ್ನು ಮುಂದೆ ಬಯಸುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.
ನಿಖರ ದಾಳಿಗಳ ವರ್ಷ
ಭಯೋತ್ಪಾದನೆಯ ನಿಗ್ರಹಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆ, ಸಿಆರ್‌ಪಿಎಫ್ (CRPF) ಮತ್ತು ಗುಪ್ತಚರ ಸಂಸ್ಥೆಗಳ ನಡುವಿನ ಅಭೂತಪೂರ್ವ ಸಮನ್ವಯವೇ ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಭಯೋತ್ಪಾದಕರಿಗೆ ಆಶ್ರಯ ನೀಡಲು ನಿರಾಕರಿಸುತ್ತಿರುವ ಸ್ಥಳೀಯರು ಒದಗಿಸಿದ ನಿಖರ ಮಾಹಿತಿಯೂ ಪ್ರಮುಖ ಪಾತ್ರ ವಹಿಸಿದೆ. ಈ ಮೂಲಕ 2026ರಲ್ಲಿ ಲಷ್ಕರ್-ಎ-ತೈಬಾ ಹಾಗೂ ಪಾಕಿಸ್ತಾನ ಮೂಲದ ಮತ್ತೊಂದು ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‌ನ ಬೆನ್ನುಲುಬು ಮುರಿಯಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ವರ್ಷದ ಫೆಬ್ರವರಿ 22ರಂದು ಕಿಶ್ತ್ವಾರ್‌ನ ಹಿಮಾವೃತ ಕಾಡುಗಳಲ್ಲಿ ಉಗ್ರ ದಮನದ ಈ ಮಹತ್ವದ ಕಾರ್ಯಾಚರಣೆ ಪ್ರಾರಂಭವಾಯಿತು. 5 ವರ್ಷಗಳ ಹಿಂದೆ ಒಳನುಸುಳಿದ ಜೈಶ್ ಭಯೋತ್ಪಾದಕ ಸೈಫುಲ್ಲಾನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿ ಕಾರ್ಯಾಚರಣೆಯ ಶುಭಾರಂಭ ಮಾಡಿದವು. ಈತ ನಾಲ್ವರು ಸೈನಿಕರು ಹುತಾತ್ಮರಾದ 2024ರ ದಾಳಿ ಸೇರಿ ಹಲವು ದಾಳಿಗಳ ಮಾಸ್ಟರ್ ಮೈಂಡ್ ಎನಿಸಿಕೊಂಡಿದ್ದ.
ಅದಾದ ಬಳಿಕ ಉಗ್ರರ ಮೇಲಿನ ಒತ್ತಡ ಮುಂದುವರಿಯಿತು. ಜುಲೈ 8ರಂದು ಸೇನೆಗಳು ಶೋಪಿಯಾನ್‌ನಲ್ಲಿ ಲಷ್ಕರ್ ಭಯೋತ್ಪಾದಕ ಜಾಕಿರ್ ಅಹ್ಮದ್ ಗನೈನನ್ನು ಮಟ್ಟ ಹಾಕುವ ಮೂಲಕ ಎಲ್‌ಇಟಿಯ ದಕ್ಷಿಣ ಕಾಶ್ಮೀರ ಜಾಲದ ಪ್ರಮುಖ ಸಂಪರ್ಕವನ್ನು ಕಡಿತಗೊಳಿಸಿತು. ಸೆಪ್ಟೆಂಬರ್ 4ರಂದು 2022ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಹಿರಿಯ ಎಲ್‌ಇಟಿ ಕಮಾಂಡರ್‌ಗಳಲ್ಲಿ ಓರ್ವ ಮತ್ತು 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದ ಪಾಕಿಸ್ತಾನಿ ಪ್ರಜೆ ಯಾಸಿರ್ ಬುಡ್ಗಾಮ್‌ನಲ್ಲಿ ಸಾವನ್ನಪ್ಪಿದ.
ಭಯೋತ್ಪಾಕದ ಸಂಘಟನೆ ಸೇರಿ ಸರಿಯಾಗಿ ಒಂದು ವರ್ಷಕ್ಕೆ ಲಷ್ಕರ್ ಉಗ್ರ ಲತೀಫ್ ಭಟ್ ಎನ್‌ಕೌಂಟರ್
ಅದಾಗಿ 25 ದಿನಗಳ ನಂತರ ಭದ್ರತಾ ಪಡೆ ಸಿಬ್ಬಂದಿ ಭರ್ಜರಿ ತಿಮಿಂಗಿಲವನ್ನೇ ಬೇಟೆಯಾಡಿದರು. ಬುಡ್ಗಮ್‌ನ ಗುರುವಾತ್‌ಕಾಲನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಆಸಿಫ್ ಫೌಜಿ ಅಥವಾ ಹಶೀಮ್ ಮೂಸಾ ಎಂದೇ ಕರೆಯಲ್ಪಡುವ ಮೂಸಾನನ್ನು ಹತ್ಯೆಗೈದರು. ಪಾಕಿಸ್ತಾನ ಸೇನೆಯ ಕಮಾಂಡೋ ಆಗಿದ್ದ ಮೂಸಾ, ನಿವೃತ್ತಿಯ ನಂತರ ಲಷ್ಕರ್-ಎ-ತೈಬಾ ಸೇರಿದ್ದ. ಇವನು 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯ ಪ್ರಮುಖ ಸಂಚುಕೋರನಾಗಿದ್ದ.
ಅಕ್ಟೋಬರ್ 12ರಂದು ಪಾಕ್ ಆಕ್ರಮಿತ ಕಾಶ್ಮೀರದಿಂದ ಒಳನುಸುಳಲು ಯತ್ನಿಸುತ್ತಿದ್ದಾಗ ನಿಯಂತ್ರಣ ರೇಖೆಯ ಬಳಿಯ ಪೂಂಚ್‌ನ ಕೆ.ಜಿ. ಸೆಕ್ಟರ್‌ನಲ್ಲಿ ಲ್ಯಾಂಡ್‌ಮೈನ್ ಸ್ಫೋಟಗೊಂಡು ಲಷ್ಕರ್-ಎ-ತೈಬಾದ ಉಗ್ರ ಮುಹಮ್ಮದ್ ಫೈಜಾನ್ ಸೇರಿ ಒಟ್ಟು ನಾಲ್ವರು ಉಗ್ರರು ಹತರಾದರು. ಇದರೊಂದಿಗೆ ಭಾರತದೊಳಗೆ ಉಗ್ರರನ್ನು ಕಳಿಸುವ ಪಾಕಿಸ್ತಾನ ಸಂಚನ್ನು ಭಾರತೀಯ ಪಡೆಗಳು ವಿಫಲಗೊಳಿಸಿದವು.